ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಜೂನ್ 30ರಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದು, ಈ ಪ್ರಕ್ರಿಯೆಗೆ ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮನವಿ ಮಾಡಿದರು.
ಜಿಬಿಎ ಕೇಂದ್ರ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಮನೆ-ಮನೆ ಭೇಟಿ ಕಾರ್ಯ ಕುರಿತು ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನೆ-ಮನೆ ಭೇಟಿ ಸಂದರ್ಭದಲ್ಲಿ ನಿವಾಸಿಗಳು ಲಭ್ಯವಿಲ್ಲದಿದ್ದರೆ ಬಿಎಲ್‌ಒಗಳು ಇನ್ನೆರಡು ಬಾರಿ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಯಾವುದೇ ಮನೆ ಸಮೀಕ್ಷೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶೇ. 76.32ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವಭಾವಿ ಚಟುವಟಿಕೆಯಾಗಿ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯದಲ್ಲಿ ಇದುವರೆಗೆ ಶೇ. 76.32ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 1,03,88,363 ಮತದಾರರಲ್ಲಿ 79,27,902 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಇನ್ನೂ 24,60,461 ಮತದಾರರ ಮ್ಯಾಪಿಂಗ್ ಬಾಕಿಯಿದೆ. ಉಳಿದ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಬೆಳಿಗ್ಗೆ ನಮೂನೆ ವಿತರಣೆ – ಸಂಜೆ ಒಳಗೆ ಸಂಗ್ರಹ ವಾದ ನಮೂನೆಗಳ ಡಿಜಿಲೀಕರಣ
ಬಿಎಲ್‌ಒಗಳು ಬೆಳಿಗ್ಗೆ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದು, ಸಂಜೆ ವೇಳೆಗೆ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳೊಂದಿಗೆ ಬಾವಚಿತ್ರ ಬದಲಿಸು ಅಗತ್ಯವಿದ್ದಲ್ಲಿ ತಮ್ಮ ಇತ್ತೀಚಿನ ಛಾಯಾಚಿತ್ರವನ್ನು ಸಹ ಸಲ್ಲಿಸುವಂತೆ ಕೋರಲಾಗಿದೆ. ಅಲ್ಲದೆ, ಗಣತಿ ನಮೂನೆಗಳನ್ನು ವೋಟರ್ ಫೇಷಿಲಿಟೇಷನ್ ಸೆಂಟರ್‌ಗಳಲ್ಲಿ ಹಾಗೂ ರಜಾದಿನಗಳಲ್ಲಿ ಮತಗಟ್ಟೆಗಳಲ್ಲಿ ಸಲ್ಲಿಸಬಹುದಾಗಿದೆ.
2,855 ಮತದಾರರ ಸಹಾಯ ಕೇಂದ್ರಗಳ ಸ್ಥಾಪನೆ:
ಗಣತಿ ನಮೂನೆ ಭರ್ತಿ ಮಾಡುವ ವೇಳೆ ಅಥವಾ ಮತದಾರರ ನೋಂದಣಿಗೆ ಸಂಬಂಧಿಸಿದ ಯಾವುದೇ ಗೊಂದಲಗಳಿದ್ದಲ್ಲಿ ಮಾರ್ಗದರ್ಶನ ನೀಡಲು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ *2,855 ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತದಾರರು/ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವುದು. ಇದರ ಜೊತೆಗೆ ವಾರ್ಡ್ ಕಚೇರಿಗಳಲ್ಲಿ ಬಿಎಲ್‌ಒಗಳಿಗೆ ನೆರವಾಗುವ ಉದ್ದೇಶದಿಂದ 902 Facilitation Centres ಸ್ಥಾಪಿಸಲಾಗಿರುತ್ತದೆ.
16,505 ಬಿಎಲ್‌ಎ ನೇಮಕ:
ಜಿಲ್ಲೆಯಲ್ಲಿ 28 ಮತದಾರರ ನೋಂದಣಾಧಿಕಾರಿಗಳು, 75 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 905 ಬಿಎಲ್‌ಒ ಮೇಲ್ವಿಚಾರಕರು ಹಾಗೂ 8,972 ಬಿಎಲ್‌ಒಗಳು ಕಾರ್ಯನಿರ್ವಹಿಸುತ್ತಿದ್ದು, ಮನೆ-ಮನೆ ಸಮೀಕ್ಷೆ ಕಾರ್ಯಕ್ಕೆ ಅಗತ್ಯ ತರಬೇತಿ ನೀಡಲಾಗಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 16,505 ಬಿಎಲ್‌ಎ–2ರನ್ನು ನೇಮಕ ಮಾಡಲಾಗಿದ್ದು, ಅದರ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ.
ರಾಜಕೀಯ ಪಕ್ಷಗಳೊಂದಿಗೆ ಸಭೆ:
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ರಜಾದಿನ ಹಾಗೂ ಸಂಜೆ ವೇಳೆಯಲ್ಲಿಯೂ ಸಹ ಬಿಎಲ್‌ಒಗಳ ಮೂಲಕ ಕಾರ್ಯ ನಿರ್ವಹಿಸುವುದು. ಬಿ ಎಲ್ ಎ ಗಳಿಗೆ ಮತದಾರರ ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಎಸ್ಐಆರ್ (SIR) ವೇಳಾಪಟ್ಟಿ:
- ಮನೆ-ಮನೆ ಭೇಟಿ: 30.06.2026 ರಿಂದ 29.07.2026
- ಮತಗಟ್ಟೆಗಳ ಮರುಹೊಂದಾಣಿಕೆ: 29.07.2026
- ಕರಡು ಮತದಾರರ ಪಟ್ಟಿ ಪ್ರಕಟಣೆ: 05.08.2026
- ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ: 05.08.2026 ರಿಂದ 04.09.2026
- ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ: 05.08.2026 ರಿಂದ 03.10.2026
- ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 07.10.2026
ಹೆಚ್ಚಿನ ಮಾಹಿತಿಗಾಗಿ: https://ceo.karnataka.gov.in/vfc/details

