ಬೆಂಗಳೂರು : ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಶಿಫಾರಸು ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೊರಡಿಸಿರುವ ಆದೇಶಗಳು ಕರ್ನಾಟಕದ ಪಾಲಿಗೆ ಮರಣಶಾಸನವಾಗಿದೆ. ಕರ್ನಾಟಕದ ವಾಸ್ತವ ಪರಿಸ್ಥಿತಿ, ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಬರದ ಸನ್ನಿವೇಶ ಮತ್ತು ರಾಜ್ಯದ ಜನರ ಕುಡಿಯುವ ನೀರಿನ ಅಗತ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಹೊರಡಿಸಿರುವ ಈ ಆದೇಶವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೂ ಈ ಅವೈಜ್ಞಾನಿಕ ಆದೇಶಕ್ಕೆ ಮಣಿಯಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಪರಿಣಾಮವಾಗಿ ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ ಸೇರಿದಂತೆ ಪ್ರಮುಖ ಜಲಾಶಯಗಳು ಖಾಲಿ ಹೊಡೆಯುತ್ತಿವೆ. ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹ ವಾಡಿಕೆಗಿಂತ ಬಹಳ ಕಡಿಮೆಯಾಗಿದೆ. ಈಗಿರುವ ನೀರು ಮುಂದಿನ ತಿಂಗಳುಗಳು ಮತ್ತು ಬೇಸಿಗೆಯವರೆಗೆ ರಾಜ್ಯದ ಜನರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆಯೇ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದು ಎಷ್ಟು ಸರಿ?
https://www.facebook.com/NarayanaGowdruTA/posts/pfbid02PgUtzmzAspsiibpqPeHnZBWhtAgggoTrdiEvGYXGFHcLZ4EBYPZ3nHYqgBcDF4kil?rdid=ZlZ7D9bNfK0y3j5B#
ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ನೈಜ ಜಲಸ್ಥಿತಿಯನ್ನು ಪರಿಗಣಿಸಬೇಕಿತ್ತು. ಕಡತಗಳ ಮೇಲಿನ ಅಂಕಿ-ಅಂಶಗಳನ್ನು ನೋಡುವುದಕ್ಕಿಂತ, ನೆಲದ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿತ್ತು. ತಮಿಳುನಾಡು ಕೇಳುತ್ತಿರುವುದು ಅವರ ಎರಡನೇ ಬೆಳೆಗೆ ನೀರು. ಆದರೆ ಕರ್ನಾಟಕ ಉಳಿಸಿಕೊಂಡಿರುವುದು ಎರಡನೇ ಬೆಳೆಗೆ ಅಲ್ಲ; ಜನರ ಕುಡಿಯುವ ನೀರಿಗಾಗಿ. ಈ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ನೀಡಿರುವ ಆದೇಶವನ್ನು ಹೇಗೆ ನ್ಯಾಯಯುತ ಎಂದು ಕರೆಯಬಹುದು?
ವಿಶ್ವಖ್ಯಾತಿಯ ಬೆಂಗಳೂರು ಮಹಾನಗರ ಸೇರಿದಂತೆ ಕೋಟ್ಯಂತರ ಜನರು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಇಂದು ನಮ್ಮ ಜಲಾಶಯಗಳಲ್ಲಿ ಇರುವ ಅಲ್ಪಸ್ವಲ್ಪ ನೀರನ್ನೂ ಬಿಟ್ಟರೆ, ಮುಂದಿನ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದರೆ ಅದರ ಹೊಣೆ ಯಾರು ಹೊರುತ್ತಾರೆ? ಜನರು ಒಂದು ಹನಿ ನೀರಿಗಾಗಿ ಬೀದಿಗಿಳಿದರೆ CWRC ಮತ್ತು WMA ಮುಂದೆ ಬಂದು ಉತ್ತರ ನೀಡುತ್ತವೆಯೇ? ಮಳೆಯ ಮುನ್ಸೂಚನೆ ಸುಳ್ಳಾದರೆ ಅದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಪ್ರಾಧಿಕಾರವು ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ನೀರು ಬಿಡಲು ಆದೇಶಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ‘ಮಳೆಯಾಗಬಹುದು’ ಎಂಬ ಊಹೆಯ ಆಧಾರದ ಮೇಲೆ ರಾಜ್ಯದ ಜನರ ಕುಡಿಯುವ ನೀರಿನ ಹಕ್ಕಿನ ವಿಷಯದಲ್ಲಿ ಜೂಜಾಡುವುದು ಎಷ್ಟು ಸರಿ? ಹವಾಮಾನ ಮುನ್ಸೂಚನೆಗಳು ಅನೇಕ ಬಾರಿ ತಪ್ಪಿರುವುದನ್ನು ನಾವು ನೋಡಿದ್ದೇವೆ. ಮಳೆ ಬಾರದೇ ಹೋದರೆ ಆಗ ಯಾರು ಹೊಣೆ ಹೊರುತ್ತಾರೆ? ಲಭ್ಯವಿರುವ ನೀರಿನ ಪ್ರಮಾಣ ಮತ್ತು ಜನರ ಅಗತ್ಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಲ್ಲವೇ?
