ಯಾವುದೇ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ವೈಯಕ್ತಿಕ ಹಂತದಲ್ಲಿದ್ದು ರಾಷ್ಟ್ರಮಟ್ಟದಲ್ಲಿ ಸಂವಿಧಾನದ ತತ್ವಸಿದ್ಧಾಂತಗಳೇ ಅನುಕರಣೆಯಲ್ಲಿರುಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸೂತ್ರ ಕೈಗೆ ತೆಗೆದುಕೊಂಡು ನರೇಂದ್ರ ಮೋದಿಯವರ ಪರ್ವ ಪ್ರಾರಂಭವಾದ ನಂತರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯವಾದ ಆಧಾರಸ್ತಂಭವಾಗಿರುವ ಸಂಸತ್ತನ್ನೇ ಕೇಂದ್ರಸರ್ಕಾರ ವ್ಯವಸ್ಥಿತವಾಗಿಯೂ ಆಮೂಲಾಗ್ರವಾಗಿಯೂ ನಾಶಪಡಿಸಿದೆ. – ಡಾ. ಬೈರಮಂಗಲ ರಾಮೇಗೌಡ, ಪ್ರಗತಿಪರ ಚಿಂತಕರು
ಬಹುಸಂಸ್ಥೆಗಳ ಸಾಮರಸ್ಯದ ಬದುಕಿಗೆ ಜಗತ್ತಿನಲ್ಲೇ ಒಂದು ಅದ್ಭುತ ಮಾದರಿಯಾಗಿದ್ದ ಭಾರತೀಯ ಸಮಾಜದಲ್ಲಿ ಅದನ್ನು ಒಡೆದು ಮತೀಯ ಶಕ್ತಿಗಳು ಜಾಗೃತವಾಗಿ ಪರಸ್ಪರರನ್ನು ಅನುಮಾನಿಸುವ, ದೂಷಿಸುವ, ಒಂದೊಂದು ಮತದಡಿಯಲ್ಲಿ ಗುರುತಿಸಿಕೊಂಡಿರುವವರು ಶ್ರೇಷ್ಠತೆಯ ವ್ಯಸನದಲ್ಲಿ ನರಳುತ್ತಿರುವ ಆತಂಕಕಾರಿ ವಿದ್ಯಮಾನಗಳು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತಿವೆ. ಪ್ರತ್ಯೇಕವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಹೋಗುತ್ತ ಸಮುದಾಯದಲ್ಲಿ ಶಾಂತಿ, ನೆಮ್ಮದಿ, ಸಂತೋಷವನ್ನು ಉಂಟುಮಾಡಲು ಶ್ರಮಿಸ ಬೇಕಾಗಿದ್ದ ರಾಜಕಾರಣ ಮತ್ತು ಧರ್ಮಗಳಿಗೆ ಸ್ವಹಿತಾಸಕ್ತಿ ಮತ್ತು ಲಾಭವೇ ಪ್ರಧಾನ ಎಂದು ಅನ್ನಿಸಿದ್ದರಿಂದ ಪರಸ್ಪರ ಕೊಳು-ಕೊಡುಗೆಗೆ ಆಳಿಸಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರಿಂದ ಅದರ ಕೆಟ್ಟ ಪರಿಣಾಮ ಜನತೆಯ ಮೇಲೆ ಆಗುತ್ತಿದೆ. ಜನತಾ ಜನಾರ್ದನರನ್ನು ಸಂಕಟ ಸಮಸ್ಯೆಗಳಿಂದ ಪಾರು ಮಾಡುವುದಾಗಲೀ ಬಿದ್ದಿರುವ ಬದುಕನ್ನು ಎತ್ತಿ ಕಟ್ಟುವುದಾಗಲೀ ಧಾರ್ಮಿಕ ಮುಖಂಡರಿಗೂ ಬೇಕಾಗಿಲ್ಲ, ರಾಜಕಾರಣಿಗಳಿಗೂ ಬೇಕಾಗಿಲ್ಲ. ಇದು ಎಷ್ಟು ಗಂಭೀರವಾದ, ತಡಮಾಡದೆ ಪರಿಹರಿಸಿಕೊಳ್ಳಬೇಕಾಗಿರುವ ಜ್ವಲಂತ ಸಮಸ್ಯೆ ಎಂಬುದು ಯಾವುದೇ ರಾಜಕೀಯ ಪಕ್ಷ ಅಥವಾ ಧಾರ್ಮಿಕ ಪಂಥದ ಸಿದ್ಧಾಂತಗಳಿಗೆ ನಿಷ್ಠರಲ್ಲದ, ನಾವು ಭಾರತೀಯರೆನ್ನುವ ಹೆಮ್ಮೆಯಿಂದ ಮುಕ್ತ ಮನಸ್ಥಿತಿಯಲ್ಲಿ ಆಲೋಚನೆ ಮಾಡಬಲ್ಲ ವಿಚಾರವಂತರಿಗೆ ಮಾತ್ರ ಹೊಳೆಯುತ್ತದೆ ಅಥವಾ ವೇದ್ಯವಾಗುತ್ತದೆ.
