ಸ. ಉಷಾ ಅವರ ಕವಿತೆಗಳಲ್ಲಿ ಚಲನೆಯಿದ್ದು ಜೀವದ ಶೃತಿಯನ್ನು ಧ್ಯಾನಸ್ಥವಾಗಿ ಕೇಳಿಸಿಕೊಳ್ಳುವ ತನ್ಮಯತೆಯೂ ಇದ್ದು ವೈಚಾರಿಕ ನೆಲಗಟ್ಟಿನಿಂದ ಬದುಕನ್ನು ಕಟ್ಟುವ ಹಂಬಲವುಳ್ಳ ಸ. ಉಷಾ ಮೇಡಂ ಕನ್ನಡದ ಮಹಿಳಾ ಕಾವ್ಯದ ದಿಟ್ಟ ಹಾಗೂ ಪರಿಪಕ್ವ ಧ್ವನಿ – ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್, ಹಾಸನ.
ಕಾವ್ಯವು ಮಾನವ ಭಾವನೆಗಳ ಆಳವನ್ನು ಭೇದಿಸುವ ಮತ್ತು ಆಳವಾದ ಆಲೋಚನೆಗಳನ್ನು ಅನಾವರಣಗೊಳಿಸುವ ಕಲಾತ್ಮಕ ಅಭಿವ್ಯಕ್ತಿ. ಇಂತಹ ಕಾವ್ಯ ಕೃಷಿಯ ಮೂಲಕ ನಾಡಿನಲ್ಲಿ ಎಲ್ಲರ ಗಮನ ಸೆಳೆದ ಕವಯಿತ್ರಿ ವಿಮರ್ಶಕಿ ಪ್ರಾಧ್ಯಾಪಕಿ ಡಾ. ಸ. ಉಷಾ. ಸ.ಉಷಾ ಮೇಡಂ ನನ್ನ ಕಾಲೇಜು ಶಿಕ್ಷಣದ ಕನ್ನಡ ಮೇಷ್ಟ್ರು. ನಾನು ಅವರ ಶಿಷ್ಯೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಅವರು ಅರಸೀಕೆರೆಯ ಹೊಯ್ಸಳೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ನನ್ನ ಅಕ್ಕ ತಮ್ಮ ಎಲ್ಲರಿಗೂ ಅವರು ಕನ್ನಡದ ಗುರುಗಳು. ಮೆದು ಮಾತು, ಮೃದು ಸ್ವಭಾವವುಳ್ಳವರು. ಸದಾ ಚಿಂತನಾಶೀಲರಾಗಿದ್ದ ಅವರು ನಮಗೆ ಪಿಯುಸಿಯಲ್ಲಿ ಪಠ್ಯವಿದ್ದ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಬೋಧಿಸುವಾಗ ಇಡೀ ಮಲೆನಾಡಿನ ಚಿತ್ರಣವನ್ನು ನಮ್ಮ ಕಣ್ಣುಮುಂದೆ ತೆರೆದಿಡುತ್ತಿದ್ದಿದ್ದು ಇಂದಿಗೂ ಕೂಡ ನನ್ನ ಸೃತಿಪಟಲದಲ್ಲಿ ಮಾರ್ದನಿಸುತ್ತಿರುತ್ತದೆ. ಸುಮಾರು ಮೂವತ್ತು ವರ್ಷಗಳ ನಂತರ ಅವರನ್ನು ಇತ್ತೀಚೆಗಷ್ಟೇ ಹಾಸನದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದು ಆ ದಿನ ನನಗೆ ಒಂದು ಸುದಿನವೇ ಆಯ್ತು. ಬಹಳ ಆತ್ಮೀಯವಾಗಿ ನನ್ನ ಅಪ್ಪಿಕೊಂಡು ಮಾತನಾಡಿಸಿ ಅವರ ಹಳೆಯ ವಿದ್ಯಾರ್ಥಿಗಳನ್ನೆಲ್ಲಾ ನೆನಪಿಸಿಕೊಂಡು ಒಂದಿಷ್ಟು ಮಾತುಕತೆಯನ್ನು ನಡೆಸಿದ್ದು ಅಲ್ಲದೆ ನನ್ನ ಚೊಚ್ಚಲ ಕವನ ಸಂಕಲನ “ಒದ್ದೆ ಕಣ್ಣಿನ ಬಿಂಬ’’ ಕ್ಕೆ ಮುನ್ನುಡಿಯನ್ನು ಬರೆದು ನನ್ನ ಸಾಹಿತ್ಯ ಕೃಷಿಗೆ ಹರಸಿರುವುದು ನನ್ನ ಸೌಭಾಗ್ಯ.