ಕುಡಿಯುವ ನೀರು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು. ಜನರ ಜೀವ ಉಳಿಸುವ ನೀರನ್ನು ಕಸಿದುಕೊಂಡು ಬೇರೆ ಉದ್ದೇಶಕ್ಕಾಗಿ ಬಳಸಲು ಒತ್ತಾಯಿಸುವುದು ಯಾವುದೇ ರೀತಿಯಿಂದಲೂ ನ್ಯಾಯಸಮ್ಮತವಲ್ಲ. ಕರ್ನಾಟಕದ ಜನರ ಜೀವ ಮತ್ತು ಭವಿಷ್ಯವನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಮೊದಲ ಕರ್ತವ್ಯ.
ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಈ ಅವೈಜ್ಞಾನಿಕ ಆದೇಶವನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು. ತಕ್ಷಣವೇ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ವೇದಿಕೆಗಳಲ್ಲಿ ಹೋರಾಟ ಆರಂಭಿಸಬೇಕು. ಕರ್ನಾಟಕದ ವಾಸ್ತವ ಜಲಸ್ಥಿತಿಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಸಮರ್ಥವಾಗಿ ಮಂಡಿಸಿ ರಾಜ್ಯದ ಹಕ್ಕನ್ನು ರಕ್ಷಿಸಬೇಕು.
ಅದರ ಜೊತೆಗೆ ಪ್ರತಿವರ್ಷ ಮರುಕಳಿಸುವ ಇಂತಹ ವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬರಗಾಲದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸಂಕಷ್ಟ ಸೂತ್ರ (Distress Formula) ರೂಪಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕುಡಿಯುವ ನೀರು, ರೈತರ ಹಿತಾಸಕ್ತಿ ಮತ್ತು ನೈಜ ಜಲಲಭ್ಯತೆಯನ್ನು ಆಧಾರವಾಗಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆ ರೂಪುಗೊಳ್ಳಬೇಕು.
ಕರ್ನಾಟಕ ರಕ್ಷಣಾ ವೇದಿಕೆಗೆ ಕರ್ನಾಟಕ ಬಂದ್ ಮಾಡುವ ಆಸಕ್ತಿಯಿಲ್ಲ. ಬಂದ್ ಎನ್ನುವುದು ಹೋರಾಟಗಾರರ ಕೊನೆಯ ಅಸ್ತ್ರ ನಮ್ಮ ಹೋರಾಟವನ್ನು ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಬೇಕು. ಈಗಾಗಲೇ ಕಾವೇರಿ ಪ್ರಾಧಿಕಾರದ ಆದೇಶದಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ. ಬಂದ್ ಮಾಡುವ ಮೂಲಕ ನಮಗೆ ನಾವೇ ಇನ್ನಷ್ಟು ಶಿಕ್ಷೆ ವಿಧಿಸಿಕೊಳ್ಳುವ ಅಗತ್ಯವಿಲ್ಲ. ಒಂದು ದಿನ ಬಂದ್ ನಡೆದರೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗುತ್ತದೆ. ನಮ್ಮ ಹಕ್ಕಿಗಾಗಿ ನಾವೇ ನಷ್ಟ ಮಾಡಿಕೊಂಡು ಹೋರಾಟ ನಡೆಸುವುದು ನನಗೆ ಸರಿಯೆನಿಸುವುದಿಲ್ಲ. ಅಷ್ಟೇ ಅಲ್ಲದೆ ಅಂದಿನ ದುಡಿಮೆಯ ಹಣದಿಂದ ಅಂದಿನ ಹೊಟ್ಟೆಪಾಡು ನಡೆಸುವ ಲಕ್ಷಾಂತರ ಬಡ ಕೂಲಿಕಾರರು ನಮ್ಮಲ್ಲಿ ಇದ್ದಾರೆ. ಬಂದ್ ನೇರವಾಗಿ ತೊಂದರೆ ಕೊಡುವುದು ಇಂಥ ಬಡಪಾಯಿಗಳನ್ನೇ. ಹೀಗಾಗಿ ಮೊದಲಿನಿಂದಲೂ ನಾನು ಬಂದ್ ಕರೆಗಳಿಂದ ದೂರವೇ ಉಳಿದಿದ್ದೇನೆ.
ಜನಜೀವನಕ್ಕೆ ತೊಂದರೆಯಾಗದ ರೀತಿಯಲ್ಲಿ ಪ್ರಜಾಸತ್ತಾತ್ಮಕ, ಕಾನೂನುಬದ್ಧ ಮತ್ತು ಜನಾಂದೋಲನದ ಹೋರಾಟಗಳ ಮೂಲಕವೇ ರಾಜ್ಯದ ಜಲಹಕ್ಕನ್ನು ರಕ್ಷಿಸಲು ನಾವು ಮುಂದಾಗುತ್ತೇವೆ. ಆದರೆ ಕರ್ನಾಟಕದ ಹಿತಾಸಕ್ತಿಯನ್ನು ಕಡೆಗಣಿಸಿ ಸರ್ಕಾರ ನೀರು ಬಿಡುಗಡೆ ಮಾಡಿದರೆ ರಾಜ್ಯದ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುವುದು ಸಹಜ. ಅಂತಹ ಪರಿಸ್ಥಿತಿಗೆ ಸರ್ಕಾರವೇ ನೇರ ಹೊಣೆಗಾರವಾಗಲಿದೆ.

