ಬೆಂಗಳೂರು : ಪಿ. ಲಂಕೇಶರು ಪತ್ರಿಕೋದ್ಯಮ ಮತ್ತು ಸಿನಿಮಾ ನಿರ್ದೇಶನ ಎರಡೂ ಕ್ಷೇತ್ರಗಳಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪತ್ರಕರ್ತ ಪಿ. ಲಂಕೇಶ್ ಅವರ ಆಯ್ದ ಬರಹಗಳನ್ನೊಳಗೊಂಡ ಮೂರು ಭಾಗಗಳ ‘ಟೀಕೆ-ಟಿಪ್ಪಣಿ’ ಪುಸ್ತಕ ಮತ್ತು ಅವರ ಕಥೆಗಳ ‘ಆಡಿಯೋ ಬುಕ್’ ಬಿಡುಗಡೆ ಸಮಾರಂಭ ನಡೆಯಿತು. ಇಂದಿರಾ ಲಂಕೇಶ್ ಪ್ರಕಾಶನವು ಲಂಕೇಶರ ಚಿಂತನೆಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಬಳಿಕ ಮಾತನಾಡಿದ ಅವರು, ಲಂಕೇಶರ ‘ಎಲ್ಲಿಂದಲೋ ಬಂದವರು’ ಚಲನಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತಮಗೆ ಮೊದಲ ಬಾರಿಗೆ ಅವರ ಪರಿಚಯವಾಯಿತು ಎಂದು ಸ್ಮರಿಸಿದರು.
ಮೈಸೂರು ಜಿಲ್ಲೆಯ ಕುಪ್ಪೆಗಾಲಿನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಂದು ವಕೀಲರಾಗಿದ್ದ ತಾವು, ತಮ್ಮ ಸ್ನೇಹಿತ ಮಹೇಶ್ ಅವರ ಮನೆಗೆ ವಾರಾಂತ್ಯದಲ್ಲಿ ಭೇಟಿ ನೀಡುತ್ತಿದ್ದಾಗ, ಅದೇ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದರಿಂದ ಲಂಕೇಶರು, ನಿರ್ಮಾಪಕ ಮೋಹನ್ ಕೊಂಡಜ್ಜಿ ಮತ್ತು ನಟ ಸುರೇಶ್ ಹೆಬ್ಳೀಕರ್ ಅವರ ಒಡನಾಟ ದೊರೆಯಿತು. ಆರಂಭದಲ್ಲಿ ಸಿನಿಮಾದವರ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ ಮತ್ತು ಲಂಕೇಶರ ನೇರ ನುಡಿಗಳ ಬಗ್ಗೆ ಟೀಕೆಗಳಿದ್ದರೂ, ಅವರ ಪರಿಚಯವಾದ ನಂತರ ಅವರ ವ್ಯಕ್ತಿತ್ವಕ್ಕೆ ಮಚ್ಚೆ ತಾವು ಲಂಕೇಶರ ಅಭಿಮಾನಿಯಾಗಿ ಬದಲಾದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಲಂಕೇಶರ ಬರಹಗಳ ಮರುಸಂಕಲನದ ಜವಾಬ್ದಾರಿ ಹೊತ್ತಿದ್ದ ಸಂಪಾದಕ ಡಾ. ನಟರಾಜ್ ಹುಳಿಯಾರ್ ಮಾತನಾಡಿ, ಒಬ್ಬ ಲೇಖಕನಿಗಿರಬೇಕಾದ ಆಂತರಿಕ ಬದ್ಧತೆಯ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ವೈಚಾರಿಕ ಬಂಡಾಯದ ಮನೋಭಾವವಿಲ್ಲದಿದ್ದರೆ ಒಬ್ಬ ಉತ್ತಮ ಲೇಖಕನಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಲಂಕೇಶರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ವಹಿಸಿದ್ದರು. ಹಿರಿಯ ವಿಮರ್ಶಕಿ ಎಂ. ಎಸ್. ಆಶಾದೇವಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಟರಾದ ಪ್ರಕಾಶ್ ರೈ ಮತ್ತು ಕಿಶೋರ್ ಪಾಲ್ಗೊಂಡಿದ್ದರು. ವೇದಿಕೆಯ ಮೇಲೆ ಇಂದಿರಾ ಲಂಕೇಶ್, ಕವಿತಾ ಲಂಕೇಶ್, ಬಾಲಾಜಿ ಮನೋಹರ್, ವೆಂಕಟೇಶ್ ಪ್ರಸಾದ್, ಎಂ. ಡಿ. ಪಲ್ಲವಿ, ಚಂದ್ರೇಗೌಡ, ಸಾಸ್ಥೆಹಳ್ಳಿ ಸತೀಶ್, ಸುಷ್ಮಾ, ಮೋಹನ್ ಕೊಂಡಜ್ಜಿ ಹಾಗೂ ಸುಬ್ಬು ಹೊಲೆಯಾರ್ ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.