ಎಪ್ಪತ್ತರ ದಶಕದಲ್ಲಿಯೇ ಜಾತಿಪದ್ಧತಿಯನ್ನು ತೊಡೆದು ಹಾಕುವ ಸಲುವಾಗಿಯೇ ಪ್ರಾಧ್ಯಾಪಕ ಮಂಜಪ್ಪ ಅವರೊಂದಿಗೆ ಅಂತರ್ಜಾತಿ ವಿವಾಹವಾಗಿ ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿ ಬದುಕು ಸಾಗಿಸಿದ ದಿಟ್ಟ ಮಹಿಳೆ. ಅವರ ಮುಖಭಾವ ಸದಾ ಪ್ರಸನ್ನತೆಯಿಂದ ಕೂಡಿದ್ದರೂ ಅವರೊಳಗೆ ಸಮಾಜದಲ್ಲಿ ನಡೆಯುವ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ, ಮಹಿಳೆಯರ ಶೋಷಣೆಗಳನ್ನು ಖಂಡಿಸುತ್ತಾ ಗುಪ್ತಗಾಮಿನಿಯಂತೆ ತಣ್ಣಗೆ ಕಾವ್ಯಕ್ಷೇತ್ರದಲ್ಲಿ ತಮ್ಮ ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಾರೆ. ಅವರೊಂದಿಗೆ ನಾನು ಮಾತಿಗಿಳಿದಾಗ ಅವರ ಬಾಲ್ಯ ಮತ್ತು ಕಾಲೇಜು ದಿನಗಳನ್ನು ಮೆಲುಕು ಹಾಕಿದ್ದು ಒಂದು ಅವಿಸ್ಮರಣೀಯವಾದುದು.
1954 ಏಪ್ರಿಲ್ 5 ರಲ್ಲಿ ಹುಟ್ಟಿದ್ದು. ಮೂಲತಃ ಮೈಸೂರಿನವರಾದ ಇವರು ಮೈಸೂರಿನ ಮಹಾರಾಣಿ ಕಾಲೇಜು, ತಿಪಟೂರಿನ ಕಲ್ಪತರು ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಂಗಾರದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಒಲವು, ಕಾವ್ಯರಚನೆಯ ಗೀಳು ಅನುಭವ-ಕಲ್ಪನೆ ಮತ್ತು ಆಲೋಚನೆಗಳ ತ್ರಿವೇಣಿ ಸಂಗಮದಲ್ಲಿ ಮೈದಳೆದು ಕವನಗಳಿಂದ ಓದುಗರೆದೆಯಲ್ಲಿ ಉಳಿದವರು ಸ.ಉಷಾ.
ಸ.ಉಷಾ ತಮ್ಮ ಐದನೆಯ ತರಗತಿಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಹರಿಕಥೆಗಳಲ್ಲಿ ಹೇಳುತ್ತಿದ್ದ ಹರಿಶ್ಚಂದ್ರಕಾವ್ಯ, ಕುಮಾರವ್ಯಾಸ ಭಾರತದ ಸ್ವಾರಸ್ಯಕರವಾದ ಭಾಗಗಳು, ಭಕ್ತಿಗೀತೆಗಳು, ರೇಡಿಯೋದಲ್ಲಿ ಕೇಳುತ್ತಿದ್ದ ಪಿ.ಕಾಳಿಂಗರಾಯರು ಹಾಡುತ್ತಿದ್ದ ಭಾವಗೀತೆಗಳು ಇವರ ಮನಸ್ಸಿನೊಳಗೆ ಕೋಮಲವಾದ ಲೋಕವನ್ನು ಕಟ್ಟಿಕೊಡುತ್ತಿದ್ದವು. ಮತ್ತು ಕೆಲವು ತಲ್ಲಣಗಳನ್ನೂ ಹುಟ್ಟು ಹಾಕುತ್ತಿದ್ದವು. ನಂತರ ಇವರ ಆಸಕ್ತಿಯಂತೆ ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು ಐಚ್ಚಿಕ ವಿಷಯವನ್ನಾಗಿ ಅಭ್ಯಸಿಸಿ ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಂಡರು. ಮೊದಲನೆ ವರ್ಷದ ಎಂ.ಎ ಪದವಿ ವ್ಯಾಸಂಗ ಮಾಡುವಾಗಲೇ ಕವಿತೆಯನ್ನು ಬರೆಯುವತ್ತ ಆಸಕ್ತರಾಗಿದ್ದರು.

