ಬೆಂಗಳೂರು : ಧರ್ಮಸ್ಥಳದಲ್ಲಿ ಇದುವರೆಗೂ ನಡೆದ ಅತ್ಯಾಚಾರ, ಹತ್ಯೆ ಪ್ರಕರಣಗಳನ್ನು ಎಸ್ಐಟಿ ತನಿಖೆ ನಡೆಸಿದ್ದು, ಕೂಡಲೇ ವರದಿ ಬಿಡುಗಡೆಗೊಳಿಸುವಂತೆ ʼಕೊಂದವರು ಯಾರುʼ ಆಂದೋಲನ ಆಗ್ರಹಿಸಿದೆ.
ಇಂದು ಬೆಂಗಳೂರಿನಲ್ಲಿ ʼಕೊಂದವರು ಯಾರುʼ ಆಂದೋಲನದಿಂದ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿಯಲ್ಲಿ ಎಸ್ಐಟಿ ತನಿಖೆಯ ವರದಿ ಈವರೆಗೆ ಸಾರ್ವಜನಿಕರಿಗೆ ಏಕೆ ತಲುಪಿಲ್ಲ ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಡಲಾಯಿತು ಮತ್ತು ಕೂಡಲೇ ಪ್ರಗತಿ ವರದಿಯನ್ನು ಪಬ್ಲಿಕ್ ಡೊಮೈನ್ಲ್ಲಿ ದೊರಕಿಸಬೇಕೆಂದು ಆಗ್ರಹಿಸಲಾಯಿತು.
ಹಿರಿಯ ವಕೀಲರಾದ ಎಸ್ ಬಾಲನ್ ಮಾತನಾಡಿ, “ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ವಿಚಾರದಲ್ಲಿ ಸುದೀರ್ಘವಾದ ವ್ಯವಸ್ಥೆಯ ವೈಫಲ್ಯವಿದೆ. ಸ್ಥಳೀಯ ಪೊಲೀಸ್, ಸಿಓಡಿ, ಸಿಬಿಐ ಎಲ್ಲರೂ ತನಿಖೆ ಮಾಡಿದ್ದಾರೆ, ಆದರೆ ಎಲ್ಲವೂ ವಿಫಲವಾಗಿವೆ. ಇದು ಒಂದು ರೀತಿಯಲ್ಲಿ ಎಫ್ಸ್ಟೀನ್ ಫೈಲ್ಸ್ ಇದ್ದ ಹಾಗೆ..ಧರ್ಮಸ್ಥಳ ಫೈಲ್ಸ್, ಅಥವಾ ಕರ್ನಾಟಕ ಫೈಲ್ಸ್ ಎನ್ನಬಹುದು… ಎಫ್ಸ್ಟೀನ್ ಫೈಲ್ಸ್ನಲ್ಲೂ ಪುಟ್ಟಮಕ್ಕಳನ್ನು ವಿಕೃತವಾಗಿ ಬಳಸುವ ಪೀಡೋಫಿಲ್ಸ್, ಇಲ್ಲಿ ಕೂಡಾ ನಡೆದಿರುವುದು ಅಂಥದ್ದೆ….” ಎಂದು ಆತಂಕ ವ್ಯಕ್ತಪಡಿಸಿದರು.
‘ಕೊಂದವರು ಯಾರು?’ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಮಕೃಷ್ಣ ಹೆಗಡೆ ಸರ್ಕಾರದಿಂದ ಹಿಡಿದು ಸಿದ್ಧರಾಮಯ್ಯ ಸರ್ಕಾರದವರೆಗೆ ಎಲ್ಲವೂ ಈ ಪ್ರಶ್ನೆಗೆ ಉತ್ತರ ನೀಡಲು ವಿಫಲವಾಗಿವೆ. ಈಗ ಎಸ್ಐಟಿ ರಚನೆಯಾಗಿದೆ, ಅದಕ್ಕೆ ಪೊಲೀಸ್ ಠಾಣೆಯ ಅಧಿಕಾರ ನೀಡಲಾಗಿದೆ. ಆದರೆ ಇದುವರೆಗೆ ಒಂದೂ ಪ್ರಕರಣ ದಾಖಲಿಸಿಲ್ಲ ಯಾಕೆ? ಎಸ್ಐಟಿ ಪ್ರಗತಿಯ ವರದಿ ಈವರೆಗೆ ಸಾರ್ವಜನಿಕರಿಗೆ ಯಾಕೆ ಬಿಡುಗಡೆ ಮಾಡಿಲ್ಲ? ಎಂದು ಪ್ರಶ್ನಿಸಿದರು.
