ಭಾರತೀಯ ಮೂಲ ಗಗನಯಾನಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿ

ಟೆಕ್ಸಾಸ್‌: ಭಾರತೀಯ ಮೂಲದ, 27 ವರ್ಷಗಳ ಕಾಲ ನಾಸಾದ ಗಗನಯಾನಿಯಾಗಿದ್ದ ಸುನಿತಾ ವಿಲಿಯಮ್ಸ್ ನಿವೃತ್ತಿಯಾಗಿದ್ದಾರೆ. ಸುನಿತಾ ವಿಲಿಯಮ್ಸ್ ಅವರು 2025ರ ಡಿಸೆಂಬರ್‌ 27ರಂದೇ ನಿವೃತ್ತಿಯಾಗಿದ್ದಾರೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.

ನಾಸಾದ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮ್ಯಾನ್ ಅವರು ತಮ್ಮ ಸಂದೇಶದಲ್ಲಿ ಸುನಿತಾ ವಿಲಿಯಮ್ಸ್  ಅವರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಲ್ಲಿಸಿರುವ ಸೇವೆ ಅಸಾಧಾರಣವಾಗಿದೆ. ಅವರ ಯೋಜನೆಗಳು ಚಂದ್ರ ಮತ್ತು ಮಂಗಳ ಗ್ರಹದತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಭದ್ರ ಬುನಾದಿ ಹಾಕಿದ್ದು, ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿವೆ ಎಂದಿದ್ದಾರೆ.

1998ರಲ್ಲಿ ಗಗನಯಾನಿಯಾಗಿ ನಾಸಾ ಸೇರಿದ ಅವರು 2006, 2022 ಮತ್ತು 2024ರಲ್ಲಿ ಮೂರು ಬಾಹ್ಯಾಕಾಶ ಮಿಷನ್‌ ಗಳನ್ನು ಪೂರೈಸಿದ್ದು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅವರು ಒಟ್ಟು ಒಂಬತ್ತು ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿ, 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ನಡೆಸಿದ್ದಾರೆ. ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲಿಗರು ಆಗಿದ್ದಾರೆ.

ಸುನಿತಾ ಅವರ ಪೂರ್ವಜರು ಗುಜರಾತ್‌ನ ಮೆಹಸಾನಾ ಜಿಲ್ಲೆಯ ಜುಲಾಸನ್ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆ ದೀಪಕ್ ಪಾಂಡ್ಯಾ ಅವರು 1953ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಇಂಟರ್‌ಮಿಡಿಯೇಟ್ ಸೈನ್ಸ್ ಪದವಿ ಪಡೆದು ಅಮೆರಿಕದ ಒಹಿಯೊದ ಕ್ಲೆವ್‌ಲ್ಯಾಂಡ್‌ನಲ್ಲಿ ವೈದ್ಯಕೀಯ ವಿಜ್ಞಾನ ವಿಷಯದಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದರು. ನಂತರ 1964ರಲ್ಲಿ ವೆಸ್ಟರ್ನ್‌ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 1957ರಲ್ಲೇ ಪಾಂಡ್ಯಾ ಅವರು ಅಮೆರಿಕದಲ್ಲಿ ನೆಲೆಸಿರುವ ಸ್ಲೊವೆನಿಯಾ ಮೂಲದ ಉರ್ಸುಲಿನ್ ಬೊನ್ನಿ ಝಲೊಕಾರ್ ಅವರನ್ನು ವಿವಾಹವಾದರು. ಈ ದಂಪತಿಯ ಪುತ್ರಿಯೇ ಸುನಿತಾ. ಇವರು  1965ರಲ್ಲಿ ಜನಿಸಿದರು.

More articles

Latest article

Most read