ಕಾವೇರಿ ನದಿ ಕರ್ನಾಟಕದ ಜೀವನಾಡಿ. ಈ ನದಿಯ ನೀರನ್ನೇ ನಂಬಿಕೊಂಡು ಸುಮಾರು 4 – 5 ಜಿಲ್ಲೆಗಳ ರೈತರು ಕೃಷಿ ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಅನೇಕ ನಗರಗಳು ಮತ್ತು ಗ್ರಾಮಗಳ ಜನರಿಗೆ ನೀರು ಕುಡಿಯುವುದಕ್ಕೆ ಹಾಗೂ ಬೆಳೆ ಬೆಳೆಯುವುದಕ್ಕೆ ಪ್ರಮುಖ ನದಿ ಕಾವೇರಿಯೇ ಆಗಿದೆ. ಇಂತಹ ಸಂದರ್ಭದಲ್ಲಿ ಮುಂಗಾರು ಮಳೆಯೂ ಈ ಭಾರಿ ಆಗಿಲ್ಲ. ಮಳೆಯ ಕೊರತೆ ಅಥವಾ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಮೊದಲು ಕರ್ನಾಟಕ ಸರ್ಕಾರ ಕರ್ನಾಟಕದ ಜನರ ಪರವಾಗಿ ನಿಲ್ಲಬೇಕಾದದ್ದು ನ್ಯಾಯ.
ರಾಜ್ಯದ ಹಲವೆಡೆ ರೈತರಿಗೆ ನೀರಿನ ಸಮಸ್ಯೆಯಿಂದ ಬೆಳೆ ಹಾನಿ ಹಾಗೂ ಆರ್ಥಿಕ ನಷ್ಟವಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗುತ್ತಿದೆ. ಆದ್ದರಿಂದ ರಾಜ್ಯದ ರೈತರ ಹಿತಾಸಕ್ತಿ ಮತ್ತು ಜನರ ಮೂಲಭೂತ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಸಾಮಾನ್ಯವಾದ ಬೇಡಿಕೆಯಾಗಿದೆ. ಇದನ್ನು ಅರ್ಥಮಾಡಿಕೊಂಡು ಯಾವುದೇ ರಾಜಕಾರಣ ಮಾಡದೆ ತಮಿಳುನಾಡು ಸರ್ಕಾರ ಈ ಭಾರಿ ನಮಗೆ ಕಾವೇರಿ ನೀರು ಬೇಡ ಎಂದು ಹೇಳಬೇಕು.

ಕರ್ನಾಟಕದ ಮಳೆಯ ಪರಿಸ್ಥಿತಿ, ಜಲಾಶಯಗಳಲ್ಲಿನ ನೀರಿನ ಸಂಗ್ರಹ ಮತ್ತು ಕುಡಿಯುವ ನೀರಿನ ಅವಶ್ಯಕತೆ ಹಾಗೂ ರೈತರ ಸಂಕಷ್ಟವನ್ನು ಸಮಗ್ರವಾಗಿ ಪರಿಗಣಿಸಬೇಕು. ಬೇರೆ ರಾಜ್ಯಗಳೊಂದಿಗೆ ಸಹಕಾರ ಮತ್ತು ಕಾನೂನಿನ ಗೌರವ ಮುಖ್ಯವಾದರೂ ಕರ್ನಾಟಕದ ಜನರ ಬದುಕು ಮತ್ತು ರೈತರ ಭವಿಷ್ಯಕ್ಕೆ ನ್ಯಾಯ ದೊರಕುವಂತೆ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವುದು ಅಗತ್ಯವಾಗಿದೆ.
ತಮಿಳುನಾಡು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಒಳ್ಳೆಯ ಶಿಕ್ಷಣವನ್ನು ಪಡೆದವರೇ ಆಗಿದ್ದಾರೆ. ಹಾಗಾಗಿ ಅವರು ಜನಹಿತ ತೀರ್ಮಾನವನ್ನು ತೆಗೆದುಕೊಳ್ಳಬೇಕು.

ಭಾಸ್ಕರ ಬಾಗಲಕೋಟೆ


