ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಬೈಕ್ ಟ್ಯಾಕ್ಸಿ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಒಂದು ಭಾಗವಾಗಿದ್ದು, ಕಾನೂನು ಚೌಕಟ್ಟಿನೊಳಗೆ ಅವುಗಳನ್ನು ನಿರ್ಬಂಧಿಸುವಂತಿಲ್ಲ, ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳನ್ನು ಪರಿಗಣಿಸಿ ಪರವಾನಗಿ ನೀಡಬೇಕು ಎಂದು ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಬೈಕ್ ಟ್ಯಾಕ್ಸಿ ನೀತಿ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಬೇಕಿದೆ.
ಬೈಕ್ ಟ್ಯಾಕ್ಸಿಗಳ ಸೇವೆಯನ್ನು ರದ್ದುಗೊಳಿಸಿದ ನಂತರ ಈ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿದ್ದವು.
ಬೈಕ್ ಟ್ಯಾಕ್ಸಿಗಳ ಸಂಚಾರ ಕುರಿತು ಸರ್ಕಾರ ರಚಿಸಿದ್ದ ಉನ್ನತಾಧಿಕಾರ ಸಮಿತಿ 2025ರ ನವೆಂಬರ್ 26 ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು.
ಈ ವರದಿಯಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಅಸಾಧ್ಯ. ಇದು ಕೇಂದ್ರ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಲಿದೆ ಮತ್ತು ವಿಪರೀತ ಸಂಚಾರ ದಟ್ಟಣೆಗೆ ಕಾರಣವಾಗುತ್ತವೆ. ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗಲಿದೆವೆ ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು.
ಚರ್ಚಿಸಿಮುಂದಿನತೀರ್ಮಾನ: ರಾಮಲಿಂಗಾರೆಡ್ಡಿ
ಹೈಕೋರ್ಟ್ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಆದೇಶ ಪ್ರತಿಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ರಿಟ್ ಅರ್ಜಿ ಸಲ್ಲಿಸಲೂ ಅವಕಾಶ ಇದ್ದು, ಕಾನೂನು ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಅಧಿಕೃತ ಪುನರಾರಂಭಕ್ಕೆ ಅವಕಾಶ ದೊರೆತಿದ್ದು, ಮುಖ್ಯವಾಗಿ ವಾಹನ ದಟ್ಟಣೆಯಿಂ ನಲುಗಿ ಹೋಗಿದ್ದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