ಎಪ್ಪತ್ತರ ದಶಕದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ಸ.ಉಷಾ ಕಾವ್ಯರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರ ಮೊದಲ ಕವಿತೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ಆ ಮೂಲಕ ರಾಜ್ಯದಲ್ಲಿ ಕವಯಿತ್ರಿ ಎಂದು ಗುರುತಿಸಿಕೊಂಡರು. 1976ರಲ್ಲಿ ಮೈಸೂರಿನಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ನಡೆದ ಲೇಖಕಿಯರ ಸಮ್ಮೇಳನ, ತದನಂತರ ಬೆಂಗಳೂರಿನಲ್ಲಿ ಆಗಷ್ಟೇ ಸ್ಥಾಪನೆಯಾದ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪನೆ ಈ ಎರಡೂ ಮಹಿಳಾ ಸಾಹಿತ್ಯಕ್ಕೆ ಸಂಬಂಧಪಟ್ಟ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ನಂತರ ಸಮ್ಮೇಳನಗಳು ವಿಚಾರಗೋಷ್ಠಿಗಳು ಪ್ರಕಟಣೆಗಳಲ್ಲಿ ತೊಡಗಿಕೊಂಡರು. ಇದೇ ಕಾಲಘಟ್ಟದಲ್ಲಿ ಬಂಡಾಯಸಾಹಿತ್ಯ ಸಂಘಟನೆ, ದಲಿತಸಾಹಿತ್ಯ ಸಂಘಟನೆಗಳು ಮಹಿಳಾ ಸಾಹಿತಿಗಳಿಗೆ ಒಂದು ಹೊಸ ಆಯಾಮವನ್ನೇ ಸೃಷ್ಟಿಸಿದವು.
ತಾವು ಎಂ.ಎ ಮೈಸೂರಿನಲ್ಲಿ ಓದುವಾಗ ಮಾನಸಗಂಗೋತ್ರಿಯಲ್ಲಿ ನಡೆದ ಕೆಲವು ಪ್ರಸಂಗಗಳನ್ನು ನನ್ನೊಂದಿಗೆ ಮೆಲುಕು ಹಾಕಿದ ಅವರು ಈ ನಾಡಿನ ಶ್ರೇಷ್ಠ ಕಾದಂಬರಿಕಾರರು ಆದ ದೇವನೂರು ಮಹಾದೇವ ನನಗಿಂತ ಜೂನಿಯರ್, ನಮ್ಮ ಗಂಗೋತ್ರಿಯಲ್ಲಿ ಮೇಷ್ಟ್ರಾಗಿದ್ದ ಸುಧಾಕರ್ ಅವರು ಒಂದು ದಿನ ಕರೆಸಿಕೊಂಡು ಮೈಸೂರು ಆಕಾಶವಾಣಿಯಲ್ಲಿ ಒಂದು ಯುವವಾಣಿ ಪ್ರೋಗ್ರಾಂ ಮಾಡ್ತಾರಂತೆ, ಹೋಗಿ ಮಾತಾಡಿ ಬನ್ನಿ ಎಂದು ಹೇಳಿದರು. ಹಾಗೆ ಹೋಗಿ ಮಾತಾಡಿದ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಇದ್ದರು. ಅವರ ಶಿಷ್ಯರೊಬ್ಬರು ಬಂದಿದ್ದರು. ನಮ್ಮ ಒಲವುಗಳು ತ.