ಬೆಂಗಳೂರು : ರೈಲ್ವೆ ಹಳಿಗಳ ಪಕ್ಕದ ಪ್ರದೇಶವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಿ, ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಾದ್ಯಂತ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನದಡಿ ಬೃಹತ್ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ರೈಲ್ವೆ ಇಲಾಖೆಯ ಜಾಗದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಗಳ ಪರಿಶೀಲನೆಗಾಗಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳಿಗೆ ಕೆಳಕಂಡ ನಿರ್ದೇಶನಗಳನ್ನು ನೀಡಿದರು.
ರೈಲ್ವೆ ಹಳಿ ಮಾರ್ಗದಲ್ಲಿ ಫೆನ್ಸಿಂಗ್ ಅಳವಡಿಸಿ
ಬಳ್ಳಾರಿ ರಸ್ತೆಯ ಯಲಹಂಕ ರೈಲ್ವೆ ಕೆಳಸೇತುವೆ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ಹಾಕಿರುವುದನ್ನು ಗಮನಿಸಿ, ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ಜೊತೆಗೆ, ರೈಲ್ವೆ ಹಳಿ ಪಕ್ಕದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಮತ್ತೆ ತ್ಯಾಜ್ಯ ಬಿಸಾಡದಂತೆ ಫೆನ್ಸಿಂಗ್ ಅಳವಡಿಸುವಂತೆ ಸೂಚನೆ ನೀಡಿದರು.
ಬಳ್ಳಾರಿ ರಸ್ತೆ ಮಾರ್ಗದ ಅಲ್ಲಾಳಸಂದ್ರದಿಂದ ರೈಲ್ವೆ ಹಳಿ ಪಕ್ಕದ ಪ್ರದೇಶವನ್ನು ಎನ್‌ಜಿಒಗಳ ಸಹಯೋಗದೊಂದಿಗೆ ಸ್ವಚ್ಛಗೊಳಿಸಿ, ಸುಂದರೀಕರಣಗೊಳಿಸುವ ಮೂಲಕ ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಸೂಚಿಸಿದರು.
ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ
ಜಕ್ಕೂರು ಕಡೆಯಿಂದ ಶ್ರೀರಾಮಪುರ ಮಾರ್ಗದ ರೈಲ್ವೆ ಪರ್ಯಾಯ ರಸ್ತೆಯ ಬದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದಿರುವುದನ್ನು ಗಮನಿಸಿ, ರೈಲ್ವೆ ಮತ್ತು ಕೆ-ರೈಡ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೆಳೆದು ನಿಂತಿರುವ ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತ್ಯಾಜ್ಯ ವರ್ಗಾವಣೆ ಸ್ಥಳ ನಿರ್ಮಿಸಿ
ಥಣಿಸಂದ್ರ ಮುಖ್ಯ ರಸ್ತೆಯ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿರುವ ಪಾಲಿಕೆ ಜಾಗವನ್ನು ಬಳಸಿಕೊಂಡು, ರಸ್ತೆ ಬದಿಯಲ್ಲಿ ಆಟೋ ಟಿಪ್ಪರ್‌ನಿಂದ ಕಾಂಪ್ಯಾಕ್ಟರ್‌ಗೆ ತ್ಯಾಜ್ಯ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಕೂಡಲೇ ಈ ಜಾಗಕ್ಕೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದರು.
ಸ್ವಚ್ಛತಾ ಕಾರ್ಯ ಪರಿಶೀಲನೆ
ಹೊರ ವರ್ತುಲ ರಸ್ತೆಯ ರಾಮಮೂರ್ತಿನಗರ ಬಳಿಯ ಸರ್ವೀಸ್ ರಸ್ತೆ ಬದಿಯಲ್ಲಿ ಸಿ&ಡಿ ತ್ಯಾಜ್ಯ ತೆರವು ಕಾರ್ಯಾಚರಣೆ ನಡೆಯುತ್ತಿರುವುದನ್ನು ವೀಕ್ಷಿಸಿದ ಅವರು, ಸ್ವಚ್ಛತಾ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಸೂಚಿಸಿದರು. ಜೆಸಿಬಿ ಮೂಲಕ ತ್ಯಾಜ್ಯ ತೆರವುಗೊಳಿಸಿದ ಬಳಿಕ, ಶಿಲ್ಟ್ ಹಾಗೂ ಟ್ರ್ಯಾಕ್ಟರ್‌ಗಳನ್ನು ಬಳಸಿ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ನಿರ್ದೇಶನ ನೀಡಿದರು.
