ತಾಂತ್ರಿಕ ದೋಷದ ನಂತರ ಬೆಂಗಳೂರು ನಮ್ಮ ಮೆಟ್ರೋದ ಪರ್ಪಲ್ ಲೈನ್ ಸೇವೆಗಳು ಪುನರಾರಂಭಗೊಂಡಿವೆ.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ತಾಂತ್ರಿಕ ಸಮಸ್ಯೆ ಉಂಟಾಗಿ ಎಂ.ಜಿ. ರೋಡ್ ಮತ್ತು ಮೆಜೆಸ್ಟಿಕ್ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ನಿನ್ನೆ ಸಂಜೆ 6:30ರ ಸುಮಾರಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ವ್ಯಾಪ್ತಿಯಲ್ಲಿ ಮೆಟ್ರೋದ ಥರ್ಡ್ ರೈಲ್ ಸಿಸ್ಟಮ್ನ(ರೈಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಹಳಿ ವ್ಯವಸ್ಥೆ)ನ ಕರೆಂಟ್ ಕಲೆಕ್ಟರ್ ಶೂನಲ್ಲಿ ದೋಷ ಕಾಣಿಸಿಕೊಂಡಿತ್ತು. ಇದರಿಂದಾಗಿ ಮೆಟ್ರೋ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು.
ಬಿಎಂಆರ್ಸಿಎಲ್ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡ ಹಾಗೂ ಉನ್ನತ ಅಧಿಕಾರಿಗಳು ತಡರಾತ್ರಿಯವರೆಗೂ ಕಬ್ಬನ್ ಪಾರ್ಕ್ ನಿಲ್ದಾಣದಲ್ಲೇ ಬೀಡುಬಿಟ್ಟಿದ್ದರು. ತಡರಾತ್ರಿ ಹೊಸ ಕರೆಂಟ್ ಕಲೆಕ್ಟರ್ ಶೂ ಕ್ಯಾಪ್ ತರಿಸಿ, ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ತದನಂತರ ಯಶಸ್ವಿ ಟ್ರಯಲ್ ರನ್ ನಡೆಸಿ ಹಳಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲಾಯಿತು.
ಬಿಎಂಆರ್ಸಿಎಲ್ ಎಂಜಿನಿಯರ್ಗಳು ದೋಷವನ್ನು ಸರಿಪಡಿಸಿದ್ದು, ಮೆಟ್ರೋ ಸೇವೆಗಳು ಹಂತ ಹಂತವಾಗಿ ಪುನರಾರಂಭಗೊಂಡಿವೆ. ಆದಾಗ್ಯೂ, ಸಂಚಾರ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುವವರೆಗೆ ಕೆಲವು ನಿಲ್ದಾಣಗಳಲ್ಲಿ ವಿಳಂಬ ಮತ್ತು ಹೆಚ್ಚಿನ ಜನಸಂದಣಿ ಕಂಡುಬಂದಿದೆ.
ಇಂದು ಪ್ರಯಾಣಿಸುವ ಪ್ರಯಾಣಿಕರು ಅಧಿಕೃತ ಪ್ರಕಟಣೆಗಳನ್ನು ಗಮನಿಸಿ. ಹೆಚ್ಚುವರಿ ಪ್ರಯಾಣ ಸಮಯವನ್ನು ಮೀಸಲಿಡಿ.
ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಇಂಟರ್ಚೇಂಜ್ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಇರಲಿದೆ.

