ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ ಬಳಿಕ ಹಲವು ಪ್ರಕರಣಗಳಲ್ಲಿ ಭಾಗಿಯಾರುವ ಆರೋಪಿಗಳು ಇದೇ ಮಾದರಿ ಬಳಸಿ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ.
ವಿಶೇಷ ಎಂದರೆ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯಾಗಿರುವ ಹೆಚ್.ಎಲ್. ಶಿವಕುಮಾರ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ್ ಪಾಟೀಲ್ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ 306ರಡಿ ಕ್ಷಮಾದಾನ ನೀಡುವುದು ಅಸಾಧಾರಣ ವಿವೇಚನಾ ಅಧಿಕಾರವಾಗಿದೆ. ಜೊತೆಗೆ, ಇದರ ಉದ್ದೇಶವೆಂದರೆ ಅಪರಾಧಿಯನ್ನು ಕ್ರಿಮಿನಲ್ ಹೊಣೆಗಾರಿಕೆಯಿಂದ ಆರೋಪ ಮುಕ್ತಗೊಳಿಸುವುದು ಅಲ್ಲ. ಬದಲಿಗೆ, ಲಭ್ಯವಿಲ್ಲದ ಸಾಕ್ಷ್ಯಗಳನ್ನು ಪಡೆಯುವುದಾಗಿದೆ. ಇದರಿಂದ ಪ್ರಮುಖ ಅಪರಾಧಿಗಳನ್ನು ಪ್ರಕರಣದಲ್ಲಿ ಒಳಪಡಿಸುವುದಾಗಿರಲಿದೆ ಎಂದು ಪೀಠ ಹೇಳಿದೆ.
ಈ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯಲ್ಲಿನ ದಾಖಲೆಗಳ ಪ್ರಕಾರ, ಪ್ರಮುಖ ಅಪರಾಧ ಕೃತ್ಯವಾದ ಐಪಿಸಿ ಸೆಕ್ಷನ್ 377ರ ಆರೋಪವು ಕೇವಲ 1ನೇ ಆರೋಪಿ ಸೂರಜ್ ರೇವಣ್ಣ ಮೇಲಿದೆ. 2ನೇ ಆರೋಪಿಯ ಕೃತ್ಯ ನಡೆದ ನಂತರ ಸಂತ್ರಸ್ತನಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ. ಜೊತೆಗೆ, ದೂರು ದಾಖಲಿಸದಂತೆ ನಿರ್ಬಂಧಿಸಲು ಪ್ರಯತ್ನಿಸಿದ್ದಾರೆ ಎಂಬ ಅಂಶಗಳು ಮಾತ್ರ ಇದೆ. ಆದರೆ, 2ನೇ ಆರೋಪಿಗೆ ಘಟನೆಗೆ ಕೃತ್ಯದ ನೇರ ಸಾಕ್ಷಿ ಅಲ್ಲ. ಸಂತ್ರಸ್ತ ವ್ಯಕ್ತಿ ದೂರವಾಣಿ ಮೂಲಕ ತನಗೆ ತಿಳಿಸಿದ್ದನ್ನು ಮಾತ್ರ ತಾನು ಹೇಳುವುದಾಗಿ ಅವರು ತಿಳಿಸಿದ್ದಾರೆ. ಇದು ನೇರ ಸಾಕ್ಷ್ಯವಾಗುವುದಿಲ್ಲ. ಬದಲಿಗೆ ಹೇಳಿದ್ದನ್ನು ಕೇಳಿದ ಸ್ವರೂಪದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ 2ನೇ ಆರೋಪಿಯು ಪ್ರಕರಣದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಮುಖ ಸಂಚಿನಲ್ಲಿ ಭಾಗಿಯಾಗಿಲ್ಲದಿರುವುದು ಹಾಗೂ ನೀಡಲು ಹೊರಟಿರುವ ಮಾಹಿತಿ ನೇರ ಸಾಕ್ಷ್ಯದ ಅಡಿಯಲ್ಲಿ ಬಾರದ ಕಾರಣ, ಅವರ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕೋರ್ಟ್, ಈ ಆದೇಶವನ್ನು ನೀಡಿದೆ.

