ಮುಟ್ಟಿನ ರಜೆಗೆ ಕಾನೂನಿನ ತೊಡಕು ನೆಪವಾಗಬಾರದು

ಸಂವಿಧಾನದ 14 ಮತ್ತು 15 ನೇ ವಿಧಿಗಳು ಲಿಂಗಾಧಾರಿತ ರಜೆಯ ಅನುಷ್ಠಾನಕ್ಕಾಗಿ ರಾಷ್ಟ್ರವ್ಯಾಪ್ತಿ ಕಾಯಿದೆಯನ್ನು ರೂಪಿಸಲು ಸವಾಲನ್ನು ಒಡ್ಡುತ್ತವೆ ಎನ್ನುವುದು ನಿಜವಾದರೂ ಹೆಣ್ಣಿನ ದೈಹಿಕ ಸಂರಚನೆ ಮತ್ತು ಅವಳ ಪುನರುತ್ಪಾದಕ ಲಕ್ಷಣವು ಮುಟ್ಟಿಗೆ ನೇರ ಸಂಬಂಧವನ್ನು ಹೊಂದಿರುವ ಕಾರಣ ನ್ಯಾಯಾಲಯಗಳು, ಸರಕಾರಗಳು ಅವಳ ಹಕ್ಕನ್ನು ವಿಶೇಷವಾಗಿ ಪರಿಗಣಿಸಬೇಕಿದೆ. ರಾಜ್ಯಗಳಲ್ಲಿ ಮುಟ್ಟಿನ ರಜೆ ನೀತಿಗೆ ಕಾನೂನಿನ ಬೆಂಬಲ ಇಲ್ಲದಿರುವುದರಿಂದ ಮಹಿಳೆಯರು ತಮ್ಮ ಹಕ್ಕನ್ನು ಪಡೆಯುವಲ್ಲಿ ಹಿನ್ನಡೆ ಉಂಟಾಗುತ್ತಿದೆ – ನಾಗಿಣಿ ಅಪ್ಪಸಾನಿ, ಕನ್ನಡ ಪ್ರಾಧ್ಯಾಪಕರು.

ʻವೇತನ ಸಹಿತ ಮುಟ್ಟಿನ ರಜೆ ನೀತಿಯನ್ನು ಕಾನೂನುಬದ್ಧಗೊಳಿಸುವುದರಿಂದ ಅದು ಮಹಿಳೆಯರ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆʼ- ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವ ಕುರಿತು ರಾಷ್ಟ್ರವ್ಯಾಪಿ ನೀತಿಯೊಂದನ್ನು ರೂಪಿಸಲು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಗಾಗಿ ಸುಪ್ರೀಂಕೋರ್ಟ್‌ ವ್ಯಕ್ತಪಡಿಸಿದ ಕಳವಳವಿದು.

ಪ್ರಸ್ತುತ ಭಾರತ ಸಂವಿಧಾನದ ಅಡಿಯಲ್ಲಿ ಅಥವಾ ರಾಷ್ಟ್ರಮಟ್ಟದ ಕಾರ್ಮಿಕ ಕಾನೂನಿನಲ್ಲಿ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಕೇಂದ್ರೀಯ ಕಾನೂನು ಇಲ್ಲದಿರುವುದರಿಂದ ಇದನ್ನು ರೂಪಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರದ ಮರ್ಜಿಗೆ ವಹಿಸಿದೆ. ಸಂವಿಧಾನದ 142 ನೇ ವಿಧಿಯಡಿ ಆಯಾ ರಾಜ್ಯ ಸರಕಾರಗಳು ರಾಜ್ಯನೀತಿಗಳನ್ನು ಜಾರಿಗೆ ತರುವ ಅವಕಾಶವಿದೆ. ಬಿಹಾರವು 1992 ರಷ್ಟು ಹಿಂದೆಯೇ ಮುಟ್ಟಿನ ರಜೆಯನ್ನು ಪರಿಚಯಿಸಿದ ಮೊದಲ ರಾಜ್ಯವಾಗಿದೆ. ನಂತರ ಕೇರಳ(2023), ಒಡಿಶಾ(2024), ಸಿಕ್ಕಿಂ(2024) ರಾಜ್ಯಗಳು ಮುಟ್ಟಿನ ರಜೆಯ ಕುರಿತ ರಾಜ್ಯನೀತಿಗಳನ್ನು ರೂಪಿಸಿವೆ. 

ಬಿಹಾರದಲ್ಲಿ ಸರಕಾರಿ ಮಹಿಳಾ ನೌಕರರಿಗೆ ಮಾತ್ರ ಸತತ ಎರಡು ದಿನದ ವೇತನ ಸಹಿತ ಕಡ್ಡಾಯ ರಜೆಗೆ ಅವಕಾಶವಿದ್ದು ಖಾಸಗಿ ವಲಯಕ್ಕೆ ಇದು ಐಚ್ಛಿಕವಾಗಿದೆ. ಕೇರಳದಲ್ಲಿ ಶೈಕ್ಷಣಿಕ ವಲಯದಲ್ಲಿ ಈ ನೀತಿಯು ಕಡ್ಡಾಯವಾಗಿ ಜಾರಿಯಾಗಿದ್ದು ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಅನ್ವಯಿಸುತ್ತದೆ. ಇದನ್ನು ಕೇರಳ ಸರಕಾರದ ಎಲ್ಲ ವಲಯಗಳಿಗೂ ವಿಸ್ತರಿಸುವ ಸಾಮಾನ್ಯ ನೀತಿಯು ಇನ್ನೂ ಪ್ರಕ್ರಿಯೆಯ ಹಂತದಲ್ಲಿದೆ. ಆದರೆ ಕೇರಳದ ಕೆಲವು ಖಾಸಗಿ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ತಿಂಗಳಿಗೆ ಒಂದು ದಿನದ ವೇತನ ಸಹಿತ ರಜೆಯನ್ನು ನೀಡುತ್ತಿವೆ. ನವೆಂಬರ್‌ 2024 ರಿಂದ ಒಡಿಶಾದಲ್ಲಿ ಈ ನೀತಿಯು ಜಾರಿಯಲ್ಲಿದ್ದು ಸರ್ಕಾರಿ ವಲಯದಲ್ಲಿ ಸಂಪೂರ್ಣ ಕಡ್ಡಾಯವಾಗಿದೆ. ಖಾಸಗಿ ವಲಯಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರದ ನೀತಿಯು ಸಲಹೆಗೆ ಮಾತ್ರ ಸೀಮಿತಗೊಂಡಿದೆ.

ವೇತನ ಸಹಿತ ಮುಟ್ಟಿನ ರಜೆ ನೀತಿಯ ಕುರಿತು ಸುಪ್ರೀಂ ಕಳವಳ

ಹೈಕೋರ್ಟಿನ ವ್ಯಾಪ್ತಿಯಲ್ಲಿ ಬರುವ ಮಹಿಳಾ ನೌಕರರಿಗೆ ಎರಡರಿಂದ ಮೂರು ದಿನಗಳವರೆಗೆ ವೇತನ ಸಹಿತ ರಜೆಯನ್ನು ನೀಡುವ ಮಹತ್ವದ ನಿರ್ಧಾರವನ್ನು 2024 ರಲ್ಲಿ ಸಿಕ್ಕಿಂ ಹೈಕೋರ್ಟ್‌ ತೆಗೆದುಕೊಂಡಿತು. ಆದರೆ ಇದು ಎಲ್ಲ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ವಿಸ್ತಾರಗೊಂಡಿಲ್ಲ. ನವೆಂಬರ್‌ 12, 2025 ರಂದು ಈ ನೀತಿಯನ್ನು