ಒಂದು ಧಾರ್ಮಿಕ ಸಂಘಟನೆ ಮತ್ತು ಅದರ ಪರಿವಾರದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕಾಗಿದ್ದ ರಾಮಮಂದಿರ ನಿರ್ಮಾಣದ ಉದ್ಘಾಟನೆ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆಯನ್ನು ಒಂದು ದೇಶದ ಕಾರ್ಯಕ್ರಮ ಎಂದು ಬಿಂಬಿಸಿದ ಮತ್ತು ನಂಬಿಸಿದ ಬೆನ್ನಲ್ಲೇ ಮುಂದಿನ ಲೋಕಸಭಾ ಚುನಾವಣೆಗೆ ಅದನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳಲು ಯೋಜಿಸಿರುವುದು ಈಗ ರಹಸ್ಯವೇನೂ ಅಲ್ಲ. ಯಾವುದೇ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ವೈಯಕ್ತಿಕ ಹಂತದಲ್ಲಿದ್ದು ರಾಷ್ಟ್ರಮಟ್ಟದಲ್ಲಿ ಸಂವಿಧಾನದ ತತ್ವಸಿದ್ಧಾಂತಗಳೇ ಅನುಕರಣೆಯಲ್ಲಿರುಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸೂತ್ರ ಕೈಗೆ ತೆಗೆದುಕೊಂಡು ನರೇಂದ್ರ ಮೋದಿಯವರ ಪರ್ವ ಪ್ರಾರಂಭವಾದ ನಂತರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯವಾದ ಆಧಾರಸ್ತಂಭವಾಗಿರುವ ಸಂಸತ್ತನ್ನೇ ಕೇಂದ್ರಸರ್ಕಾರ ವ್ಯವಸ್ಥಿತವಾಗಿಯೂ ಆಮೂಲಾಗ್ರವಾಗಿಯೂ ನಾಶಪಡಿಸಿದೆ. ಸಂಸತ್ತನ್ನು ಬಹುಸಂಖ್ಯಾತರ ಮತ್ತು ಪ್ರಜಾಸತ್ತಾತ್ಮಕ ಅಲ್ಲದ ಕಾನೂನು ರಚನೆಯ ವೇದಿಕೆಯಾಗಿ ಬಳಸಿಕೊಳ್ಳಲು ಎಲ್ಲ ಸಾಂವಿಧಾನಿಕ ನಿಬಂಧನೆಗಳನ್ನೂ, ಕಾರ್ಯವಿಧಾನಗಳನ್ನೂ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎನ್ನುವ ಗಂಭೀರ ಆರೋಪವನ್ನು ನಾವು ನಂಬಲೇಬೇಕಾದ ಉದಾಹರಣೆಗಳ ಸಮೇತ `ಭಾರತದ ಜನತೆಯಾದ ನಾವು ವರ್ಸಸ್ ಭಾರತ ಸರ್ಕಾರ’ ಎಂದು ಗುರುತಿಸಿಕೊಂಡಿರುವ 22 ಸಂಘಗಳು ಮತ್ತು 20 ಮಂದಿ ಪ್ರಮುಖರು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಕಾರ್ಯನೀತಿಗಳ ಚರ್ಚೆ ಮತ್ತು ವಿಶ್ಲೇಷಣೆಗಾಗಿ ಸ್ಥಾಯಿ ಸಮಿತಿಗಳಿಗೆ ಒಪ್ಪಿಸದೇ ಇರುವುದು, ಸುಗ್ರೀವಾಜ್ಞೆಗಳ ಮೂಲಕ ಶಾಸನಗಳನ್ನು ಬದಲಾಯಿಸುವ ಮೂಲಕ ಸಂಸದೀಯ ವಿಶ್ಲೇಷಣೆಯಿಂದ ಸರ್ಕಾರ ತಪ್ಪಿಸಿಕೊಳ್ಳುತ್ತಿರುವುದು, ಸಂಸದರ ಪ್ರಶ್ನೆಗಳನ್ನೇ ಕಲಾಪ ಪಟ್ಟಿಯಿಂದ ಕಿತ್ತುಹಾಕಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು, ಹೊಣೆಗಾರಿಕೆ ಪಾರದರ್ಶಕತೆ ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಖಾತ್ರಿ ಪಡಿಸಿಕೊಳ್ಳಲು ಅಳವಡಿಸಿಕೊಳ್ಳಲಾಗಿದ್ದ ಎಲ್ಲ ಪ್ರಕ್ರಿಯೆಗಳನ್ನು ಬುಡಮೇಲು ಮಾಡಿ ಅಸಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡೆಗಳನ್ನು ಅನುಸರಿಸುತ್ತಿರುವುದು – ಇಂಥ ಕ್ರಮಗಳಿಂದಾಗಿ, ನಡವಳಿಕೆಗಳಿಂದಾಗಿ ಸಂಸದೀಯ ಪ್ರಜಾಪ್ರಭುತ್ವ ದುರ್ಬಲವಾಗಿ ಪ್ರಜಾಪ್ರಭುತ್ವವೇ ನಾಶವಾಗಿ ಬಿಡುತ್ತದೆನ್ನುವ ಅನುಮಾನ ಆತಂಕಗಳು ವ್ಯಕ್ತವಾಗಿವೆ. ಕಳೆದ 10 ವರ್ಷಗಳಿಂದ ಸಂಸತ್ತು ನಡೆಯುತ್ತಿರುವ, ನಡೆಸಿಕೊಂಡು ಹೋಗುತ್ತಿರುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿರುವ ಸಂವೇದನಾಶೀಲ ಮನಸ್ಸುಗಳನ್ನು ಕಾಡುತ್ತ ಬಂದಿರುವ ಆತಂಕಕಾರಿ ವಿಚಾರಗಳೇ ಇಲ್ಲಿವೆ. ಇದು ನಮ್ಮೆಲ್ಲರ ಪ್ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎನ್ನುವುದನ್ನು ಸೂಚಿಸುವುದಿಲ್ಲವೇ? ಇದಕ್ಕೆ ಪೂರಕವಾಗಿರುವ ಮತ್ತೊಂದು ಸಂಗತಿಯನ್ನು ಇಲ್ಲೇ ಪ್ರಸ್ತಾಪಿಸುವುದು ಸೂಕ್ತ ಎನ್ನಿಸುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ರಾಜಕಾರಣಿ, ರಾಜಕೀಯ ಅರ್ಥಶಾಸ್ತ್ರಜ್ಞ ಡಾ. ಪರಕಾಲ ಪ್ರಭಾಕರ್ ಬಿಜೆಪಿ ಸರ್ಕಾರದ ನೀತಿಯನ್ನು, ಆರ್ಥಿಕತೆ ಮತ್ತು ರಾಜಕೀಯವನ್ನು ಆಗಾಗ ಟೀಕಿಸುತ್ತಲೇ ಬಂದಿದ್ದಾರೆ. ಪೂರ್ವಗ್ರಹಪೀಡಿತವಲ್ಲದ, ಸಾಮಾಜಿಕ ಹೊಣೆಗಾರಿಕೆ ನಿರ್ವಹಣೆಯ ಉದ್ದೇಶದ ನಿಷ್ಠುರವಾದ ವಾಸ್ತವವನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದ ಅವರ ಟೀಕೆಗಳಲ್ಲಿ ಆಳವಾದ ಅಧ್ಯಯನ ಮತ್ತು ಚಿಂತನೆಯಿಂದ ಕೂಡಿದ ವಿಚಾರಗಳಿರುತ್ತವೆ. ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ಪ್ರಜಾವಾಣಿ ಇತ್ತೀಚಿನ ರಾಜಕೀಯ ವಿದ್ಯಮಾನ ಕುರಿತಂತೆ ಕೆಲವು ಪ್ರಶ್ನೆಗಳನ್ನು ಕೇಳಿ ಕ್ಷಿಪ್ರ ಸಂದರ್ಶನ ನಡೆಸಿತು. ಅವರು ಉತ್ತರ ರೂಪದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ದೇಶದ ಆರ್ಥಿಕ ಸ್ಥಿತಿಗತಿ ಕೇಂದ್ರಸರ್ಕಾರ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಬದಲಾಗಿ ಅದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಮತ್ತೊಮ್ಮೆ ಅಧಿಕಾರ ಗ್ರಹಣ ಮಾಡಬೇಕೆನ್ನುವ ಉದ್ದೇಶದಿಂದ ಸುಳ್ಳುಗಳನ್ನೇ ರಂಗುರಂಗಾಗಿ ಹೇಳಿ ಅದೇ ನಿಜ ಎಂದು ನಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ. ಇತ್ತೀಚೆಗೆ ಮಂಡಿಸಲಾದ ಮಧ್ಯಂತರ ಬಜೆಟ್ಟಿನಲ್ಲೂ ಇಂಥ ಸುಳ್ಳುಗಳ ಸರಪಳಿಯೇ ಇತ್ತು. ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸರ್ಕಾರ ಬಿಂಬಿಸುತ್ತಿರುವುದು ಅತಿದೊಡ್ಡ ಸುಳ್ಳು. ಕಳೆದ 70 ವರ್ಷಗಳಲ್ಲಿ 50 ಲಕ್ಷ ಕೋಟಿ ಇದ್ದ ಸಾಲ ನರೇಂದ್ರ ಮೋದಿ ಪ್ರಧಾನಿಯಾದ 10 ವರ್ಷಗಳಲ್ಲಿ 100 ಲಕ್ಷ ಕೋಟಿಗೆ ತಲುಪಿದೆ ಎಂದು ಅಂಕಿ ಅಂಶಗಳು ತೋರಿಸುತ್ತಿರುವುದನ್ನು ಮರೆಮಾಚಲಾಗಿದೆ. ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಮಾತುಗಳನ್ನು ಪ್ರಧಾನಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಡುತ್ತಾರೆ. ಆದರೆ ಅವರು ಸೃಷ್ಟಿಸಿದ ಉದ್ಯೋಗಗಳು ಯಾವುವು ಎನ್ನುವ ಮಾಹಿತಿಯೇ ಇಲ್ಲ. ನೋಟು ಅಮಾನ್ಯೀಕರಣದಂಥ ಸಲಹೆಯನ್ನು ಯಾರು ಯಾರ ಹಿತ ಕಾಯುವುದಕ್ಕಾಗಿ ಕೊಟ್ಟರೋ ಗೊತ್ತಿಲ್ಲ. ಅದರಿಂದ ದೇಶದ ಜನತೆಗೆ ಆದ ಕಷ್ಟ-ನಷ್ಟಗಳೇ ಅಧಿಕ. ಕೋವಿಡ್ ಹೊಡೆತದಿಂದ ಮತ್ತು ನೋಟು ಅಮಾನ್ಯೀಕರಣದಿಂದ ನೆಲ ಕಚ್ಚಿರುವ ಆರ್ಥಿಕತೆಯಿಂದಾಗಿ ಹಲವು ಕ್ಷೇತ್ರಗಳು ಇಂದಿಗೂ ಚೇತರಿಕೆ ಕಂಡಿಲ್ಲ, ಅವುಗಳಿಗೆ ಚೈತನ್ಯ ತುಂಬುವಂಥ ಯೋಜನೆಗಳೂ ಇಲ್ಲ.