ರಾ.ಸು ಅವರ ಸಾಹಿತ್ಯದ ಒಲವುಗಳಿಗಿಂತ ಸ್ಪಷ್ಟವಾಗಿ ಬೇರೆಯಾಗಿದ್ದವು. ತ.ರಾ.ಸು ಅವರು ಒಂದು ಸುತ್ತು ಎಲ್ಲರೂ ಮಾತಾಡಿದ ಮೇಲೆ ಏನೇನಾದರೂ ಹೇಳಿ ಒಪ್ಪಿಕೊಳ್ತೀರಾ, ಒಪ್ಪಿಕೊಳ್ತೀರಾ ಅಂತ ಕೇಳುತ್ತಿದ್ದರು. ನಮಗೆ ಒಳಗೆ ಕಿರಿಕಿರಿಯಾಗುತ್ತಿತ್ತು. ಆಗ ಮಹಾದೇವ ಹೇಳಿದ್ದು ಹಾಗೆ ಒಪ್ಪಿಕೊಳ್ತೀರಾ ಒಪ್ಪಿಕೊಳ್ತೀರಾ ಅಂತ ಕೇಳಿದ್ರೆ ನಮಗೆ ಇಷ್ಟವಾಗಲ್ಲ. ಯಾಕೆ ನೀವು ನಮ್ಮನ್ನು ಒಪ್ಪಿಸೋಕೆ ಪ್ರಯತ್ನಿಸ್ತೀರ?’ ಆದರೆ ಅಷ್ಟೊತ್ತಿಗೆ ಆಕಾಶವಾಣಿಯವರು ನಮಸ್ಕಾರ ಅಂತ ಹೇಳಿ ರೆಕಾರ್ಡಿಂಗ್ ಕಟ್ ಮಾಡಿ ಆಗಿತ್ತು. ನನಗೂ ತ.ರಾ.ಸು ಅವರ ಒಪ್ಪಿಸುವ ಮಾತು ಸ್ವಲ್ಪ ಮುಜಗರವೇ ಆಗಿದ್ದರೂ ಅದನ್ನು ಬಾಯಿಬಿಟ್ಟು ಹೇಳಿದವರು ಮಹಾದೇವ ಆಗಿದ್ದರು.
ಮಹಾದೇವ ನನ್ನ ಮಂಜಪ್ಪಗೆ ಹಾಸ್ಟೆಲ್ ಮೇಟ್ ಆಗಿದ್ದರು. ಒಂದು ದಿನ ಹೀಗೆ ಹಾಸ್ಟೆಲಿನ ಡೈನಿಂಗ್ ಹಾಲ್ ನಲ್ಲಿ ಸಿನಿಮಾ ಹಾಡುಗಳನ್ನು ಹಾಕಿರುತ್ತಿದ್ದರಂತೆ. ಮಂಜಪ್ಪ ಅಲ್ಲಿ ಕೂತು ಕೈ ಬೆರಳುಗಳಲ್ಲಿ ತಬಲ ಬಡಿಯುತ್ತ `ಆಹಾ ಮೈಸೂರು ಮಲ್ಲಿಗೇ. . .’ ಎಂಬ ಹಾಡಿಗೆ ತನ್ಮಯರಾಗಿ ಕೂತಿದ್ದಾಗ ಮಹಾದೇವ “ಯಾವ ಮಲ್ಲಿಗೆ ಮಂಜಪ್ಪನವರೇ’’ ಎಂದು ಕೇಳಿದರಂತೆ. ತಮ್ಮ ಪಾಡಿಗೆ ತಾವು ತಮ್ಮದೇ ಜಗತ್ತಿನಲ್ಲಿರುತ್ತಿದ್ದ ಮಹದೇವ ಅವರು ನಮ್ಮಿಬ್ಬರ ಒಡನಾಟವನ್ನು ಗುರ್ತಿಸಿದ್ದರು ಎಂಬುದು ನನಗೆ ಬೆರಗಾಯಿತು ಎಂದು ಹೇಳುತ್ತಾ ವಿದ್ಯಾರ್ಥಿ ಜೀವನದ ಮಧುರವಾದ ಕ್ಷಣಗಳನ್ನು ಒಂದಷ್ಟೊತ್ತು ಮೆಲುಕು ಹಾಕಿದರು.