ಸರಕಾರಿ ಮತ್ತು ಖಾಸಗಿ ವಲಯಕ್ಕೆ ಕಡ್ಡಾಯಗೊಳಿಸಿದ ಮೊದಲ ರಾಜ್ಯವು ಕರ್ನಾಟಕವಾಗಿದೆ. ಕಾರ್ಖಾನೆ ಕಾಯಿದೆ 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ 1951, ಬೀಡಿ ಮತ್ತು ಸಿಗಾರ್‌ ಕಾರ್ಮಿಕರ ಕಾಯ್ದೆ 1966, ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961 ರಡಿ ನೋಂದಣಿಯಾಗಿರುವ ಎಲ್ಲಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 18 ರಿಂದ 52 ವಯಸ್ಸಿನ ಎಲ್ಲಾ ಕಾಯಂ, ಗುತ್ತಿಗೆ, ಹೊರ ಗುತ್ತಿಗೆ ಮಹಿಳಾ ನೌಕರರು ಈ ವ್ಯಾಪ್ತಿಗೆ ಬರುವುದರಿಂದ ಇದೊಂದು ಸಾರ್ವತ್ರಿಕ ನಿಲುವನ್ನು ಹೊಂದಿದ ಮಹತ್ವದ ಹೆಜ್ಜೆಯಾಗಿದೆ. ಕರ್ನಾಟಕ ನೀತಿಯ ಈ ನಿಲುವನ್ನು ಸುಪ್ರೀಂ ಕೋರ್ಟ್‌ ಮೇಲೆ ಉಲ್ಲೇಖಿಸಿದ ತೀರ್ಪಿನ ಸಮಯದಲ್ಲಿ ಪ್ರಶಂಸೆ ಮಾಡಿದೆ. ವೇತನ ಸಹಿತ ಮುಟ್ಟಿನ ರಜೆಯನ್ನು ಕೇವಲ ಸಹಾನುಭೂತಿಯ ರಜೆಯನ್ನಾಗಿ ನೋಡದೇ ಮಹಿಳೆಯರ ಜೈವಿಕ ಅಗತ್ಯ ಮತ್ತು ಹಕ್ಕು ಎಂದು ಪರಿಗಣಿಸಿರುವುದು ಕರ್ನಾಟಕ ನೀತಿಯ ಪ್ರಗತಿಪರ ಗುಣವಾಗಿದೆ.  ʻಮಹಿಳೆಯ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುವʼ ಸರಕಾರದ ನಿಲುವು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ. ಆದರೆ ಕರ್ನಾಟಕವೂ ಸೇರಿದಂತೆ ಇಲ್ಲಿ ಉಲ್ಲೇಖಿಸಿರುವ ರಾಜ್ಯಗಳಲ್ಲಿ ಈ ನೀತಿಯು ಸರಕಾರದ ಆದೇಶವಾಗಿ ರೂಪುಗೊಂಡಿದೆಯೇ ಹೊರತು ಶಾಸನಬದ್ಧ ಕಾಯಿದೆ ರೂಪವನ್ನು ಹೊಂದಿಲ್ಲ.

