ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ನಲ್ಲಿ ಭಾರತ ತಂಡವು ಎದುರಾಳಿ ನ್ಯೂಜಿಲೆಂಡ್ ಸೋಲಿಸುವ ಮೂಲಕ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 19 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು.
ಭಾರತ 96 ರನ್ಗಳಿಂದ ಗೆದ್ದಿದೆ. ದೇಶದ ವಿವಿಧ ಮೂಲೆಗಳಿಂದ ಬಂದ ಭಾರತೀಯ ಅಭಿಮಾನಿಗಳು 1,30,000 ಪ್ರೇಕ್ಷಕರ ಸಾಮರ್ಥ್ಯವಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಅಭಿಮಾನಿಗಳು ತುಂಬಿದ್ದರು.
ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ, ಭಾರತವು ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ದೇಶವಾಗಿದೆ. ತವರು ನೆಲದಲ್ಲಿ ಅಭಿಮಾನಿಗಳ ಮುಂದೆ ಸೂರ್ಯ ಕುಮಾರ್ ಯಾದವ್ ತಂಡ ಗೆದ್ದಿದೆ.
ಭಾರತ ತಂಡದ ದಾಖಲೆಗಳು : ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ
ತಮ್ಮ ಟಿ20 ವಿಶ್ವಕಪ್ ಕಿರೀಟವನ್ನು ಉಳಿಸಿಕೊಳ್ಳುವ ಮೊದಲ ತಂಡ
ತವರು ನೆಲದಲ್ಲಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದ ಮೊದಲ ತಂಡ
ಟಾಸ್ ಸೋತಿದ್ದ ಭಾರತ : ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ ಉತ್ತಮ ಆರಂಭ ಪಡೆಯಿತು. ಇದೇ ಮೊದಲ ಬಾರಿಗೆ ಭಾರತ ಮೊದಲ ವಿಕೆಟಿಗೆ 98 ರನ್ ಜೊತೆಯಾಟ ಪಡೆಯಿತು.
ಈ ಟೂರ್ನಿಯಲ್ಲಿ ಭಾರತದ ಪರ ಮೊದಲ ವಿಕೆಟ್ 98 ರನ್ ಜೊತೆಯಾಟ ಬಂದಿದ್ದು ಇದೇ ಮೊದಲು. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 52 ರನ್ ಹೊಡೆದಿದ್ದರೆ ಸ್ಯಾಮ್ಸನ್ 22 ಎಸೆತಗಳಲ್ಲಿ 38 ರನ್ ಹೊಡೆದಿದ್ದರು. ಅಭಿಷೇಕ್ 52 ರನ್(21 ಎಸೆತ, 6 ಬೌಂಡರಿ, 3 ಸಿಕ್ಸ್) ಹೊಡೆದು ಔಟಾದರು.
ನಂತರ ಬಂದ ಇಶನ್ ಕಿಶನ್ ತಾನು ಕಡಿಮೆ ಇಲ್ಲ ಎನ್ನುವಂತೆ ಬ್ಯಾಟ್ ಬೀಸಿದರು. ಸಂಜು ಮತ್ತು ಇಶನ್ ಎರಡನೇ ವಿಕೆಟಿಗೆ 48 ಎಸೆತಗಳಲ್ಲಿ105 ರನ್ ಜೊತೆಯಾಟವಾಡಿದರು. ಸಂಜು ಸ್ಯಾಮ್ಸನ್ 89 ರನ್(46 ಎಸೆತ, 5 ಬೌಂಡರಿ, 8 ಸಿಕ್ಸ್) ಗಳಿಸಿ ಔಟಾದರೆ ಇಶನ್ ಕಿಶನ್ 54 ರನ್(25 ಎಸೆತ, 4 ಬೌಂಡರಿ, 4 ಸಿಕ್ಸ್) ಹೊಡೆದು ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಸೂರ್ಯ ಸಿಕ್ಸ್ ಹೊಡೆಯುವ ಪ್ರಯತ್ನದಲ್ಲಿ ಬೌಂಡರಿ ಗೆರೆಯ ಬಳಿ ರಚಿನ್ಗೆ ಕ್ಯಾಚ್ ನೀಡಿ ಔಟಾದರು.
ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 203 ರನ್ ಹೊಡೆದು ಉತ್ತಮ ಸ್ಥಿತಿಯಲ್ಲಿದ್ದ ಭಾರತ 204 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ನಂತರ ಬಂದ ಹಾರ್ದಿಕ್ ಪಾಂಡ್ಯ ಅವರು ಸಿಕ್ಸ್ ಹೊಡೆಯಲು ಹೋಗಿ 18 ರನ್(13 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದು ವಿಕೆಟ್ ಒಪ್ಪಿಸಿದರು.