ರಾಮಮಂದಿರ ಉದ್ಘಾಟನೆ ಸುತ್ತಲಿನ ಚುನಾವಣಾ ರಾಜಕಾರಣವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸಿರುವ ಪರಕಾಲ ಪ್ರಭಾಕರ್ ಹೇಳುವುದು- ಲೋಕಸಭಾ ಚುನಾವಣೆಗೆ ಬಿಜೆಪಿ ರಾಮಮಂದಿರವನ್ನು ಪ್ರವಲ ಅಸ್ತ್ರವಾಗಿ ಮಾಡಿಕೊಂಡಿದೆ. ದೇಶವನ್ನು ಕಿತ್ತು ತಿನ್ನುತ್ತಿರುವ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡದ ಕೇಂದ್ರಸರ್ಕಾರ ದೇವರ ಧರ್ಮದ ಅಮಲಿನಲ್ಲಿ ಜನತೆಯನ್ನು ತೇಲಾಡಿಸಿ ಅವರ ಗಮನವನ್ನು ಬೇರೆಡೆ ತಿರುಗಿಸುವುದಕ್ಕಾಗಿಯೇ ಲೋಕಸಭಾ ಚುನಾವಣೆಗೆ ದಿನಗಣನೆ ನಡೆಯುತ್ತಿರುವ ಹೊತ್ತಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ. ದೇಶದ ಎದುರು ಬೆಲೆಯೇರಿಕೆ, ರೂಪಾಯಿಯ ಮೌಲ್ಯ ಕುಸಿತ, ನಿಟ್ಟುಸಿರು ಬಿಡುತ್ತಿರುವ ಆರ್ಥಿಕತೆ, ಚೀನಾದಿಂದ ಭಾರತದ ನೆಲದ ಅತಿಕ್ರಮಣ, ಕಪ್ಪು ಹಣ ವಾಪಸ್‌ಗೆ ಕ್ರಮ ಇತ್ಯಾದಿ ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇವರು ಏನನ್ನಾದರೂ ಮಾಡಿದ್ದಾರೆಯೇ ಎನ್ನುವುದರ ಬಗೆಗೆ ಪ್ರಧಾನಿಯವರು ಮಾತನಾಡುತ್ತಿಲ್ಲ. ಅವರು ಏನು ಮಾಡುತ್ತೇವೆಂದು ಗಟ್ಟಿದನಿಯಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರೋ ಅವೆಲ್ಲ ಈಗ ಪ್ರಸ್ತುತವೇ ಅಲ್ಲ ಅಥವಾ ಮರೆತೇ ಹೋಗಿವೆ ಎನ್ನುವಂತೆ ವರ್ತಿಸುತ್ತಿರುವುದಂತೂ ಆಘಾತಕಾರಿಯಾಗಿದೆ. ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಭಾರತದೊಂದಿಗೆ ಆ ದೇಶಗಳು ಈಗ ಅಂತರವನ್ನು ಕಾಯ್ದುಕೊಳ್ಳುತ್ತಿರುವುದು ದೇಶದ ಒಳಗೂ ಒಂದು ರೀತಿಯ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಆಗುತ್ತಿರುವುದು ದಕ್ಷಿಣದ ರಾಜ್ಯಗಳಿಗೆ ನ್ಯಾಯಸಮ್ಮತವಾಗಿ ಕೊಡಬೇಕಾಗಿದ್ದ ತೆರಿಗೆಯ ಪಾಲನ್ನು ಕೊಡದೆ ಅಲ್ಲಿನ ಮುಖ್ಯಮಂತ್ರಿಗಳು, ಸಂಪುಟದ ಸಚಿವರು ದೆಹಲಿಗೆ ಹೋಗಿ ಪ್ರತಿಭಟಿಸುತ್ತಿರುವುದು, ಉತ್ತರದಿಂದ ಪ್ರತ್ಯೇಕಗೊಳ್ಳುವ ಮಾತುಗಳನ್ನು ಆಡಿ ಪ್ರತಿಭಟಿಸುತ್ತಿರುವುದು, ಅನ್ಯಾಯವನ್ನೇ ನ್ಯಾಯ ಎಂದು ಬಿಂಬಿಸುವ ಸುಳ್ಳುಗಳನ್ನು ಅರ್ಥ ಸಚಿವರು ಆಡುತ್ತಿರುವುದು ಯಾವ ಕೇಡಿನ ಮುನ್ಸೂಚನೆ ಇರಬಹುದೋ ತಿಳಿಯಲಾಗುತ್ತಿಲ್ಲ.
