ಬೆಂಗಳೂರು: ವಿಧಾನಸೌಧದಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸರ್ಕಾರದ ಭಾಷಣವನ್ನು ಓದದೆ ತಾವೇ ಸಿದ್ದಪಡಿಸಿಕೊಂಡು ಬಂದ ಒಂದೆರಡು ಸಾಲಿನ ಭಾಷಣ ಓದಿ ನಿರ್ಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರು, ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿ ಎಂದುಕೊಂಡು ವರ್ತಿಸುತ್ತಿರುವ ರಾಜ್ಯಪಾಲರ ನಡೆ ಖಂಡನೀಯ.!
ರಾಜ್ಯದ ಪಾಲಿಗೆ ಅತ್ಯುನ್ನತ ಹುದ್ದೆಯಲ್ಲಿರುವ ರಾಜ್ಯಪಾಲರು ಸಂವಿಧಾನಾತ್ಮಕ ಕರ್ತವ್ಯವನ್ನು ಮರೆತು ಯಾವುದೋ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ನ್ಯಾಯಾಂಗವು ಮಧ್ಯೆ ಪ್ರವೇಶಿಸಿ, ದಿಕ್ಕುತಪ್ಪಿರುವ ರಾಜ್ಯಪಾಲರಿಗೆ ಸಂವಿಧಾನದ ನಿಯಮಾವಳಿಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದ್ದಾರೆ.
ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿ ಬಿಜೆಪಿ ಕನ್ನಡಿಗರನ್ನು ಅವಮಾನಿಸುವ ಪ್ರಕ್ರಿಯೆ ಮುಂದುವರೆದಿದೆ. ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಕಡೆಗಣಿಸಿ, ಶೋಷಿಸಿದ್ದ ಬಿಜೆಪಿ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ.
ರಾಷ್ಟ್ರಗೀತೆ ನುಡಿಸುವವರೆಗೂ ಕಾಯದೆ ಎದ್ದು ಹೊರಟ ರಾಜ್ಯಪಾಲರು ಶಿಷ್ಟಾಚಾರವನ್ನು ಬದಿಗೊತ್ತಿ ರಾಷ್ಟ್ರಗೀತೆಗೂ ಅವಮಾನಿಸಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರ ಗೀತೆಯ ವಿರೋಧಿ, ಸಂವಿಧಾನ ವಿರೋಧಿ, ಕನ್ನಡಿಗರ ವಿರೋಧಿ ಎನ್ನುವುದು ಜಗಜ್ಜಾಹೀರಾಗಿದೆ.
ಕನ್ನಡಿಗರನ್ನು ಉದ್ದೇಶಿಸಿ ಪೂರ್ಣ ಭಾಷಣ ಮಾಡದಷ್ಟು ತೀವ್ರ ಅಸಹನೆಯನ್ನು ತೋರಿರುವ ರಾಜ್ಯಪಾಲರು ಬಿಜೆಪಿಯ ದರ್ಪ, ದ್ರಾಷ್ಟ್ಯದ ವಕ್ತಾರರಾಗಿ ನಿರೂಪಿಸಿದ್ದಾರೆ. ಅಸಡ್ಡೆಯಿಂದ ಕೂಡಿದ ನಾಲ್ಕು ಸಾಲಿನ ಮಾತು, ಸರ್ಕಾರದ ಭಾಷಣದ ತಿರಸ್ಕಾರವು ಸಂವಿಧಾನದ ಆಶಯಗಳ ಉಲ್ಲಂಘನೆ ಮಾತ್ರವಲ್ಲ, ಕನ್ನಡಿಗರಿಗೆ ಎಸಗಿದ ಘೋರ ಅವಮಾನ.
ರಾಜ್ಯಪಾಲರ ಮೂಲಕ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ನೆಲಕ್ಕೆ ಹಾಕಿ ಹೊಸಕುತ್ತಿರುವ ಬಿಜೆಪಿಗೆ ಕನ್ನಡಿಗರು ಪಾಠ ಕಲಿಸುವುದು ನಿಶ್ಚಿತ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ಮುಖಂಡ ಮೇಲ್ಮನೆ ಸದಸ್ಯ ಬಿಕೆ ಹರಿಪ್ರಸಾದ್ ಅವರು, ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ಸಂಪೂರ್ಣ ಅಸಂವಿಧಾನಿಕವಾಗಿದೆ. ಅವರು ರಾಜ್ಯ ಮತ್ತು ವಿಧಾನಮಂಡಲದ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದಾರೆ. ಆರ್ಎಸ್ಎಸ್, ಮೋಹನ್ ಭಾಗವತ್, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಿರ್ದೇಶನದಂತೆ ಭಾಷಣ ಮಾಡಲು ನಿರಾಕರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಸಂವಿಧಾನದ ನಿಯಮ- 176 ಪ್ರಕಾರ, ರಾಜ್ಯಪಾಲರು ರಾಜ್ಯ ವಿಧಾನಮಂಡಲದ ಮೊದಲ ಅಧಿವೇಶನದಲ್ಲಿ ವಿಶೇಷ ಭಾಷಣ ಮಾಡಲೇಬೇಕ. . ಅವರು ಭಾಷಣ ಓದಲು ನಿರಾಕರಿಸುವುದು ಸಾಧ್ಯವಿಲ್ಲ. ರಾಜ್ಯಪಾಲರನ್ನು ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಇರುವ ವವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯಪಾಲರ ಭದ್ರತಾ ಪಡೆ ಮತ್ತು ಬಿಜೆಪಿ ಶಾಸಕರು ನನ್ನಉಡುಪನ್ನು ಹರಿದಿದ್ದಾರೆ. ನನ್ನ ಮೇಲೆ ಕೈ ಮಾಡುವ ಹಂತಕ್ಕೂ ತಲುಪಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಕೊಡುವಷ್ಟು ಹೇಡಿ ನಾನಲ್ಲ. ಅವರಿಗೆ ಸೂಕ್ತ ವೇದಿಕೆಯಲಿ ಸೂಕ್ತ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