ಕನ್ನಡ ಸಾಹಿತ್ಯದ ಅಧ್ಯಯನ-ಅಧ್ಯಾಪನದ ರಸಗಂಗೆಯಲ್ಲಿ ಕಾವ್ಯದ್ದೇ ಧ್ಯಾನ. ಬರವಣಿಗೆಯಲ್ಲಿ ಬದುಕು ಪಾವನ, ಕಾಡಿದ್ದೆಲ್ಲವೂ ಕಾವ್ಯವಾದಾಗ ಕವನ ಸಂಕಲನಗಳಾಗಿ ಹೊರಹೊಮ್ಮುವಿಕೆ ಎಂದು ಕಂಡುಕೊಂಡಿರುವ ಸ.ಉಷಾ ಮೇಡಂ 1981ರಲ್ಲಿ ಚೊಚ್ಚಲ ಕವನ ಸಂಕಲನ `ತೊಗಲುಗೊಂಬೆಯ ಆತ್ಮಕಥೆ’, ಆನಂತರ 1990ರಲ್ಲಿ `ಈ ನೆಲದ ಹಾಡು, 2005ರಲ್ಲಿ `ಹವಳ ಹಾರಿದ ಹೊತ್ತು’, 2007ರಲ್ಲಿ ಹೊರಬಂದ `ಕಸೂತಿ’ ಕವನಸಂಕಲನಗಳಿಂದ ಕನ್ನಡ ಕಾವ್ಯಲೋಕದಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ಸಾಹಿತ್ಯ ವಿಮರ್ಶೆ ʼವೈದೇಹಿ’ ರಾಜ್ಯ ಸಾಹಿತ್ಯ ಅಕಾಡೆಮಿಗಾಗಿ ಸಂಪಾದಿಸಿದ ವಾರ್ಷಿಕ ಕವಿತಾ ಸಂಚಿಕೆ `ಕವಿತೆ’, ತರಳಬಾಳು ಹುಣ್ಣಿಮೆಗಾಗಿ ಸಂಪಾದಿಸಿದ `ತರಳಬಾಳು ಸಂಚಿಕೆ’ ಉಷಾ ಅವರ ಅನ್ಯ ಸಾಹಿತ್ಯಿಕ ಕೊಡುಗೆಗಳು. ವಸ್ತು ವೈವಿಧ್ಯತೆ ಮತ್ತು ಚಿಂತನಾಲಹರಿಯುಳ್ಳ ಸ.ಉಷಾರ ಕವನಗಳು ಇಂಗ್ಲೀಷ್, ಹಿಂದಿ, ಬೆಂಗಾಲಿ ಮತ್ತು ಮಲೆಯಾಳಂಗೆ ಭಾಷಾಂತರಗೊಂಡಿದ್ದು ಹಲವು ಅಂತಾರಾಷ್ಟ್ರೀಯ ಸಂಕಲನಗಳಲ್ಲೂ ಪ್ರಕಟವಾಗಿರುವುದು ಹೆಚ್ಚುಗಾರಿಕೆ.
ತೊಗಲುಗೊಂಬೆಯ ಆತ್ಮಕಥೆ ಕೃತಿಗೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿ. ʼಈ ನೆಲ ಹಾಡುʼ ಕೃತಿಗೆ ಕನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದವರು. ಸಾಹಿತ್ಯ ಕ್ಷೇತ್ರದ ಜೀವಮಾನ ಸಾಧನೆಗಾಗಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೂ ಭಾಜನರಾಗಿರುವ ಸ.ಉಷಾ ಅವರಿಗೆ 2017ನೇ ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯೂ ಸಂದಿದೆ. ಇದೆಲ್ಲದರ ಜೊತೆ ಸ.ಉಷಾ ಶ್ರೀಮತಿ ಸುನಂದಾ ಬೆಳಗಾವಕರ್ ಅವರ ಒಂಬತ್ತು ಕತೆಗಳನ್ನು ಇಂಗ್ಲೀಷಿಗೆ ಡಾ.ವೈಜಯಂತಿ ಬೆಳಗಾವಕರ್ ಅವರೊಡನೆ ಸೇರಿ ಅನುವಾದಿಸಿದ್ದಾರೆ. ಪಾಟ್ ಆಫ್ ಬೆಟಲರ್ ಎಂಬ ಈ ಪುಸ್ತಕ ಮಣಿಪಾಲ್ ಯೂನಿವರ್ಸಿಟಿ ಪ್ರೆಸ್ ನಿಂದ ಪ್ರಕಟವಾಗಿದೆ.

