ಬೆಂಗಳೂರು : ಬಸವನಗುಡಿಯ ಕೆ.ಆರ್. ರಸ್ತೆ ಮಾರ್ಗವಾಗಿ ಬರುತ್ತಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಘರ್ಷಣೆ ಸಂಬಂಧ ಎಫ್ಐಆರ್ ದಾಖಲಾಗಿದ್ದು 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಪುನೀತ್ ಕೆರೆಹಳ್ಳಿ ಬೆಂಬಲಿಗರ ವಿರುದ್ಧ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ನೀಡಿರುವ ದೂರಿನಡಿ ಬಸವನಗುಡಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈದ್ ಮಿಲಾದ್ ಆಚರಣೆಯ ಮೆರವಣಿಗೆಯು ಕುಮಾರಸ್ವಾಮಿ ಲೇಔಟ್, ಕೋಣನಕುಂಟೆ, ಯರಬ್ ನಗರ ಮತ್ತು ಬನಶಂಕರಿ ಪ್ರದೇಶಗಳಿಂದ ಹೊರಟು ಎನ್.ಆರ್. ರಸ್ತೆ ಮೂಲಕ ವೈಎಂಸಿಎ ಕಡೆಗೆ ಬರುವ ವೇಳೆ, 3:45 ರಿಂದ 4 ಗಂಟೆಯ ಸಮಯದಲ್ಲಿ ಪೊಲೀಸರಿಗೆ 112ಕ್ಕೆ ಕರೆ ಬಂದಿದ್ದು, ಕೆಲವರು ರಸ್ತೆಯನ್ನು ತಡೆದಿದ್ದಾರೆ ಎಂದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪ, ಗುಂಪುಗಳ ನಡುವೆ ಶತ್ರುತ್ವ ಆರೋಪದಡಿ ಪುನೀತ್ ಕೆರೆಹಳ್ಳಿ, ಗೋಪಿ ಗೌಡ, ಪುನೀತ್ ಗೌಡ, ವಿನೋದ್ ನಟಯಕ್ ಹಾಗೂ ಮತ್ತಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎರಡನೇಯದಾಗಿ, ಕೊಲೆ ಯತ್ನ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಕಮಲ್ ಪಾಷಾ, ಅಬೂಬಕರ್ ಸಿದ್ದೀಕ್, ಸೈಯದ್ ಅನಾಸ್ ಎಂಬುವವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಮೂವರನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದ್ದು, ಮೂವರು ಅಪ್ರಾಪ್ತರನ್ನೂ ವಶಕ್ಕೆ ಪಡೆಯಲಾಗಿದೆ.
ಮೂರನೇಯದಾಗಿ, ಸಾರ್ವಜನಿಕ ರಸ್ತೆ ತಡೆ ಹಾಗೂ ಸಂಚಾರಕ್ಕೆ ಅಡ್ಡಿ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆ ಸ್ಥಳದಲ್ಲಿದ್ದ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಘಟನೆ ಸ್ಥಳದಲ್ಲಿ ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್ಆರ್ಪಿ ತುಕಡಿ ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಸ್ಥಳೀಯ ಪೊಲೀಸರಿಂದ ಗಸ್ತು ಮುಂದುವರಿಕೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದರು. ಪ್ರಸ್ತುತ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಯುವ ಪ್ರಯತ್ನ ನಡೆದಿದೆ. ಎರಡೂ ಕಡೆಯಿಂದಲೂ ದೂರುಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

