ನವದೆಹಲಿ: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್ ಐ ಆರ್) ಹೆಸರಿನಲ್ಲಿ ಸಾಫ್ಟ್ ವೇರ್ ಮೂಲಕ ಅಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ವಾಗ್ದಾಳಿ ನಡೆಸಿದೆ. ಸುಪ್ರೀಂ ಕೋರ್ಟ್ ಪಾರದರ್ಶಕ ಮತ್ತು ಗೊಂದಲ ರಹಿತವಾಗಿ ಎಸ್ ಐ ಆರ್ ನಡೆಸುವಂತೆ ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ಮುಖಂಡರು ಸತತವಾಗಿ ಟೀಕಿಸುತ್ತಲೇ ಬಂದಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಿಯೋಗವು ಚುನಾವಣಾ ಆಯೋಗದೊಂದಿಗೆ ಡಿಸೆಂಬರ್ 31ರಂದು ನಡೆಸಿದ ಸಭೆಯ ನಡಾವಳಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. ಸಂಸದೆ ಸಾಗರಿಕಾ ಘೋಷ್ ಮಾತನಾಡಿ, ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕೇ ಹೊರತು ಒಂದು ರಾಜಕೀಯ ಪಕ್ಷದ ಪರವಾಗಿ ಅಲ್ಲ. ಪಕ್ಷವೊಂದರ ಪರವಾಗಿ ಮತಕಳವು ಮಾಡುವುದು ಆಯೋಗದ ಕೆಲಸ ಅಲ್ಲ ಎಂದಿದ್ದಾರೆ.
ಸಂಸದ ಡೆರೆಕ್ ಒಬ್ರಿಯಾನ್ ಚುನಾವಣಾ ಆಯೋಗ ದೇಶದ ವಿಶ್ವಾಸಾರ್ಹ ಸಂಸ್ಥೆ. ದಶಕಗಳಿಂದ ಈ ಸಂಸ್ಥೆ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಬಂದಿದೆ. ಆದರೆ ಈಗ ಇಂತಹ ಸಂಸ್ಥೆ ನಾಶದ ಹಾದಿ ಹಿಡಿದಿದೆ. ಚುನಾವಣಾ ಆಯೋಗ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಇಡೀ ದೇಶ ಬಯಸುತ್ತದೆ. ಪಾರದರ್ಶಕ ಮತ್ತು ಯೋಜನಾಬದ್ಧ ಎಸ್ ಐ ಆರ್ ನಡೆಸುವುದಾದರೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಸಾಮಾನ್ಯ ಜನರಿಗೆ ಹೊರೆಯಾಗುವಂತೆ ನಡೆಸಬಾರದು. ನಡೆಸಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತರಿಗೆ ಅವರದ್ದೇ ಆದ ಜವಾಬ್ದಾರಿಗಳಿರುತ್ತವೆ. ಅದರ ಬದಲು ಮರಣದಂಡನೆ ವಿಧಿಸುವ ಮತ್ತು ಗಲ್ಲಿಗೇರಿಸುವವರು ಆಗಬಾರದು ಎಂದು ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಗೆ ಯಾವ ಸಾಫ್ಟ್ ವೇರ್ ಬಳಸಲಾಗುತ್ತಿದೆ ಎನ್ನುವುದೇ ತಿಳಿದಿಲ್ಲ. ಪೋಷಕರ ಹೆಸರು, ಮತದಾರರರು ಮತ್ತು ಅವರ ಪೋಷಕರ ವಯಸ್ಸಿನಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸಿ, 1.25 ಕೋಟಿ ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದನ್ನು ಅವರು ಪ್ರಶ್ನಿಸಿದ್ದಾರೆ.

