ಬೆಂಗಳೂರು : ಮೇ. 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬುಧವಾರ ಕರ್ನಾಟಕ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ. ಈ ಮಧ್ಯೆ, ನೌಕರರು ಮುಷ್ಕರ ನಡೆಸದಂತೆ ಕೆಎಸ್ಆರ್ಟಿಸಿ ಖಡಕ್ ಎಚ್ಚರಿಕೆ ನೀಡಿದೆ.
ಬುಧವಾರ ಮುಷ್ಕರದಲ್ಲಿ ಭಾಗಿಯಾಗದಂತೆ ಸಿಬ್ಬಂದಿಗೆ ಸೂಚಿಸಿದ್ದು, ಯಾವುದೇ ಮುಷ್ಕರ ಮಾಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಎಂದಿದೆ. ಬುಧವಾರ ಕೆಲಸಕ್ಕೆ ಹಾಜರಾಗದಿದ್ದರೆ ‘ನೋ ವರ್ಕ್ ನೋ ಪೇ’ ಎಂದು ಸಿಬ್ಬಂದಿಗೆ ತಿಳಿಸಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆಎಸ್ಆರ್ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ.
ಆದರೆ, ಸಾರಿಗೆ ನೌಕರರ ವೇತನ ಕುರಿತಾದ ಸರಕಾರದ ಆದೇಶವನ್ನು ಕರ್ನಾಟಕ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿರಸ್ಕರಿಸಿದೆ. ಸಾರಿಗೆ ನೌಕರರು ಶೇ. 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಸರಕಾರ ಶೇ. 12.50ರಷ್ಟು ವೇತನ ಪರಿಷ್ಕರಣೆ ಮತ್ತು 38 ತಿಂಗಳ ಬದಲಿಗೆ 26 ತಿಂಗಳ ಹಿಂಬಾಕಿ ವೇತನ ಪಾವತಿಗೆ ಆದೇಶ ಹೊರಡಿಸಿದೆ. ರಾಜ್ಯ ಸರಕಾರದ ನಿರ್ಧಾರವನ್ನು ನೌಕರರು ಏಕಪಕ್ಷೀಯ ಎಂದು ತಿರಸ್ಕರಿಸಿದ್ದಾರೆ.
ಮೇ. 20ರಂದು ಬೆಳಗ್ಗೆ 6ರಿಂದಲೇ ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬಸ್ಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಸರಕಾರದ ಉದ್ಧಟತನದ ವಿರುದ್ಧದ ಈ ಹೋರಾಟಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಮತ್ತು ಜನಸಾಮಾನ್ಯರೇ ಸರಕಾರಕ್ಕೆ ಛೀಮಾರಿ ಹಾಕಬೇಕು ಎಂದು ಸಮಿತಿಯು ಮನವಿ ಮಾಡಿದೆ.
ಇತ್ತೀಚೆಗೆ ರಾಜ್ಯ ಸರಕಾರವು ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಆದರೆ, ಶೇ. 25ರಷ್ಟು ಹೆಚ್ಚಳಕ್ಕೆ ಬೇಡಿಕೆ ಮುಂದಿಟ್ಟಿದ್ದ ನೌಕರರು ಈ ಆದೇಶ ಒಪ್ಪಿಲ್ಲ. ಈ ಹಿಂದೆ ಶೇ. 15ರಷ್ಟು ಹೆಚ್ಚಳ ಮಾಡಿದ್ದ ಸರಕಾರ, ಈ ಬಾರಿ ಅದಕ್ಕಿಂತಲೂ ಕಡಿಮೆ ಮಾಡಿ, ನೌಕರರ ಮೇಲೆ ದೌರ್ಜನ್ಯವೆಸಗಿದೆ. ಇದಲ್ಲದೆ, 38 ತಿಂಗಳ ಬದಲಿಗೆ 26 ತಿಂಗಳ ಹಿಂಬಾಕಿ ವೇತನ ಪಾವತಿಸುವುದಾಗಿ ಆದೇಶಿಸಿರುವ ಸರಕಾರದ ವಿರುದ್ಧ ನೌಕರರು ಕಂಗಾಲಾಗಿದ್ದಾರೆ. ಏಕಪಕ್ಷೀಯ ನಿರ್ಧಾರವು ಕಾರ್ಮಿಕ ಸಂಘಟನೆಗಳ ಹತ್ತಿಕ್ಕುವ ಪ್ರಯತ್ನವಾಗಿದೆ. ಈ ಎಲ್ಲ ಕಾರಣಗಳಿಂದ ಮುಷ್ಕರ ಅನಿವಾರ್ಯವಾಗಿದೆ ಎಂದು ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಮುಖಂಡ ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
ಕಳೆದ ಬಾರಿ ಶೇ. 15ರಷ್ಟು ಹೆಚ್ಚಳ ಮಾಡಿದ್ದ ಸರಕಾರ, ಈ ಬಾರಿ ಅದಕ್ಕಿಂತಲೂ ಕಡಿಮೆ ಮಾಡಿ ಅನ್ಯಾಯವೆಸಗಿದೆ. ಸರಕಾರಿ ನೌಕರರಿಗೆ ಶೇ. 27.5 ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿರುವ ಸರಕಾರ, ಸಾರಿಗೆ ನೌಕರರನ್ನು ಕಡೆಗಣಿಸಿದೆ. ಈ ಬಾರಿ ನೌಕರರು ವಿಭಿನ್ನ ಹಾದಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ನೌಕರರು ಕೆಲಸಕ್ಕೂ ಬರಲ್ಲ. ರಸ್ತೆಗೂ ಇಳಿಯದೇ ಮನೆಯಲ್ಲೇ ಉಳಿದು ಹೋರಾಟ ಮಾಡಲು ನೌಕರರು ನಿರ್ಧರಿಸಿದ್ದಾರೆ. ಈ ಬಾರಿ ಎಲ್ಲ 1.15 ಲಕ್ಷ ಸಿಬ್ಬಂದಿಯೂ ಮುಷ್ಕರದಲ್ಲಿ ಭಾಗಿಯಾಗಲಿದ್ದು, ನಾಲ್ಕು ಸಾರಿಗೆ ನಿಗಮಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