ಖಾಸಗೀಕರಣದಿಂದ ಸುಧಾರಣೆ ಸಾಧ್ಯವಿಲ್ಲ ಎನ್ನುವುದು ತಜ್ಞರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದರೆ ಸರ್ಕಾರಿ ವಲಯದ ಸಂಸ್ಥೆಗಳನ್ನು ಮತ್ತು ಆಸ್ತಿಯನ್ನು ಮಾರಾಟ ಮಾಡುವ ವಿಚಾರದಲ್ಲಿ ಯಾವ ತಜ್ಞರ ಸಲಹೆಯೂ ಸರ್ಕಾರಕ್ಕೆ ಬೇಕಾಗಿಲ್ಲ. ಇಲ್ಲಿ ಸರ್ಕಾರ ಎಂದರೆ ಮೋದಿ ಮತ್ತು ಅಮಿತ್ ಶಾ ಮಾತ್ರ ಎನ್ನುವಂತಾಗಿದೆ. ಅವರ ನಿರ್ಧಾರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ ಎನ್ನುವ ಅಘೋಷಿತ ಶಾಸನ ಜಾರಿಯಲ್ಲಿದೆ. ಮುಂದೆ ಪಡೆಯಬಹುದಾದ ಲಾಭದ ನಿರೀಕ್ಷೆ ಇರಿಸಿಕೊಂಡೇ ಸರ್ಕಾರಿ ವಲಯದ ಸಂಸ್ಥೆ ಮತ್ತು ಆಸ್ತಿಗಳನ್ನು ಕಡಿಮೆ ಮೊತ್ತಕ್ಕೆ ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ, ಬಂದರು ನಿರ್ವಹಣೆ, ಮೂಲಸೌಕರ್ಯ, ಅಭಿವೃದ್ಧಿಗೆ ಸಂಬಂಧಿಸಿದ ಭಾರೀ ಮೊತ್ತದ ಟೆಂಡರ್‌ಗಳನ್ನು ನಿಯಮಗಳನ್ನೆಲ್ಲ ನಿರ್ಲಕ್ಷಿಸಿ ತಮ್ಮವರಿಗೆ ಕೊಡುತ್ತಿದ್ದಾರೆ. ಇದರಿಂದ ಮುಂದೊಂದು ದಿನ ಊಹೆಗೆ ನಿಲುಕದ ಬಿಕ್ಕಟ್ಟು ಉದ್ಭವಿಸಿದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೊಡ್ಡ ಮಟ್ಟದಲ್ಲಿ ವಿಭಜನೆ ನಡೆಯುತ್ತಿದ್ದು ಜಾತಿ ಮತ್ತು ಧರ್ಮದ ವಿಷಯದಲ್ಲಿ ಜನರನ್ನು ವಿಭಜಿಸಿಯೇ ಚುನಾವಣೆ ಗೆಲ್ಲುತ್ತಿದ್ದಾರೆ. ಒಂದು ಧರ್ಮದ ಪರವಾಗಿ ನಿಂತಿರುವ ಸರ್ಕಾರ ಮತ್ತೊಂದು ಧರ್ಮ ಮತ್ತು ದೇಶವನ್ನು ದ್ವೇಷಿಸುವಂತೆ ಮಾಡುತ್ತಿದೆ. ಧರ್ಮ ಎನ್ನುವುದು ವೈಯಕ್ತಿಕವಾಗಿದ್ದು ಸರ್ಕಾರದ ಭಾಗವಾಗಿರುವವರು ಒಂದು ಧರ್ಮದ ಪರವಾಗಿ ಕೆಲಸ ಮಾಡಬಾರದೆನ್ನುವ ನೈತಿಕತೆಯನ್ನು ಧಿಕ್ಕರಿಸಿ ಧರ್ಮದ್ವೇಷವನ್ನು ಸಾರ್ವತ್ರಿಕಗೊಳಿಸಲಾಗುತ್ತಿದೆ ಎನ್ನುವ ಪರಕಾಲ ಪ್ರಭಾಕರ್ ಅವರ ಮಾತುಗಳ ಆಳದಲ್ಲಿ ಆತಂಕ ಮಾತ್ರವಲ್ಲ, ನೋವೂ ಹುದುಗಿದೆ.
ಇತ್ತೀಚೆಗೆ ಮುನ್ನೆಲೆಗೆ ಬಂದು, ವಾದ ಮತ್ತು ಪ್ರತಿವಾದಗಳು ನಡೆದು, ಪರಸ್ಪರರನ್ನು ನಿಂದಿಸುವ ಮತ್ತು ತೇಜೋವಧೆ ಮಾಡುವ ಮಟ್ಟಕ್ಕೂ ಹೋದ ಪ್ರಕರಣಗಳೂ ದಾಖಲಾದ ಸನಾತನ ಧರ್ಮದ ವಿಷಯ ಕುರಿತ ಪ್ರಶ್ನೆಗೆ ಪ್ರಭಾಕರ್ ಕೊಟ್ಟ ಉತ್ತರ ಸನಾತನತೆಯನ್ನು ಸಮರ್ಪಕವಾಗಿ ಗ್ರಹಿಸದೆ, ಯಾರೋ ತಲೆಯೊಳಗೆ ಮೌಢ್ಯ ತುಂಬಿರುವುದರ ಆಧಾರದ ಮೇಲೆಯೇ ಸಮರ್ಥನೆಗೆ ಇಳಿಯುವವರು ಆತ್ಮವಲೋಕನ ಮಾಡಿಕೊಳ್ಳುವಷ್ಟು ದಿಟ್ಟವಾಗಿದೆ. ಅವರು ಹೇಳಿದ ಮಾತುಗಳು ಹೀಗಿವೆ: “ಬಿಜೆಪಿ ಮತ್ತು ಪರಿವಾರದವರು ವರ್ಣ ವ್ಯವಸ್ಥೆಯನ್ನು ಪೋಷಿಸುವ ಸನಾತನ ಧರ್ಮದ ಆರಾಧಕರು, ಅಸ್ಪೃಶ್ಯತೆ, ಅಸಮಾನತೆ, ದೇವಾಲಯ ಪ್ರವೇಶ ನಿಷೇಧ, ಶಿಕ್ಷಣ ನಿರಾಕರಣೆ, ಹೆಣ್ಣಿನ ಸ್ವಾತಂತ್ರ್ಯಕ್ಕೆ ನಿರ್ಬಂಧ ಇಂತಹ ಸನಾತನ ಮೌಲ್ಯಗಳಿಗೆ ಅವರು ಕಟಿಬದ್ಧರಾಗಿದ್ದು, ಅಂಥವುಗಳನ್ನು ಮರಳಿ ಜಾರಿಗೆ ತರುವುದು ಅವರ ರಹಸ್ಯ ಕಾರ್ಯಸೂಚಿ, ಎಂದಾದರೂ ಅವರು ಬಹುತ್ವ, ಸಮಾನತೆ, ಸಹಿಷ್ಣುತೆ, ಜಾತ್ಯತೀತತೆ, ಪ್ರಜಾಪ್ರಭುತ್ವದ ಮೌಲ್ಯಗಳ ಪರವಾಗಿ ನಿಂತಿದ್ದಾರೆಯೇ? ಜನರಿಗೆ ಉದ್ಯೋಗಕೊಟ್ಟು