ಬೆಂಗಳೂರು: ಇಂದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ಈ ದಿನವನ್ನು ದೇಶಾದ್ಯಂತ ಪರಾಕ್ರಮ ದಿನ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರು ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಯವರಿಗೆ ತಿಳಿಸುವುದೇ ಈ ದಿನಾಚರಣೆಯ ಉದ್ದೇಶ.
ಪರಾಕ್ರಮ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಮರುಪ್ರತಿಷ್ಠಾಪನೆ ಮಾಡಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ, ನೇತಾಜಿ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ನಮನಗಳನ್ನು ಸಲ್ಲಿಸಿದರು.
ಅವರು ತಮ್ಮ ಟ್ವೀಟ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಹೀಗೆ ಸ್ಮರಿಸಿದ್ದಾರೆ. “ಬ್ರಿಟಿಷ್ ನಿರಂಕುಶ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಹೋರಾಟದ ಮತ್ತೊಂದು ಮಗ್ಗುಲನ್ನು ಮುನ್ನಡೆಸಿದ್ದ ಭಾರತಾಂಬೆಯ ವೀರಪುತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅನನ್ಯ ದೇಶಪ್ರೇಮ, ಚತುರ ಯುದ್ಧನೀತಿ ಮತ್ತು ಧೈರ್ಯ ಸರ್ವಕಾಲಕ್ಕೂ ಸ್ಮರಣೀಯ ಮತ್ತು ಸ್ಪೂರ್ತಿದಾಯ” ಎಂದಿದ್ದಾರೆ.
ನೇತಾಜಿಯವರ “ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ” ಎಂಬ ಹೇಳಿಕೆಯು ಭಾರತೀಯರ ಎದೆಯಲ್ಲಿ ದೇಶಪ್ರೇಮವನ್ನು ಬಡಿದೆಬ್ಬಿಸಿ, ಸ್ವಾತಂತ್ರ್ಯ ಚಳವಳಿಗೆ ಹೊಸ ರೂಪ ನೀಡಿತು. ದೇಶವನ್ನು ಬಂಧಮುಕ್ತಗೊಳಿಸಲು ತಮ್ಮ ಸರ್ವಸ್ವವನ್ನೂ ತ್ಯಾಗ – ಬಲಿದಾನಗೈದ ನಿಸ್ವಾರ್ಥ ಚೇತನ ನೇತಾಜಿಯ ಜಯಂತಿಯಂದು ನನ್ನ ನಮನಗಳುನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಅವಿಸ್ಮರಣೀಯ. ಕಾಂಗ್ರೆಸ್ ಅಧ್ಯಕ್ಷರಾಗಿ ನಂತರ ಇಂಡಿಯನ್ ನ್ಯಾಶನಲ್ ಆರ್ಮಿ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. .
ಸಚಿವ ಎಂಬಿ ಪಾಟೀಲ್ ಅವರು ಬ್ರಿಟಿಷರಿಗೆ ಸಿಂಹ ಸ್ವಪ್ನದಂತೆ ಕಾಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯಂದು ಗೌರವದ ನಮನಗಳು. ಸ್ವಾತಂತ್ರ್ಯ ಚಳುವಳಿಯಲ್ಲಿ ನೇತಾಜಿ ಅವರದ್ದು ಪ್ರಮುಖ ಪಾತ್ರ. ‘ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ’ ಎಂಬ ಅವರ ಘರ್ಜನೆ ಭಾರತೀಯರ ಮನಗಳಲ್ಲಿ ಮಾರ್ದನಿಸುತ್ತಲೇ ಇರಲಿದೆ.