ಕವಿತೆಯಲ್ಲಿಯೂ ಪ್ರತಿ ಸಂಸ್ಕೃತಿಯ ಸಾಧ್ಯತೆಯತ್ತ ಒಂದು ವಿಶಾಲ ತಾತ್ವಿಕ ನೆಲೆಯೊಂದು ಬೆಳೆದಿದ್ದು ಮಹಿಳಾ ಕಾವ್ಯದಲ್ಲಂತೂ ಅದು ತೀರ ಸ್ಪಷ್ಟವಾಗಿಯೆ ಇದೆ. ಅವರು ಬಾಲ್ಯದಲ್ಲಿಯೇ ಬರೆದ “ಅಮ್ಮನಿಗೆ’ ಕವನ ಹೆಣ್ಣುಮಗಳೊಬ್ಬಳ ಮೇಲೆ ಇರುವ ಸಾಮಾಜಿಕ ಸಾಂಸ್ಕೃತಿಕ ಒತ್ತಡಗಳ ಕುರಿತು ಸ್ಫೋಟಗೊಂಡು `ಬೇಡಮ್ಮಾ-ಬೇಡ ಎಂದು ಒಮ್ಮೆಗೇ ಕನಲಿ `ನಿನ್ನಂತಾಗದೆ ಬದುಕುತ್ತೇನೆ’ ಎಂದು ಆಸ್ಪೋಟಿಸಿದ್ದಾರೆ.`ಈ ನೆಲದ ಹಾಡು ಎಂಬ ಕವಿತೆಯಲ್ಲಿ ಹೆಣ್ಣನ್ನು ನೆಲ ಎಂದು ಸಮೀಕರಿಸುವ ಸಾಂಪ್ರದಾಯಿಕ ತಿಳಿವಳಿಕೆಗಿಂತ ಭಿನ್ನವಾಗಿ ತನ್ನ ತಾಯೆಂದು-ಬಾಯೆಂದು ಕೂಡ ಕರೆದ ಕೃಷ್ಣ ಸಂತಾನವನ್ನು ಕಟು ಮಾತುಗಳಿಂದ ವಿಮರ್ಶಿಸುತ್ತ `ಹೋಗಯ್ಯ ಹೋಗು ಎಲ್ಲಿ ಹೋಗುತ್ತೀ ನನಗೆ ಗೊತ್ತಿಲ್ಲವೇ ? ನನ್ನೆದೆಗೆ ಬೇರಿಳಿದ ಕಾಲು ನಿನ್ನದು’ ಎಂದು ಆತ್ಮವಿಶ್ವಾಸ ತೋರುತ್ತ ಕೊನೆಗೆ ಪುರುಷನನ್ನು ಗೆಳೆಯ ಎಂದು ಕರೆದು ಈ ನೆಲದ ಕಣ್ಣೀರನಿಳಿಸಲು ಕೈ ಆದರೂ ಎತ್ತೋಣ ಎಂದು ಲಿಂಗತಾರತಮ್ಯದ ವಿರುದ್ಧ, ದಮನದ ವಿರುದ್ಧ ಮಾತನಾಡುತ್ತಲೇ ಸಮಾನತೆಯ ಹೊಸ ಕನಸನ್ನು ಕಾಣುವ ಮನುಕುಲದ ಅಸಲಿ ನೋವುಗಳನ್ನು ಅಳಿಸಲು ಹೆಣ್ಣು ಗಂಡು ಕೂಡಾ ಒಂದಾಗಿ ದುಡಿಯಬೇಕೆನ್ನುವುದರ ಕಡೆಗೆ ಸ.ಉಷಾ ಅವರ ಕನಸು. ಕವಿತೆಯೆಂಬುದು ಒಂದು ಕನಸು. ನನ್ನ ಕವಿತೆಯೆಂಬ ಕನಸಿನಲ್ಲಿ ಗಂಡು ಹೆಣ್ಣುಗಳೆರಡೂ ಇವೆ. ಜಗತ್ತಿನ ದಮನಶೀಲತೆಯಿಂದ ನೊಂದ ಹೆಣ್ಣನ್ನು ಗಂಡು ಸಾಂತ್ವನಗೊಳಿಸುತ್ತಾನೆ.
`ಈಗ ಹೇಳು ಯಾರು ನಿನ್ನ ನೀ ಗತಿಗೆ ತಂದವರು
ಅಥವಾ ಮರೆತು ಬಿಡು
ನಿನ್ನೆಗಳು ನಾಳೆಗಳು ಕೊಚ್ಚಿ ಹೋಗಲಿ
ಒಂದು ಬಿಸಿ ಚುಂಬನದಲಿ’
(ಮೋದಾಳಿ-ಈ ನೆಲದ ಹಾಡು )
ಎಂದು ಅವರು ಬರೆಯುತ್ತ ನನ್ನ ಕವಿತೆಗಳಲ್ಲಿ ನಾನು ಕಟ್ಟ ಬಯಸುವ ಪ್ರತಿ ಸಂಸ್ಕೃತಿ ಎಂಥದು ಎಂಬ ಬಗ್ಗೆ ಕವಿತೆಗಳಿಂದಲೇ ಕೆಲವು ನಿದರ್ಶನಗಳನ್ನು ಸ.ಉಷಾ ನೀಡಿದ್ದಾರೆ.