ದೇಶ ಕಟ್ಟುವುದರಲ್ಲಿ ನಂಬಿಕೆ ಇಲ್ಲದಿರುವುದರಿಂದಲೇ ಅವರು ಮಂದಿರ ಕಟ್ಟಿದರು. ಅವರಿಗೆ ಭೂತದಲ್ಲಿ ನಂಬಿಕೆ ಇದೆಯೇ ಹೊರತು, ವರ್ತಮಾನ ಮತ್ತು ಭವಿಷ್ಯದಲ್ಲಲ್ಲ’’. ಇವು ಎಂಥ ಮಾರ್ಮಿಕ ಮತ್ತು ಪ್ರಖರ ವೈಚಾರಿಕ ಚಿಂತನೆಯ ಮಾತುಗಳಲ್ಲವೇ?!
ಇದನ್ನೂ ಓದಿ– ರಾಮಮಂದಿರವೇನೋ ಆಯಿತು? ಮುಂದೇನಾಗಲಿದೆ ಈ ದೇಶದಲ್ಲಿ? https://kannadaplanet.com/what-will-happen-next-in-this-country/
ಪೂರ್ಣಚಂದ್ರ ತೇಜಸ್ವಿಯವರು ಕೂಡ ಸನಾತನ ಧರ್ಮದ ಸ್ವರೂಪ ಕುರಿತು “ವಿಮರ್ಶೆಯ ವಿಮರ್ಶೆ’’ ಕೃತಿಯಲ್ಲಿ ಆಡಿರುವ ಮಾತುಗಳನ್ನು ಪರಕಾಲ ಪ್ರಭಾಕರ್ ಅವರ ವಿಚಾರಗಳೊಂದಿಗೆ ಹೋಲಿಸಿ ನೋಡೋಣ: “ಸನಾತನ ಧರ್ಮ ಎಲ್ಲಿಯವರೆಗೆ ಜಾತಿ ಪದ್ಧತಿಯ, ಅಸ್ಪೃಶ್ಯತೆಯ, ಸ್ತ್ರೀ ಅಸಮಾನತೆಯ ವಕ್ತಾರನಾಗಿರುತ್ತದೋ, ಪರೋಕ್ಷವಾಗಿ ಸೂಕ್ಷ್ಮವಾಗಿ ಪ್ರತಿಪಾದಿಸುತ್ತದೋ ಅಲ್ಲಿಯವರೆಗೂ ನಮ್ಮ ತಿರಸ್ಕಾರ, ಪ್ರತಿಭಟನೆ ಇದ್ದೇ ಇರುತ್ತದೆ’’. `ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಘೋಷಿಸಿದ ಪಂಪನಿಂದ ಹಿಡಿದು ಜನ್ನ, ನಾಗವರ್ಮ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮ, ಕಾರಂತ, ಕುವೆಂಪು ಮೊದಲಾದವರ ಹಿಂದೆ ಯಾವ ಒತ್ತಡಗಳು ಕೆಲಸ ಮಾಡಿದವೋ ಅವೇ ಇಂದಿಗೂ ನಮಗೆ ಪ್ರಸ್ತುತ’’.
ಡಾ. ಬೈರಮಂಗಲ ರಾಮೇಗೌಡ
ಪ್ರಗತಿಪರ ಚಿಂತಕರು, ಲೇಖಕರು, ಸಂಶೋಧಕರು, ಸಂಘಟಕರು, ಹೋರಾಟಗಾರರು.