ಬೆಂಗಳೂರು : ಇತಿಹಾಸ ಓದಲು, ಇತಿಹಾಸ ಬರೆಯಲು ಇಷ್ಟವಿಲ್ಲ. ಇತಿಹಾಸ ಸೃಷ್ಟಿ ಮಾಡಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ ಎಂದು ಹೇಳಿರುವೆ. ಕಾನೂನು ಹೊರತಾಗಿ ಬೇರೆ ಯಾವ ಒತ್ತಡಕ್ಕೂ ಮಣಿಯಬಾರದು. ಮಂತ್ರಿಗಳು, ಶಾಸಕರು, ನನ್ನ ಕಚೇರಿಯವರ ಮಾತು ಕೇಳದೇ, ಕಾನೂನು ವ್ಯಾಪ್ತಿಯಲ್ಲಿ ಸಕಾರಾತ್ಮಕ ಮನೋಭಾವದಲ್ಲಿ ಕೆಲಸ ಮಾಡಿ. ಸಮಸ್ಯೆಗಳಿಗೆ ವ್ಯವಸ್ಥೆ ಚೌಕಟ್ಟಿನಲ್ಲೇ ಪರಿಹಾರ ಹುಡುಕಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಆಯಾ ಜಿಲ್ಲೆಗಳಲ್ಲಿರುವ ತಾಲ್ಲೂಕುಗಳಿಗೂ ಹೋಗಿ ಪರಿಶೀಲನೆ ಮಾಡಬೇಕು. ಈಗ ಎಸ್ಐಆರ್ ನಡೆಯುತ್ತಿದ್ದು, ಯಾವುದೇ ವ್ಯಕ್ತಿ ಎಸ್ಐಆರ್ ನಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವಂತೆ ಆಗಬಾರದು. ಈ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳದಿದ್ದರೆ ಸವಲತ್ತುಗಳನ್ನು ಕಳೆದುಕೊಳ್ಳಲಿದ್ದಾರೆ. ಸಿಎಂ ಹಾಗೂ ಡಿಸಿಎಂ ಸೇರಿದಂತೆ ಎಲ್ಲಾ ಮತದಾರರು. ಎನ್ಯುಮರೇಷನ್ ಅರ್ಜಿ ತುಂಬಿ, ಸಹಿ ಹಾಕಿ, ದಾಖಲೆ ಸಮೇತ ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಜಾಗೃತಿ ಮೂಡಿಸಬೇಕು. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿರುವೆ” ಎಂದು ಮಾಹಿತಿ ನೀಡಿದರು.
“ಎಲ್ಲಾ ರಾಜಕೀಯ ಪಕ್ಷಗಳಿಗೂ ಜನರ ಮತದಾನದ ಹಕ್ಕು ಉಳಿಸಿಕೊಳ್ಳುವ ಅವಕಾಶ ನೀಡಲಾಗುವುದು. ಕೇರಳಂ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ 90 ಲಕ್ಷ, 60 ಲಕ್ಷ ಜನರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಇದು ನಮ್ಮಲ್ಲಿ ಆಗಬಾರದು. ನಮ್ಮ ಸ್ಥಳೀಯ ಸಂಸ್ಥೆಗಳಲ್ಲಿ ನಿವಾಸ ಧೃಢೀಕರಣ ಪತ್ರ ನೀಡಲು ಅವಕಾಶವಿದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಎಲ್ಲಾ ದಾಖಲೆ ನೀಡಬೇಕು” ಎಂದರು.
“ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳು ತಮ್ಮ ಇಲಾಖೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳ ಪಟ್ಟಿ ನೀಡಬೇಕು. 25 ದಿನಗಳಲ್ಲಿ ಆಯಾ ಜಿಲ್ಲೆಯಲ್ಲಿ ಯಾವ ಹೊಸ ಕೆಲಸ ಮಾಡಬಹುದು ಎಂದು ಗುರುತಿಸಬೇಕು. ಆರ್ಥಿಕ ಚೌಕಟ್ಟಿನಲ್ಲಿ ನಾವು ಏನು ಮಾಡಬಹುದು ಎಂದು ಪಟ್ಟಿ ಮಾಡಲು ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಆಯಾ ಜಿಲ್ಲೆಯ ಸಂಪೂರ್ಣ ಮಾಹಿತಿ ನೀಡಬೇಕು. ಎಸ್ಐಆರ್ ವಿಚಾರವಾಗಿ ಅಗತ್ಯ ಪ್ರದೇಶಗಳಲ್ಲಿ ಸಹಾಯ ಕೇಂದ್ರಗಳ ಸ್ಥಾಪಿಸಲು ನಿರ್ದೇಶಿಸಲಾಗಿದೆ” ಎಂದರು.