`ಹವಳ ಹಾರಿದ ಹೊತ್ತು ಎಂಬ ಕವಿತೆಯಲ್ಲಿ ಹವಳ ಮತ್ತು ಸಾಲ್ಮನ್ಗಳನ್ನು ಹೆಣ್ಣು ಮತ್ತು ಗಂಡಿಗೆ ಸಮೀಕರಿಸಿ ಬಳಸಿಕೊಂಡಿದ್ದಾರೆ. ಹವಳಕ್ಕೆ ತನ್ನ ಸೌಂದರ್ಯದರಮನೆಯಲ್ಲೇ ಸಮಾಧಿ, ಸಾಲೋಮನ್ನಿಗೆ ಅಲೆತದ ಶಿಕ್ಷೆ . ಈ ಸ್ಥಿತಿ ಬೇಕಾದರೆ ತಿರುವು ಮುರುವು ಆಗಬಹುದು. ಅಲೆಮಾರಿಯ ಸ್ವಾತಂತ್ರ್ಯವನ್ನು ಹೆಣ್ಣು ತಂಗುವ ನೆಮ್ಮದಿಯನ್ನು ಗಂಡೂ ಅನುಭವಿಸಬಹುದು
`ನೀನು ಬರಿ ಹವಳವಲ್ಲ
ನಾನು ಬರಿ ಸಾಲ್ಮನ್ ಅಲ್ಲ
ಹಾರು ನನ್ನೊಡನೆ ಈ ಅನಂತ ನೀಲಧಿಯಲಿ
ನಾನೂ ತಂಗುತ್ತೇನೆ ನಿನ್ನ ಹವಳ ವಕ್ಷದಲ್ಲಿ
ಬೆಳೆಯಲಿ ಸಾಲ್ಮನ್ ಕುವರಿಯರು
ಹವಳ ಕುಮಾರರು ನನ್ನ ನಿನ್ನ ಆಸರೆಯಲಿ
(ಹವಳ ಹಾರಿದ ಹೊತ್ತು)
ಹೆಣ್ಣಿನೊಳಗೊಂದು ಗಂಡಿದೆ. ಗಂಡಿನೊಳಗೊಂದು ಹೆಣ್ಣಿದೆ. ಅವರಿಬ್ಬರ ಆರೋಪಿತ ಸ್ಥಾಯಿಗುಣಗಳು ಪಲ್ಲಟಗೊಂಡಾಗ ಬದುಕು ಚೆಲುವಾಗುತ್ತದೆ. ಇವರ ಕವಿತೆಯಲ್ಲಿ ಗಂಡು ಹೆಣ್ಣುಗಳು ಪರಸ್ಪರ ಪ್ರತಿಸ್ಪರ್ಧಿಗಳಲ್ಲ ಜೊತೆಜೊತೆಗೆ ನಡೆಯುವವರು. ಪರಸ್ಪರರಿಗೆ ಆಸರೆ ಕೊಡುವವರು. ಅವರ ಮೂರು ಸಂಕಲನಗಳ ನಂತರ ಬಂದ ಭಾಮೆಯ ಹಾಡು ಎಂಬ ಪದ್ಯದಲ್ಲಿ ಭಾಮೆ ಮೊಸರನ್ನೋ ಹಾಲನ್ನೋ ಹೊತ್ತು ಹೋಗುವಾಗ ಗೋಪಾಬಾಲರು ಅವಳ ದಾರಿಯನ್ನು ತಡೆದು `ನೀನು ಯಾವೂರಿನವಳೇ ಗೊಲ್ಲ ಭಾಮಾ’ ಎಂದು ಕೇಳುತ್ತಾರೆ. ಈ ಸಾಂಪ್ರದಾಯಿಕ ಕೃಷ್ಣ ಭಾಮೆ-ಗೋಪರ ಸರಸದ ಚಿತ್ರ ನನಗೆ ವಲಸೆ ಬಂದವರ ಮತ್ತು ಈಗಾಗಲೇ ನೆಲೆಸಿ ಒಕ್ಕಲಾದವರ ನಡುವಿನ ಪ್ರಶ್ನೆಗಳನ್ನು ಎತ್ತುತ್ತದೆ. ಭಾಮೆ ಈ ಕವಿತೆಯಲ್ಲಿ ಗೋಪಬಾಲರಿಗೆ ಹೇಳುತ್ತಾರೆ.
