ಬೆಂಗಳೂರು : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಹಮ್ಮಿಕೊಳ್ಳಲಿರುವ ‘ಪ್ರಜಾಸೇವೆ ಅಭಿಯಾನ’ ರಾಜ್ಯಾದ್ಯಂತ ಸೆ.5 ರಿಂದ ಆರಂಭವಾಗಲಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳ ಎಲ್ಲಾ ಶನಿವಾರಗಳಂದು ಈ ಪ್ರಜಾಸೇವೆ (ಜನಸ್ಪಂದನ) ಅಭಿಯಾನ ಸಭೆಗಳನ್ನು ಆಯೋಜಿಸಲಾಗುತ್ತದೆ.
ಸಾರ್ವಜನಿಕ ಅರ್ಜಿಗಳ ನಿರ್ವಹಣೆ ಮತ್ತು ಸೇವೆ:
ಸಭೆಯ ಸ್ಥಳಗಳಲ್ಲಿ ನಾಗರಿಕರಿಂದ ಅರ್ಜಿ ಹಾಗೂ ದೂರುಗಳನ್ನು ಸ್ವೀಕರಿಸಲು ‘ಗ್ರಾಮ ಒನ್’ ಮತ್ತು ‘ಕರ್ನಾಟಕ ಒನ್’ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನಾಗರಿಕರಿಗೆ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕಂಪ್ಯೂಟರ್ ಹಾಗೂ ಆಪರೇಟರ್ಗಳ ಲಭ್ಯತೆಯನ್ನು ಜಿಲ್ಲಾಧಿಕಾರಿಗಳ ಹಂತದಲ್ಲೇ ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಜನಸ್ಪಂದನ ದಿನದಂದು ಸ್ವೀಕರಿಸುವ ದೂರುಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡಲು ಎರಡು ಪ್ರತ್ಯೇಕ ಸರದಿ ವ್ಯವಸ್ಥೆ ಮಾಡಲಾಗುತ್ತದೆ.
ಸರದಿ 1 : ಹೊಸ ದೂರುಗಳು: ಸಾರ್ವಜನಿಕರು ಮೊದಲ ಬಾರಿಗೆ ಸಲ್ಲಿಸುವ ಅರ್ಜಿಗಳ ನಿರ್ವಹಣೆ.
ಸರದಿ 2 : ಇತ್ಯರ್ಥವಾಗದ ತೃಪ್ತಿಕರವಾಗಿ ಇತ್ಯರ್ಥವಾಗದ ದೂರುಗಳು: ಐಪಿಜಿಆರ್ಎಸ್ ಪೋರ್ಟಲ್ನಲ್ಲಿ ದಾಖಲಾಗಿ, ನಿಗದಿತ 21 ದಿನಗಳ ಅವಧಿ ಮುಗಿದರೂ ಸೂಕ್ತ ಪ್ರತಿಕ್ರಿಯೆ ಸಿಗದ ದೂರುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ.
ಈಗಾಗಲೇ ನಿರ್ದೇಶಿಸಿರುವಂತೆ ಜನಸ್ಪಂದನಾ ಸಭೆಗಳನ್ನು ಆಯೋಜಿಸುವ ದಿನದಂದು ಸರ್ಕಾರಿ ಯೋಜನೆಗಳ ಬಗ್ಗೆ ನಾಗರೀಕರಿಗೆ ಮಾಹಿತಿ ಪ್ರಸಾರ ಮಾಡಲು ವಿವಿಧ ಸರ್ಕಾರಿ ಇಲಾಖೆಗಳ ಅಡಿಯಲ್ಲಿ ಲಭ್ಯವಿರುವ ಐ.ಇ.ಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಅನುದಾನವನ್ನು ಉಪ ವಿಭಾಗಾಧಿಕಾರಿಗಳು ಬಳಸಿಕೊಳ್ಳಬೇಕು.
ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಎರಡೂ ಬಗೆಯ ಜನಸ್ಪಂದನ ಸಭೆಗಳಲ್ಲಿ ಸ್ವೀಕರಿಸಲಾಗುವ ಎಲ್ಲಾ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಬುಧವಾರ ನಡೆಯುವ ಮೂರು ಹಂತದ ಪರಿಶೀಲನಾ ವ್ಯವಸ್ಥೆಯ ಮೂಲಕ ಬೆಳಿಗ್ಗೆ 9:00 ರಿಂದ 11:00: ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯತ್ ಸಿಇಒ ನೇತೃತ್ವದಲ್ಲಿ, ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00, ಉಪ ವಿಭಾಗ ಮಟ್ಟದಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಮತ್ತು ಮಧ್ಯಾಹ್ನ 3:00 ರಿಂದ ಸಂಜೆ 5:00, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಬೇಕು.
ತಮ್ಮ ದೂರಿನ ವಿಲೇವಾರಿಯಿಂದ ತೃಪ್ತರಾಗದ ಸಾರ್ವಜನಿಕರು ಈ ಪರಿಶೀಲನಾ ಸಭೆಗಳಿಗೆ ಖುದ್ದು ಹಾಜರಾಗಿ, ಅಧಿಕಾರಿಗಳ ಸಮ್ಮುಖದಲ್ಲೇ ನೇರವಾಗಿ ತಮ್ಮ ಅಹವಾಲು ಬಗೆಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಸಿಎಲ್ ಹಾಗೂ ಜಾಗೃತಿ ಅನುದಾನ:
ತಿಂಗಳ 2ನೇ ಮತ್ತು 4ನೇ ಶನಿವಾರದ ರಜಾ ದಿನಗಳಲ್ಲಿ ಕೆಲಸ ಮಾಡುವ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಸಿಬ್ಬಂದಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಹಂತದಲ್ಲೇ ಕಾಂಪೆನ್ಸೇಟರಿ ಸಿಎಲ್ ಮಂಜೂರು ಮಾಡಲು ಅವಕಾಶ ನೀಡಲಾಗಿದೆ. ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಸಿಬ್ಬಂದಿಗೆ ರಜೆ ಮಂಜೂರಾತಿ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಪ್ರಜಾ ಸೇವಾ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುಮಾ ಬಿ.ಎಸ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