ಕೊನೆಗೆ ಬಂದ ಶಿವಂ ದುಬೆ ಔಟಾಗದೇ 8 ಎಸೆತಗಳಲ್ಲಿ 26 ರನ್(3 ಬೌಂಡರಿ, 2 ಸಿಕ್ಸ್) ಚಚ್ಚಿದರೆ ತಿಲಕ್ ವರ್ಮಾ ಔಟಾಗದೇ 8 ರನ್ ಹೊಡೆದರು. ಭಾರತ ಕೊನೆಯ 30 ಎಸೆತಗಳಲ್ಲಿ ಕೇವಲ 55 ರನ್ ಹೊಡೆದ ಭಾರತ ಅಂತಿವಾಗಿ 255 ರನ್ ಹೊಡೆಯಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್
ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಹಾರ್ದಿಕ್ ಪಾಂಡ್ಯ ಎಸೆದ ಇನ್ನಿಂಗ್ಸ್ನ 2ನೇ ಓವರ್ನಲ್ಲಿ 21 ರನ್ ಚಚ್ಚಿದರು. ಆದರೆ ಅಕ್ಷರ್ ಪಟೇಲ್ ಎಸೆದ 3ನೇ ಓವರ್ನ ನಾಲ್ಕನೇ ಎಸೆತದಲ್ಲಿ 9 ರನ್ ಗಳಿಸಿದ್ದ ಫಿನ್ ಅಲೆನ್ ಸಿಕ್ಸ್ ಸಿಡಿಸುವ ಪ್ರಯತ್ನದಲ್ಲಿ ಬೌಂಡರಿ ಗೆರೆಯ ಬಳಿ ತಿಲಕ್ ವರ್ಮಾ ಅವರಿಗೆ ಕ್ಯಾಚ್ ನೀಡಿ ಔಟಾದರು.
ನ್ಯೂಜಿಲೆಂಡಿಗೆ ಎರಡನೇ ಆಘಾತ ನೀಡಿದ್ದ ಬುಮ್ರಾ. ತಮ್ಮ ಮೊದಲ ಎಸೆತದಲ್ಲೇ 1 ರನ್ ಗಳಿಸಿದ್ದ ರಚಿನ್ ರವೀಂದ್ರ ಅವರನ್ನು ಔಟಾದರು. ಇಶನ್ ಕಿಶನ್ ಅವರು ಉತ್ತಮ ಕ್ಯಾಚ್ ಹಿಡಿದು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಬಂದ ಗ್ಲೇನ್ ಫಿಲಿಪ್ಸ್ 5 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಬೌಲ್ಡ್ ಮಾಡಿದರು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 31 ರನ್ ಗಳಿಸಿದ್ದ ನ್ಯೂಜಿಲೆಂಡ್ 47 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು.
ಮಾರ್ಕ್ ಚಾಪ್ಮನ್ ಮತ್ತು ಟಿಮ್ ಸೀಫರ್ಟ್ ಅವರು ನಾಲ್ಕನೇ ವಿಕೆಟಿಗೆ 23 ರನ್ ಜೊತೆಯಾಟವಾಡಿದರು. ಆದರೆ ಹಾರ್ದಿಕ್ ಎಸೆದ ಓವರ್ನಲ್ಲಿ ಬಲವಾಗಿ ಹೊಡೆಯಲು ಹೋಗಿ ಚಾಪಮನ್ ಬ್ಯಾಟಿಗೆ ತಗುಲಿ ವಿಕೆಟಿಗೆ ಬಡಿಯಿತು. ಚಾಪಮನ್ ಔಟಾದ ಬೆನ್ನಲ್ಲೇ ಒಂದು ಸಿಕ್ಸ್ ಸಿಡಿಸಲು ಹೋಗಿ 52 ರನ್ (26 ಎಸೆತ,2 ಬೌಂಡರಿ, 5 ಸಿಕ್ಸ್) ಹೊಡೆದಿದ್ದ ಟಿಮ್ ಸೀಫರ್ಟ್ ಇಶನ್ ಕಿಶನ್ ಬೌಂಡರಿ ಬಳಿ ಹಿಡಿದ ಉತ್ತಮ ಕ್ಯಾಚ್ಗೆ ಬಲಿಯಾದರು.
ಡ್ಯಾರಿಲ್ ಮಿಚೆಲ್ 37 ರನ್ ಹೊಡೆದು ಔಟಾದರು. 16ನೇ ಓವರ್ ಎಸೆದ ಬುಮ್ರಾ ಜೇಮ್ಸ್ ನಿಶಮ್ ಮತ್ತು ಮ್ಯಾಟ್ ಹೆನ್ರಿ ಅವರನ್ನು ಬೌಲ್ಡ್ ಮಾಡಿದರು. ಮಿಚೆಲ್ ಸ್ಯಾಂಟ್ನರ್ 43 ರನ್(35 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದು ಬುಮ್ರಾಗೆ ವಿಕೆಟ್ ಒಪ್ಪಿಸಿದರು.