ಭಾರತದ ಸೈನ್ಯಬಲ, ಗಡಿ ರಕ್ಷಣೆ ಕುರಿತು ಅಪಾರ ಜ್ಞಾನ ಹೊಂದಿದ್ದರು. ಬೋಸ್ ಅವರಂತಹ ಮಹಾನ್ ರಾಷ್ಟ್ರನಾಯಕನ ಜೀವನದ ಘಟನೆಗಳ ಸ್ಮರಣೆಯೇ ಸ್ಫೂರ್ತಿಯುತ. ಅವರ ಜನ್ಮದಿನವನ್ನು ಪರಾಕ್ರಮ ದಿನ ಎಂದು ಆಚರಿಸುತ್ತಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರು ಯಾರಿಗೆ ಸ್ವಾತಂತ್ರ್ಯದ ಹಸಿವಿರುತ್ತದೆಯೋ, ಅವರು ಮಾತ್ರ ಕಠಿಣ ಹಾದಿಯನ್ನು ಆರಿಸಿಕೊಳ್ಳಬಲ್ಲರು.” “ಸತ್ಯಕ್ಕಾಗಿ ಹೋರಾಡದ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತದ ಜೀವನ ವ್ಯರ್ಥ.” — ಹೀಗೆ ಸದಾ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಅಗ್ನಿಯ ಜ್ವಾಲೆಯಂತೆ ಪ್ರಜ್ವಲಿಸುತ್ತಿದ್ದ ಮಹಾನ್ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್.
ಸ್ವಾತಂತ್ರ್ಯಕ್ಕಾಗಿ ಅಹರ್ನಿಶಿ ಹೋರಾಡಿ, ಬ್ರಿಟಿಷರ ಎದೆ ನಡುಗಿಸಿದ್ದು ಮಾತ್ರವಲ್ಲ, ಭಾರತದ ಶೌರ್ಯವನ್ನು ಜಗತ್ತಿಗೆ ಸಾರಿದ ಧೀಮಂತ ವ್ಯಕ್ತಿತ್ವ ಅವರದ್ದು. ನೇತಾಜಿಯವರು ಕೇವಲ ಇತಿಹಾಸದ ಪುಟಗಳಲ್ಲಲ್ಲ, ಇಂದಿನ ಯುವಜನತೆಯ ಹೃದಯದಲ್ಲೂ ಸ್ಫೂರ್ತಿಯ ಚಿಲುಮೆಯಾಗಿ ಅಜರಾಮರ. ಇಂತಹ ಮಹಾನ್ ಧೈರ್ಯಶಾಲಿ ನಾಯಕನನ್ನು ಪಡೆದ ಈ ಪುಣ್ಯಭೂಮಿ ನಿಜಕ್ಕೂ ವೀರರ ನಾಡು. ಭಾರತದ ಹೆಮ್ಮೆಯ ಪುತ್ರನಿಗೆ ನನ್ನ ಅನಂತ ಗೌರವ ನಮನಗಳು ಎಂದು ತಿಳಿಸಿದ್ದಾರೆ.
ಬಿಕೆ ಹರಿಪ್ರಸಾದ್ ಅವರು ಸ್ವತಂತ್ರ ಚಳುವಳಿಯ ಕ್ರಾಂತಿಕಾರಿ ನಾಯಕರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿದ್ದ, ಈ ದೇಶ ಕಂಡ ಅಪ್ಪಟ ಸ್ವತಂತ್ರ ಸೇನಾನಿ, ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ಜಯಂತಿಯ ಶುಭಾಶಯಗಳು.
ಪರಕೀಯರಿಂದ ಬಿಡುಗಡೆಗಾಗಿ ಹೋರಾಟವನ್ನು ಸಂಘಟಿಸುತ್ತಾ, ದೇಶದ ಯುವಜನರ ಎದೆಯಲ್ಲಿ ಉತ್ಸಾಹದಿಂದ ತುಂಬಿದ ಧೈರ್ಯ, ಶೌರ್ಯ ಹಾಗೂ ದೇಶಪ್ರೇಮದ ಭಾವವನ್ನು ಮರೆಯಲು ಸಾಧ್ಯವಿಲ್ಲ. ಅವರ ಕ್ರಾಂತಿಕಾರಿ ಹೋರಾಟದ ದೂರದೃಷ್ಟಿ ಹಾಗೂ ಸ್ಪಷ್ಟತೆ ಯುವಜನತೆಗೆ ಮಾದರಿಯಾಗಲಿ ಎಂದು ಹೇಳಿದ್ದಾರೆ..

