ಬೆಂಗಳೂರು : ಡಿ.ಕೆ.ಶಿವಕುಮಾರ್ ಎಂಬ ಹೆಸರಿನ ನಾನು ಮುಖ್ಯಮಂತ್ರಿಯಾಗಿ … ನೊಣವಿನಕೆರೆ ಅಜ್ಜಯ್ಯನ ಹೆಸರಿನಲ್ಲಿ ಸಂವಿಧಾನದ ಪುಸ್ತಕ ಹಿಡಿದು 4.14ಕ್ಕೆ ಗೌಪ್ಯತ ಪ್ರಮಾಣ ವಚನ ಸ್ವೀಕರಿಸಿದರು.
ಇದಕ್ಕೂ ಮೊದಲು ಎಲ್ಲರಿಗೂ ಸಾಷ್ಟಾಂಗ ನಮಸ್ಕಾರ ಮಾಡಿ, ಅಜ್ಜಯ್ಯನ ಫೋಟೋಗೆ ನಮಿಸಿದರು.
ಲೋಕಭವನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ರಣದೀಪ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್, ಸಿದ್ದರಾಮಯ್ಯ, ಕೇರಳಂ ಸಿಎಂ ಸತೀಶನ್, ಕಾಂಗ್ರೆಸ್ ನಾಯಕರಾದ ಹರಿಪ್ರಸಾದ್, ಮೊಹಮ್ಮದ್ ಅಜರುದ್ದೀನ್, ರಾಜೀವ್ ಶುಕ್ಲಾ ಸೇರಿ ಪಕ್ಷದ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳು, ವಿವಿಧ ಮಠಾಧೀಶರು, ಮೌಲ್ವಿಗಳು, ಮತ್ತು ಚರ್ಚ್ಗಳ ಮುಖ್ಯಸ್ಥರು, ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್, ಸಚಿವರಾಗಿ ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್, ಶರಣ ಪ್ರಕಾಶ್ ಪಾಟೀಲ್ ಪ್ರಮಾಣವಚನ ಸ್ವೀಕರಿಸಿದರು.
ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಎಲ್ಲಾ ಮಠಾಧೀಶರ ಆಶೀರ್ವಾದ ಪಡೆದರು. ಆದಿಚುಂಚನಗಿರಿ ಶ್ರೀಗಳಿಂದ ಮಣಿ ಹಾರ ಹಾಕಿದರು.
ಈ ಸಂದರ್ಭದಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ಡಿಕೆಶಿ ಪತ್ಮಿ, ಪುತ್ರಿಯರು ಹಾಗೂ ಕುಟುಂಬಸ್ಥರು ಆಗಮಿಸಿದ್ದರು. ಸಿನಿಮಾ ಕ್ಷೇತ್ರದಿಂದ ನಟ ಶಿವರಾಜ್ಕುಮಾರ್, ಪತ್ನಿ ಗೀತಾ ಶಿವರಾಜ್ಕುಮಾರ್, ಡಾಲಿ ಧನಂಜಯ್, ಸಿಹಿಕಹಿ ಚಂದ್ರು, ಅರ್ಜುನ್ ಜನ್ಯ, ನಟಿ ರಮ್ಯಾ, ಸೇರಿದಂತೆ ಹಲವರು ಆಗಮಿಸಿದ್ದರು.
ಸಮಯ ಬರಬೇಕು : ರಮ್ಯಾ
ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು ಎಂದು ನಟಿ ರಮ್ಯಾ ಹೇಳಿದ್ದಾರೆ. ನಾನೀಗ ಬಂದಿರೋದು ಡಿಕೆ ಶಿವಕುಮಾರ್ ಅವರ ಫ್ಯಾಮಿಲಿಗೋಸ್ಕರ. ಇಷ್ಟು ವರ್ಷ ಕಷ್ಟಪಟ್ಟಿರುವುದರ ಫಲ ಅವರಿಗೆ ಸಿಕ್ಕಿದೆ. ಅದನ್ನ ನೋಡಿ ಸೆಲಬ್ರೇಟ್ ಮಾಡೋಕೆ ಬಂದಿದ್ದೇನೆ. ನಾನು ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು. ಎಲ್ಲದಕ್ಕೂ ಸಮಯ ಬೇಕಲ್ಲ ಅಂದರು.

