ಬೆಂಗಳೂರು: ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಪಶು ಆಹಾರ ತಯಾರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬರೋಬ್ಬರಿ 86 ಸಾವಿರ ಮೆಟ್ರಿಕ್ ಟನ್ ಪಶು ಆಹಾರ ಕಳಪೆ ಗುಣಮಟ್ಟದ್ದಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ಕಡಿಮೆ ಗುಣಮಟ್ಟದ ಟಿಆರ್ಎಸ್ ಇದ್ದರೂ ಮೊಲಾಸಸ್ ಖರೀದಿ ಮಾಡಲಾಗಿದೆ ಎಂಬ ಆರೋಪವಿದೆ. ಟನ್ಗಟ್ಟಲೆ ಕಳಪೆ ಗುಣಮಟ್ಟದ ಪಶು ಆಹಾರವನ್ನು ಮತ್ತೆ ಘಟಕಕ್ಕೆ ವಾಪಸ್ ಕಳುಹಿಸಲಾಗಿದೆ ಎನ್ನಲಾಗಿದೆ.
ಕಳಪೆ ಗುಣಮಟ್ಟದ ಪಶು ಆಹಾರ ಸೇವನೆಯಿಂದ ಪಶುಗಳು ಅನಾರೋಗ್ಯಕ್ಕೆ ತುತ್ತಾಗಿವೆ. ಹಸುಗಳು ಗರ್ಭಧರಿಸದೆ ಸಮಸ್ಯೆ ಎದುರಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. ಎರಡು ತಿಂಗಳ ಅವಧಿಯಲ್ಲಿ ಸುಮಾರು 1,600 ಹಸುಗಳು ಮೃತಪಟ್ಟಿವೆ ಎಂಬ ಗಂಭೀರ ಆರೋಪ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಂಎಫ್ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಪಶು ಆಹಾರ ವಿಭಾಗದ ನಿರ್ದೇಶಕ ಜಯಕುಮಾರ್, ಹಿರಿಯ ಉಪನಿರ್ದೇಶಕ ಜಿ.ಎಸ್. ನಾಗೇಶ್, ಉಪ ನಿರ್ದೇಶಕ ಸೋಮನಾಥ್ ಹಾಗೂ ಪಶು ಆಹಾರ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಿ. ಮಲ್ಲಿಕಾರ್ಜುನ ಅವರನ್ನು ಅಮಾನತುಗೊಳಿಸಲಾಗಿದೆ.