ಭಾರತದ ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ಕೇಂದ್ರ ಸರಕಾರವು ಮುಟ್ಟಿನ ರಜೆಯ ಕುರಿತು ರಾಷ್ಟ್ರವ್ಯಾಪ್ತಿ ಕಾನೂನನ್ನು ರೂಪಿಸದ ಹೊರತು ರಾಜ್ಯನೀತಿಗಳು ನ್ಯಾಯಾಲಯದಲ್ಲಿ ಸವಾಲಿಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ಸಂವಿಧಾನದ 14 ಮತ್ತು 15 ನೇ ವಿಧಿಗಳು ಲಿಂಗಾಧಾರಿತ ರಜೆಯ ಅನುಷ್ಠಾನಕ್ಕಾಗಿ ರಾಷ್ಟ್ರವ್ಯಾಪ್ತಿ ಕಾಯಿದೆಯನ್ನು ರೂಪಿಸಲು ಸವಾಲನ್ನು ಒಡ್ಡುತ್ತವೆ ಎನ್ನುವುದು ನಿಜವಾದರೂ ಹೆಣ್ಣಿನ ದೈಹಿಕ ಸಂರಚನೆ ಮತ್ತು ಅವಳ ಪುನರುತ್ಪಾದಕ ಲಕ್ಷಣವು ಮುಟ್ಟಿಗೆ ನೇರ ಸಂಬಂಧವನ್ನು ಹೊಂದಿರುವ ಕಾರಣ ನ್ಯಾಯಾಲಯಗಳು, ಸರಕಾರಗಳು ಅವಳ ಹಕ್ಕನ್ನು ವಿಶೇಷವಾಗಿ ಪರಿಗಣಿಸಬೇಕಿದೆ. ರಾಜ್ಯಗಳಲ್ಲಿ ಮುಟ್ಟಿನ ರಜೆ ನೀತಿಗೆ ಕಾನೂನಿನ ಬೆಂಬಲ ಇಲ್ಲದಿರುವುದರಿಂದ ಮಹಿಳೆಯರು ತಮ್ಮ ಹಕ್ಕನ್ನು ಪಡೆಯುವಲ್ಲಿ ಹಿನ್ನಡೆ ಉಂಟಾಗುತ್ತಿದೆ. ಕರ್ನಾಟಕದಲ್ಲಿ ಮುಟ್ಟಿನ ರಜೆಯನ್ನು ಕೊಡಲು ನಿರಾಕರಿಸುವ ಉದ್ಯೋಗದಾತರ ವಿರುದ್ಧ ಕರ್ನಾಟಕದ ಕಾರ್ಮಿಕ ಇಲಾಖೆಯು ನೋಟೀಸು ಜಾರಿಗೊಳಿಸುವ ಅಥವಾ ಸಂಬಂಧಿತ ಪ್ರಾಧಿಕಾರದಿಂದ ಮೌಖಿಕ ಸೂಚನೆಗಳನ್ನು ರವಾನಿಸುವ ಸಾಧ್ಯತೆ ಇದೆ. ಆದರೆ ಈ ಪ್ರಕ್ರಿಯೆಯಲ್ಲಿ ದೂರು ಸಲ್ಲಿಸಿದ ಮಹಿಳಾ ನೌಕರಳ ಉದ್ಯೋಗ ಭದ್ರತೆಗೆ, ವೈಯಕ್ತಿಕ ಘನತೆಗೆ ಎದುರಾಗಬಹುದಾದ ಸವಾಲುಗಳಿಗೇನೂ ಕಡಿಮೆ ಇಲ್ಲ. ಮುಟ್ಟಿನ ರಜೆಗಾಗಿ ಹಕ್ಕೊತ್ತಾಯವನ್ನು ಮಂಡಿಸುವ ನೌಕರಳ ವಿರುದ್ಧ ಸಂಬಳವನ್ನು ಕಡಿತಗೊಳಿಸುವ, ಭಡ್ತಿಯನ್ನು ತಡೆಯುವ, ಕೆಲಸದಿಂದ ವಜಾ ಮಾಡುವ, ಸಾಮರ್ಥ್ಯವನ್ನು ನಿರ್ಲಕ್ಷಿಸುವ ಉದ್ಯೋಗದಾತರ ಅಮಾನುಷ ವರ್ತನೆಗಳು, ಖಾಸಗಿ ಉದ್ಯೋಗ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ರೂಪಿಸುತ್ತಿರುವ ಮಾಲೀಕ – ನೌಕರರ ಕರಾರು ಪತ್ರದಲ್ಲಿ ನೌಕರನ ಹಕ್ಕುಗಳನ್ನು ಮೊಟಕುಗೊಳಿಸುವ ನೌಕರ/ಳ ವಿರೋಧೀ ಅಂಶಗಳು, ʻಪುರುಷ ನೌಕರರಿಗೆ ಮೊದಲ ಆದ್ಯತೆʼ ಎಂಬ ಉದ್ಯೋಗದಾತರ ಇತ್ತೀಚಿನ ಜಾಹೀರಾತುಗಳು, ಮುಟ್ಟಿನ ರಜೆಯನ್ನು ರದ್ದುಪಡಿಸಬೇಕೆಂದು ಮಹಿಳೆಯರೇ ಸರಕಾರದ ವಿರುದ್ಧ ಹೈ ಕೋರ್ಟ್‌ನಲ್ಲಿ ದಾವೆ ಹೂಡಿದ ಬೆಳವಣಿಗೆಗಳು ಮಹಿಳಾ ಸಬಲೀಕರಣದ ದಾರಿಯಲ್ಲೂ ಮಹಿಳೆ ಎದುರಿಸಬೇಕಾದ ಹಿಮ್ಮುಖ ಚಲನೆಯ ಸವಾಲಿಗೆ ನಿದರ್ಶನವಾಗಿವೆ.

