ಬೆಂಗಳೂರು : ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ನವದೆಹಲಿಗೆ ತೆರಳಿದ್ದು, ಸಂಪುಟದಲ್ಲಿ ಸಣ್ಣ ಮಟ್ಟದ ಬದಲಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ರಾಹುಲ್ ಗಾಂಧಿಯನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಗೇಂದ್ರ ಅವರ ಪರ ಬ್ಯಾಂಟಿಂಗ್ ಮಾಡಲಿದ್ದಾರೆ. ಹೈಕಮಾಂಡ್ ಒಪ್ಪದಿದ್ದಾಗ ರಾಜೀನಾಮೆ ಅನಿವಾರ್ಯ ಎಂಬ ಸಂದೇಶವನ್ನು ಬಿ.ನಾಗೇಂದ್ರ ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಸೆ.1ರಿಂದ ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಪಾದಯಾತ್ರೆ ಮೂಲಕ ಮುಂದುವರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಲಿಂಗಸೂಗೂರಿನಿಂದ ಆರಂಭವಾಗಿ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪಾದಯಾತ್ರೆ ಸಂಚರಿಸಿ ಸೆ.10ರವೇಳೆಗೆ ಬಳ್ಳಾರಿಯಲ್ಲಿ ಕೊನೆಗೊಳಿಸಲು ಆಲೋಚಿಸಲಾಗಿದೆ. ಹೀಗೆ ಪರಿಶಿಷ್ಟರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಕಾಂಗ್ರೆಸ್ ಪರ ಒಲವು ಇರುವ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಸಿದ್ಧವಾಗಿದ್ದು, ಇದು ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಇರುಸುಮುರುಸು ಉಂಟುಮಾಡುತ್ತಿದೆ.
ಎಂಟು ದಿನಗಳ ಕಾಲ ನಡೆದ ಸದನದಲ್ಲಿ ಯಾವುದೇ ಚರ್ಚೆಯಿಲ್ಲದೆ ನಾಗೇಂದ್ರ ರಾಜೀನಾಮೆಯೊಂದೇ ಪ್ರಮುಖ ಅಸ್ತ್ರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಹೈಕಮಾಂಡ್ ಗಮನಕ್ಕೂ ಹೋಗಿದೆ. ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳು ಜನರಿಗೆ ತಲುಪಲು ಸಾಧ್ಯವಾಗದೆ ಕೇವಲ ಒಬ್ಬರ ಸಚಿವರನ್ನು ಸಮರ್ಥಿಸಿಕೊಳ್ಳುವುದಕ್ಕಾಗಿಯೇ ಇಡೀ ಅಧಿವೇಶನ ಮೀಸಲಾಗಿದ್ದು ಹೈಕಮಾಂಡ್ ಬೇಸರಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಪಡೆದು ಪ್ರತಿಪಕ್ಷಗಳ ಬಾಯಿ ಬಂದ್ ಮಾಡಲು ಪಕ್ಷದ ಹೈಕಮಾಂಡ್ ಯೋಚಿಸಿದೆ ಎನ್ನಲಾಗದೆ.
ಈ ಮಧ್ಯೆ ಸಂಪುಟದಲ್ಲಿ ಒಂದು ಮಹಿಳಾ ಸಚಿವ ಸ್ಥಾನ ಖಾಲಿ ಇದೆ. ಈ ಮಧ್ಯೆ ಮಾಜಿ ಸಚಿವ ಎಂ. ಕೃಷ್ಣಪ್ಪ ಮತ್ತು ಉತ್ತರ ಕರ್ನಾಟಕದ ಭಾಗದ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಖಾಲಿ ಇರುವ ಒಂದು ಸ್ಥಾನ, ಸಚಿವ ನಾಗೇಂದ್ರ ರಾಜೀನಾಮೆ ಪಡೆದರೆ ಎರಡು ಸ್ಥಾನಗಳು ಖಾಲಿಯಾಗುತ್ತವೆ. ಹೀಗೆ ಸಂಪುಟಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತೂ ಸಹ ಸಿಎಂ ನವದೆಹಲಿಯಲ್ಲಿ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