ರೈಲ್ವೆ, ಕೆ-ರೈಡ್ ಸಮನ್ವಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಿ
ಹೊರ ವರ್ತುಲ ರಸ್ತೆಯ ಸರ್ವೀಸ್ ರಸ್ತೆ ಭಾಗದುದ್ದಕ್ಕೂ ಸಿ&ಡಿ ತ್ಯಾಜ್ಯ, ಗಿಡ-ಗಂಟಿಗಳು ಹಾಗೂ ಅನುಪಯುಕ್ತ ಸಾಮಗ್ರಿಗಳಿದ್ದು, ಪೂರ್ವ ನಗರ ಪಾಲಿಕೆ ಆಯುಕ್ತರು ರೈಲ್ವೆ ಹಾಗೂ ಕೆ-ರೈಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮನ್ವಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ಕಸ್ತೂರಿನಗರ ಮೇಲ್ಸೇತುವೆಯ ಕೆಳಭಾಗದ ರೈಲ್ವೆ ಹಳಿ ಬದಿಯಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಮತ್ತೆ ತ್ಯಾಜ್ಯ ಸುರಿಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ, ಪೂರ್ವ ನಗರ ಪಾಲಿಕೆ, ಕೇಂದ್ರ ನಗರ ಪಾಲಿಕೆ, ಕೆ-ರೈಡ್ ಹಾಗೂ ಮೆಟ್ರೋ ವತಿಯಿಂದ ಕೈಗೊಳ್ಳಬೇಕಿರುವ ಕಾಮಗಾರಿಗಳು ಮತ್ತು ಕಾರ್ಯಗಳ ವಿವರಗಳನ್ನು ಪಟ್ಟಿ ಮಾಡಿ, ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಪರಿಶೀಲನೆ ವೇಳೆ ನೀಡಿದ ಇತರೆ ಪ್ರಮುಖ ನಿರ್ದೇಶನಗಳು
ಬೆನ್ನಿಗಾನಹಳ್ಳಿ ಕೆರೆಯಲ್ಲಿ ಹೂಳೆತ್ತಿ ಸ್ವಚ್ಚತಾ ಕಾರ್ಯ ನಡೆಸಲು ಸೂಚನೆ
ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಶೀಘ್ರ ಸಾರ್ವಜನಿಕ ಸೇವೆಗೆ ಸಮರ್ಪಿಸುವಂತೆ ಸೂಚಿಸಿದರು.
ಜಕ್ಕೂರು ಆರ್‌ಒಬಿ ಬಳಿ ರಸ್ತೆ ನಿರ್ಮಾಣಕ್ಕಾಗಿ ಸ್ವಲ್ಪ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವಂತೆ ಸೂಚಿಸಿದರು.
ಜಕ್ಕೂರು ಬಳಿ ಸ್ವಚ್ಛಗೊಳಿಸದ ಖಾಲಿ ನಿವೇಶನಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಓಆರ್.ಆರ್ ಬೆನ್ನಿಗನಹಳ್ಳಿ ಬಳಿಯ ಸರ್ವೀಸ್ ರಸ್ತೆ ಬದಿಯ ಚರಂಡಿಯನ್ನು ಕೆ-ರೈಡ್ ವತಿಯಿಂದ ಸ್ವಚ್ಛಗೊಳಿಸಿ ಫೆನ್ಸ್ ಅಳವಡಿಸಲು ನಿರ್ದೇಶನ ನೀಡಿದರು.