ಮುಟ್ಟಿನ ರಜೆ ನೀತಿಯನ್ನು ಮಹಿಳೆಯ ಸಬಲೀಕರಣಕ್ಕೆ ಬಳಸ ಬಹುದಲ್ಲವೇ?

ಉಲ್ಲೇಖಿತ ತೀರ್ಪಿನ ಸುಪ್ರೀಂ ಕೋರ್ಟ್‌ನ  ಕಳವಳವೂ ಇದೇ ಆಗಿದೆ. ದಕ್ಷಿಣ ಕೊರಿಯಾದಲ್ಲಿ 72% ಮಹಿಳೆಯರು ಕೆಲಸದ ಸ್ಥಳದಲ್ಲಿನ ಪೂರ್ವಾಗ್ರಹ ಮತ್ತು 60% ಪುರುಷ ಸಹೋದ್ಯೋಗಿಗಳ ವಿರೋಧಿ ದೃಷ್ಟಿಕೋನದ ಕಾರಣಕ್ಕಾಗಿ ಮುಟ್ಟಿನ ರಜೆ ಪಡೆಯುತ್ತಿಲ್ಲವೆಂದು ಸಮೀಕ್ಷೆಯೊಂದು ಹೇಳುತ್ತದೆ. ಕರ್ನಾಟಕದ ನೀತಿಯ ಕುರಿತು ಬೆಂಗಳೂರಿನ ನೂರು ಪುರುಷರನ್ನು ಸಮೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಕೇವಲ ಐವರು ಮಾತ್ರ ಮುಟ್ಟಿನ ರಜೆಯನ್ನು ಬೆಂಬಲಿಸಿದರೆಂಬ ಗೆಳೆಯರೊಬ್ಬರ ಮಾತು ಮುಟ್ಟಿನ ಕುರಿತ ಸರ್ವವ್ಯಾಪಿ ಪೂರ್ವಾಗ್ರಹಕ್ಕೆ ಹಿಡಿದ ಕನ್ನಡಿಯಾಗಿದೆ. ಅಕ್ಕ ಹೇಳಿದಂತೆ ನೊಂದವರ ನೋವ ನೋಯದವರೆತ್ತ ಬಲ್ಲರು! ಮುಟ್ಟಿನ ಸಂದರ್ಭದಲ್ಲಿ ಅನುಭವಿಸಬೇಕಾದ ಯಾತನೆ ಸುಳ್ಳೇ? ಅಲ್ಲ. ಸರಕಾರದ ನೀತಿಯಡಿ ರಜೆ ಪಡೆಯುವ ಅವಕಾಶ ಇದೆಯೇ? ಹೌದು. ಅದನ್ನು ಸಲೀಸಾಗಿ ಪಡೆಯುವ ಅವಕಾಶ ಇದೆಯೇ? ಇಲ್ಲ. ಇದು ಕರ್ನಾಟಕದ ಉದ್ಯೋಗಸ್ಥ ಮಹಿಳೆಯ ಸದ್ಯದ ದುಃಸ್ಥಿತಿ. ಇದಕ್ಕೆ ಸರಕಾರವನ್ನು ದೂಷಿಸಬೇಕೋ?ಅಥವಾ ಖಾಸಗಿ ಉದ್ಯೋಗದಾತರನ್ನೋ? ಖಾಸಗಿ ಸಂಸ್ಥೆಗಳಿಗೆ ಪರವಾನಗಿ ಕೊಡುವ, ನವೀಕರಿಸುವ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು ಒಡ್ಡುವ ಪ್ರಲೋಭನೆಗಳಿಗೆ ಒಳಗಾಗುವ ಸರಕಾರದ ಅಧಿಕಾರಿ ವರ್ಗದ ನ್ಯೂನತೆಯನ್ನು ಮುಂದಿಟ್ಟು ಮಹಿಳೆಗೆ ಮುಟ್ಟಿನ ರಜೆ ನಿರಾಕರಿಸಿದ ಉದಾಹಣೆಗಳೂ ಇವೆ. ಈ ಕುರಿತು ಖಾಸಗಿ ವಲಯಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸರಕಾರವು ರೂಪಿಸಬೇಕು. ಉದ್ಯೋಗಸ್ಥ ಮಹಿಳೆಯ ಕಾರ್ಯದಕ್ಷತೆಯನ್ನು ಹೆಚ್ಚಿಸಲು ನೀತಿಯನ್ನು ರೂಪಿಸುವಲ್ಲಿ ಸರಕಾರವು ತೋರಿಸಿದ ಕಾಳಜಿ ಮತ್ತು ಬದ್ಧತೆಯು ಅದು ಅನುಷ್ಠಾನಗೊಂಡಾಗ ಮಾತ್ರ ಸಾಕಾರವಾಗುತ್ತದೆಂಬುದನ್ನು ಕರ್ನಾಟಕ ಸರಕಾರವು ಅರಿಯಬೇಕು.

ನಾಗಿಣಿ ಅಪ್ಪಸಾನಿ

ಇವರು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಐಎಸ್‌ಬಿಆರ್ ಕಾನೂನು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಮತ್ತು ಪ್ರಥಮ ರ್ಯಾಂಕ್ ನೊಂದಿಗೆ ಕನ್ನಡ ಎಂ.ಎ ಪದವಿ ಪಡೆದಿದ್ದು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಸಂಶೋಧನಾರ್ಥಿಯಾಗಿದ್ದಾರೆ. ಕನ್ನಡ –ತೆಲುಗು ದ್ವಿಭಾಷಿ ಸಾಹಿತ್ಯ ಅನುವಾದಕರಾಗಿದ್ದಾರೆ.

ಇದನ್ನೂ ಓದಿ- http://“ನಗರದ ಸಂತೆಯಲ್ಲೊಬ್ಬ ಒಂಟಿ” https://kannadaplanet.com/a-lonely-man-in-the-city/

More articles

Latest article

Most read