ಕುಸುಮಾವತಿ ಸುಪ್ರೀಂಗೆ ಏಕೆ ಹೋಗಬೇಕು? ಈಗ 74 ಅಸಹಜ ಸಾವುಗಳ ವಿಚಾರದಲ್ಲಿ ಸೌಜನ್ಯ ತಾಯಿ ಕುಸುಮಾವತಿಯವರು ಸಾರ್ವಜನಿಕ ಮೊಕದ್ದಮೆ ಸಲ್ಲಿಸಿದ್ದಾರೆ, ಈ ಅಸಹಜ ಸಾವುಗಳಲ್ಲಿ ಮರಣೋತ್ತರ ಪರೀಕ್ಷೆ ಮಾಡಿಲ್ಲ, ಇನ್ಕ್ವೆಸ್ಟ್ ಮಾಡಿಲ್ಲ, ಕೆಲವುದರಲ್ಲಿ ಎಫ್ಐಆರ್ ಕೂಡಾ ಆಗಿಲ್ಲ, ತನಿಖೆ ಮುಂದುವರೆದಿಲ್ಲ- ಯಾಕೆ?? ಈಗ ಹೈಕೋರ್ಟ್ ಈ ಪ್ರಕರಣಗಳಲ್ಲಿ ಏನು ನಡೆದಿದೆ ಎಂದು ಮಾಹಿತಿ ನೀಡುವಂತೆ ಕೇಳಿದೆ. ಈ ಹೋರಾಟ ಮುಂದುವರೆಯುತ್ತದೆ, ಆದರೆ ಸೌಜನ್ಯ ಪ್ರಕರಣದಲ್ಲಿ ಮರುತನಿಖೆ ಮಾಡಲು ಸರ್ಕಾರಗಳಿಗೇ ಅಧಿಕಾರ ಇದೆಯಲ್ಲ, ಯಾಕೆ ಮಾಡುತ್ತಿಲ್ಲ? ಸಿದ್ದರಾಮಯ್ಯ ಅವರು, ಪರಮೇಶ್ವರ್ ಅವರು ಯಾಕೆ ಮರುತನಿಖೆಯ ಆದೇಶ ನೀಡಬಾರದು? ಅದಕ್ಕೇಕೆ ಕುಸುಮಾವತಿಯವರು ಸುಪ್ರೀಂ ಕೋರ್ಟ್ ಗೆ ಹೋಗಬೇಕು? ಎಂದರು.
ಬಹಿರಂಗ ಪತ್ರ : ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ನಾವೆದ್ದು ನಿಲ್ಲದಿದ್ದರೆ ವೇದಿಕೆಯ ಮಮತಾ ಯಜಮಾನ್ ಮತ್ತು ಮಧುಭೂಷಣ್, ಎನ್ ಎಫ್ ಐ ಡಬ್ಲುನ ಜ್ಯೋತಿ ಎ. ಮತ್ತು ಮಹಿಳಾ ಮುನ್ನಡೆಯ ಮಲ್ಲಿಗೆ ಸಿರಿಮನೆ ಇದ್ದರು. ಸೌಜನ್ಯ ತಾಯಿ ಕುಸುಮಾವತಿ ಅವರ ಹೋರಾಟವನ್ನು ಬೆಂಬಲಿಸಿ ಕೊಂದವರು ಯಾರು ಆಂದೋಲನದ ಬಹಿರಂಗ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಅದೇ ರೀತಿ ಕುಸುಮಾವತಿಯವರು ಕರ್ನಾಟಕ ಹೈಕೋರ್ಟ್ನಲ್ಲಿ 74 ಅಸಹಜ ಸಾವುಗಳ ಕುರಿತು ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಕುರಿತಾದ ಮಾಹಿತಿಯನ್ನು ಎಸ್. ಬಾಲನ್ ನೀಡಿದರು.