`ನಾನಿರುವದೆ ನನ್ನೂರು ಬಾಲರೇ
ಸೀರೆಯ ಜೋಳಿಯಲ್ಲಿ ಕಂದ
ಮೂರು ಕಲ್ಲ ಮೇಲೊಂದು ಗಡಿಗೆ
ದೂರದಲಿ ಶಿಬಿರಾಗ್ನಿ ಕಂಡರೆ
ನಾನು ಹತ್ತಿದ ರಥವೆ ನನ್ನೂರು’
ಭಾಮೆಯಷ್ಟೇ ಅಲ್ಲ ನರ -ನಾರಾಯಣರೂ ವಲಸೆಯ ಪ್ರಕ್ರಿಯೆಗೆ ಒಳಗಾದವರೇ. ಭಾಮೆ ಅರ್ಜುನನನ್ನು ಕೇಳುತ್ತಾಳೆ `ನಿನ್ನೂರು ಯಾವುದು? ಹಸ್ತಿನಾವತಿಯೋ ಇಂದ್ರಪ್ರಸ್ಥವೋ? ನೀನು ಹುಟ್ಟಿದ ಕಾಡೋ ? ನಿನ್ನ ಸಖ ಆ ನಾರಾಯಣನ ಊರಾದರೂ ಯಾವುದು? ಮಧುರೆಯೋ? ಗೋಕುಲವೋ? ಪ್ರಭಾಸವೋ? ಅವರಿಗೆ ಇಲ್ಲಿ ಎಲ್ಲರೂ ವಲಸಿಗರೇ. ಆದರೆ ಒಂದೂರಿಗೆ ಮೊದಲು ಬಂದ ಮನುಷ್ಯ ಆ ಮೇಲೆ ಬಂದವನನ್ನು ನಿಲ್ಲಗೊಡುವುದಿಲ್ಲ. ಒಬ್ಬ ವಲಸಿಗ ಇನ್ನೊಬ್ಬ ವಲಸಿಗನನ್ನು ನೀನು ಯಾವೂರಿನವನು? ಎಂದು ರಹದಾರಿ ಪತ್ರ ಕೇಳುತ್ತಾನೆ. ಸ.ಉಷಾ ಅವರ ನರ-ನಾರಾಯಣ-ಭಾಮೆ ಎಲ್ಲರ ಕನಸುಗಳನ್ನು ಎಲ್ಲರ ನೋವುಗಳನ್ನೂ ಕುರಿತು ಹಾಡಬೇಕು ಎಂಬುದು ಅವರ ಆಶಯವಾಗಿದೆ.
ಇವರ ಕವಿತೆಗಳಲ್ಲಿ ಚಲನೆಯಿದ್ದು ಜೀವದ ಶೃತಿಯನ್ನು ಧ್ಯಾನಸ್ಥವಾಗಿ ಕೇಳಿಸಿಕೊಳ್ಳುವ ತನ್ಮಯತೆಯೂ ಇದ್ದು ವೈಚಾರಿಕ ನೆಲಗಟ್ಟಿನಿಂದ ಬದುಕನ್ನು ಕಟ್ಟುವ ಹಂಬಲವುಳ್ಳ ಸ. ಉಷಾ ಮೇಡಂ ಕನ್ನಡದ ಮಹಿಳಾ ಕಾವ್ಯದ ದಿಟ್ಟ ಹಾಗೂ ಪರಿಪಕ್ವ ಧ್ವನಿ.
ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್, ಹಾಸನ
ಮೊ : 7353860969
ಇದನ್ನೂ ಓದಿ- ಅಮೇರಿಕಾದಲ್ಲಿ ಸಾಧನೆ ಮಾಡಿದ ಭೌತವಿಜ್ಞಾನಿ- ಹಾಸನದ ಡಾ.ರತ್ನಾನಾಯಕ್


