ಬೆಂಗಳೂರು: ಸಂವಿಧಾನಾತ್ಮಕ ಮೀಸಲಾತಿ ವ್ಯವಸ್ಥೆ ಹಾಗೂ ಅದರ ಫಲಾನುಭವಿಗಳ ಕುರಿತು ಕೀಳುಮಟ್ಟದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣವು 2026ರ ಆಗಸ್ಟ್ 12ರಂದು ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS)ಯ 196(1), 353(1) ಮತ್ತು 353(2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ನೆಲಮಂಗಲ ತಾಲ್ಲೂಕಿನ ಚಿಕ್ಕಮಾರನಹಳ್ಳಿ ಗ್ರಾಮದ ನಿವಾಸಿ ಅನಂತಕುಮಾರ್ ಡಿ.ಆರ್. ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. 2026ರ ಜುಲೈ 25ರಂದು ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ‘Big Bulletin – ವಿದ್ಯಾರ್ಥಿಗಳ ಪ್ರತಿಭಟನೆಗೆ ತಲೆಬಾಗಿದ ಸರ್ಕಾರ’ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದ ಅರುಣ್ ಬಡಿಗೇರ್ ಅವರು ಮೀಸಲಾತಿ ಹಾಗೂ ಅದರ ಮೂಲಕ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ಪಡೆದವರ ಸಾಮರ್ಥ್ಯ ಮತ್ತು ಗುಣಮಟ್ಟದ ಕುರಿತು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನಲ್ಲಿ, ಕಾರ್ಯಕ್ರಮದ ಸುಮಾರು 5 ನಿಮಿಷ 36 ಸೆಕೆಂಡ್‌ನಿಂದ 6 ನಿಮಿಷ 23 ಸೆಕೆಂಡ್‌ವರೆಗೆ ಮೀಸಲಾತಿ ಕುರಿತು ಹಲವು ಹೇಳಿಕೆಗಳನ್ನು ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಮೀಸಲಾತಿ ಮೂಲಕ ಶಿಕ್ಷಣ ಪಡೆದವರು ಶಿಕ್ಷಕರಾದರೆ ವಿದ್ಯಾರ್ಥಿಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಮೀಸಲಾತಿ ಮೂಲಕ ವೈದ್ಯರು, ಎಂಜಿನಿಯರ್‌ಗಳು ಹಾಗೂ ಇತರ ಹುದ್ದೆಗಳಿಗೆ ತೆರಳುವವರ ಅರ್ಹತೆ ಮತ್ತು ಗುಣಮಟ್ಟದ ಬಗ್ಗೆ ಪ್ರಶ್ನಿಸುವ ರೀತಿಯ ಹೇಳಿಕೆಗಳನ್ನು ನಿರೂಪಕರು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹೇಳಿಕೆಗಳು ಮೀಸಲಾತಿ ಮೂಲಕ ಅವಕಾಶ ಪಡೆದಿರುವ ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳು ಹಾಗೂ ಸರ್ಕಾರಿ ನೌಕರರ ಸಾಮರ್ಥ್ಯ, ಅರ್ಹತೆ ಮತ್ತು ಗುಣಮಟ್ಟವನ್ನು ಸಾಮಾನ್ಯೀಕರಿಸಿ ಪ್ರಶ್ನಿಸುವಂತಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಇಂತಹ ಹೇಳಿಕೆಗಳು ಮೀಸಲಾತಿ ವ್ಯವಸ್ಥೆ ಹಾಗೂ ಅದರ ಫಲಾನುಭವಿಗಳ ಕುರಿತು ಸಾರ್ವಜನಿಕರಲ್ಲಿ ನಕಾರಾತ್ಮಕ ಅಭಿಪ್ರಾಯ ಮತ್ತು ಪೂರ್ವಗ್ರಹ ಬೆಳೆಸುವ ಸಾಧ್ಯತೆಯಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೀಸಲಾತಿಯ ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಹಾಗೂ ಇತರ ಸಂವಿಧಾನಾತ್ಮಕ ಮೀಸಲಾತಿ ಪಡೆಯುವ ಸಮುದಾಯಗಳ ಸಾಮರ್ಥ್ಯ, ಅರ್ಹತೆ ಮತ್ತು ಘನತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಪ್ರಯತ್ನವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಇಂತಹ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.
ವಿಶೇಷವಾಗಿ, ಈ ಹೇಳಿಕೆಗಳು ಖಾಸಗಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಅಭಿಪ್ರಾಯಗಳಲ್ಲ; ಪಬ್ಲಿಕ್ ಟಿವಿಯ ಅಧಿಕೃತ ಕಾರ್ಯಕ್ರಮದಲ್ಲಿ ಪ್ರಸಾರಗೊಂಡಿದ್ದು, ಬಳಿಕ ಪಬ್ಲಿಕ್ ಟಿವಿಯ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲೂ ಪ್ರಕಟಿಸಲಾಗಿದೆ ಎಂದು ದೂರುದಾರರು ಹೇಳಿದ್ದಾರೆ. ಹೀಗಾಗಿ ನಿರೂಪಕರ ಜೊತೆಗೆ ಪಬ್ಲಿಕ್ ಟಿವಿ ಆಡಳಿತ ಮಂಡಳಿ, ಮುಖ್ಯ ಸಂಪಾದಕರು ಹಾಗೂ ಪ್ರಸಾರಕ್ಕೆ ಅನುಮೋದನೆ ನೀಡಿದ ಸಂಬಂಧಿತ ಅಧಿಕಾರಿಗಳ ಪಾತ್ರವನ್ನೂ ತನಿಖೆ ಮಾಡಬೇಕು ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಜುಲೈ 28ರಂದು ದೂರು ಸಲ್ಲಿಸಲಾಗಿದ್ದು, ನಂತರ ಪ್ರಾಥಮಿಕ ವಿಚಾರಣೆಗೆ ಅನುಮತಿ ಪಡೆಯಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಜುಲೈ 31ರಂದು ಪ್ರಾಥಮಿಕ ವಿಚಾರಣೆಗೆ ಅನುಮತಿ ದೊರೆತಿದ್ದು, ಆಗಸ್ಟ್ 12ರಂದು ಪ್ರಾಥಮಿಕ ವಿಚಾರಣಾ ವರದಿಯನ್ನು ಸಲ್ಲಿಸಿದ ಬಳಿಕ ಪ್ರಕರಣ ದಾಖಲಿಸಲು ನೀಡಿದ ಜ್ಞಾಪನದ ಮೇರೆಗೆ ರಾತ್ರಿ 8.45ಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಸಂಬಂಧಿತ ಕಾರ್ಯಕ್ರಮದ ಮೂಲ ವಿಡಿಯೋ, ಪ್ರಸಾರದ ದಾಖಲೆಗಳು ಹಾಗೂ ಸಂಪಾದಕೀಯ ಅನುಮೋದನೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಎಫ್‌ಐಆರ್‌ನಲ್ಲಿ ಪ್ರಸ್ತುತ ಅರುಣ್ ಬಡಿಗೇರ್ ಅವರನ್ನು ಆರೋಪಿ-1 ಎಂದು ನಮೂದಿಸಲಾಗಿದೆ.

