ನವದೆಹಲಿ : ನೀಟ್ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್‌ಮಂತರ್‌ನಿಂದ ಸಂಸತ್ ಭವನ ಚಲೋ ಹೊರಟಿದ್ದ ಸಿಜೆಪಿ ಪ್ರತಿಭಟನಕಾರರ ಮೇಲೆ ಆಶ್ರುವಾಯು ಪ್ರಯೋಗ, ಜಲಫಿರಂಗಿ ಹಾಗೂ ಲಾಠಿ ಚಾರ್ಜ್ ನಡೆದಿದೆ. ಪ್ರತಿಭಟನೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ ವ್ಯಾಪ್ತಿಯ ಸುಮಾರು 4 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಕಂಡ ಕಂಡಲ್ಲಿ ಪ್ರತಿಭಟನಕಾರರು ನುಗ್ಗುತ್ತಿದ್ದಾರೆ.
ಸದ್ಯ ರೈಲ್ವೆ ಭವನ ತಲುಪಿರುವ ಪ್ರತಿಭಟನೆ ವೇಳೆ ಸಾವಿರಾರು ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದೀಗ ಸಂಸತ್ ಭವನದವರೆಗೂ ಕಾರ್ಯಕರ್ತರೂ ಬಂದಿದ್ದಾರೆ. ಹೀಗಾಗಿ, ಭದ್ರತಾ ದೃಷ್ಟಿಯಿಂದ ಸಂಸತ್‌ಭವನದ ಬಾಗಿಲುಗಳನ್ನು ಮುಚ್ಚಲಾಗಿದೆ.
ಲಾಠಿ ಚಾರ್ಜ್ ವೇಳೆ ಹಲವು ಯುವಕರಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಹಲವು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಂತರ್‌ಮಂತರ್‌ನ ಒಂದು ಕಿಲೋಮೀಟರ್ ಸುತ್ತ ವಿದ್ಯಾರ್ಥಿಗಳು ಜಮಾಯಿಸಿದ್ದಾರೆ. ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ.

