Tuesday, January 20, 2026

ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್ ವಿಡಿಯೋ ಬಹಿರಂಗ: ಸಾಮಾಜಿಕ ಕಾರ್ಯಕರ್ತನ ಕೈವಾಡ; ಯಾರೀತ?

Most read

ಬೆಂಗಳೂರು: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗಗೊಳ್ಳಲು ಜನಪ್ರಿಯ ಕಾರ್ಯಕರ್ತನೊಬ್ಬ ಕಾರಣ ಎನ್ನಲಾಗಿದೆ. ಈ ಕಾರ್ಯಕರ್ತನ ಬೇಡಿಕೆಗಳಿಗೆ ರಾಮಚಂದ್ರ ರಾವ್ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ವಿಡಿಯೋಗಳನ್ನು ಹರಿಯಬಿಡಲಾಗಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.

ಮೊದಲು ಬಿಡುಗಡೆಯಾದ 47 ಸೆಕೆಂಡ್‌ ಗಳ ವಿಡಿಯೋದಲ್ಲಿ ಸಮವಸ್ತ್ರದಲ್ಲಿ ಮಹಿಳೆಯ ಜತೆ ರಾಸಲೀಲೆ ನಡೆಸಿರುವುದೂ ಸೇರಿದಂತೆ ಮೂರು ಪ್ರತ್ಯೇಕ ವಿಡಿಯೋಗಳಿವೆ. ಒಂದರಲ್ಲಿ ಮಹಿಳೆ ಚೂಡಿದಾರ್‌ ಮತ್ತು ಮತ್ತೊಂದರಲ್ಲಿ ಸೀರೆ ಧರಿಸಿರುವುದು ಕಂಡು ಬಂದಿದೆ.

ಈ ವಿಡಿಐೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎರಡು ಆಡಿಯೋ ತುಣುಕುಗಳೂ ಬಹಿರಂಗವಾಗಿವೆ. ಒಂದು ಆಡಿಯೋ 4 ನಿಮಿಷ 28 ಸೆಕೆಂಡ್‌ ಇದ್ದರೆ ಮತ್ತೊಂದು 5 ನಿಮಿಷ 3 ಸೆಕಂಡ್‌ ಗಳಷ್ಟಿದೆ. ಸುಮಾರು 8 ವರ್ಷಗಳ ಹಿಂದೆ ರಾಮಚಂದ್ರ ರಾವ್‌ ಅವರು, ಬೆಳಗಾವಿಯಲ್ಲಿ ಉತ್ತರ ವಲಯದ ಐಜಿಪಿ ಹುದ್ದೆಯಲ್ಲಿದ್ದಾಗ ಈ ವಿಡಿಯೋ ಗಳನ್ನು ಚಿತ್ರೀಕರಿಸಲಾಗಿದೆ. ಆದರೆ ಈ ವಿಡಿಯೋ ತುಣುಕುಗಳು ಸಾರ್ವಜನಿಕರಿಗೆ ಮಾತ್ರ ಹೊಸದು ಅನ್ನಿಸಬಹುದು. ಆದರೆ ಐಪಿಎಸ್‌, ರಾಜಕಾರಣಿಗಳು ಮತ್ತು ಪತ್ರಕರ್ತರಿಗೆ ಹೊಸದೇನೂ ಅಲ್ಲ. ಈ ಮೊದಲೇ ಈ ವಲಯಗಳಲ್ಲಿ ವಿಡಿಯೋ ಆಡಿಯೋ ಕ್ಲಿಪ್ ಗಳು ಹರಿದಾಡಿದ್ದವು. ರಾಮಚಂದ್ರರಾವ್‌ ಅವರಿಗೂ ಈ ವಿಷಯ ತಿಳಿದಿತ್ತು. ಸಾರ್ವಜನಿಕವಾಗಿ ಬಹಿರಂಗಗೊಳ್ಳುವುದಕ್ಕೂ ಮುನ್ನ ಈ ಕ್ಲಿಪ್‌ ಗಳು ಐಪಿಎಸ್‌ ಅಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ವೈರಲ್‌ ಆಗಿದ್ದವು.

ಈ ಹಿಂದೆ ಸಚಿವರಾಗಿದ್ದ ಎಚ್.ವೈ. ಮೇಟಿ ಅವರ ರಾಸಲೀಲೆಯ ವಿಡಿಯೋ ವೈರಲ್‌ ಮಾಡಿದ ಕಾರ್ಯಕರ್ತನೇ ರಾಮಚಂದ್ರರಾವ್‌ ಅವರ ವಿಡಿಯೋ ಲೀಕ್ ಆಗಲು ಕಾರಣನಾಗಿದ್ದಾನೆ. ಆಡಿಯೋ ಕ್ಲಿಪ್‌ ಸಂಬಂಧ ರಾಮಚಂದ್ರರಾವ್‌ ಮತ್ತು ಕಾರ್ಯಕರ್ತ ಮಾತುಕಡೆ ನಡೆಸಿ ಡೀಲ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ರಾವ್‌, ಕಾರ್ಯಕರ್ತನ ಬೇಡಿಕೆಯನ್ನು ಒಪ್ಪಿಕೊಂಡಿಲ್ಲ. ಈ ವಿಡಿಯೋಗಳನ್ನು ಕುರಿತು ಅರಿವಿಗೆ ಬರುತ್ತಿದ್ದಂತೆ ರಾವ್‌, ಬಿಟ್‌ ಕಾಯಿನ್‌ ಹಗರಣದ ರೂವಾರಿ ಶ್ರೀಕೃಷ್ಣ ರಮೇಶ್‌ ಅಥವಾ ಶ್ರೀಕಿ ವಿರುದ್ಧ ವಿರುದ್ಧ ಆರೋಪ ಹೊರಿಸಲು ವಿಫಲ ಯತ್ನ ನಡೆಸಿದ್ದಾರೆ. ಶ್ರೀಕಿಯೇ ತಮ್ಮ ವಿರುದ್ಧ ನಕಲಿ ವಿಡಿಯೋಗಳನ್ನು ಹರಿಯಬಿಡುತ್ತಿದ್ದಾನೆ ಎಂದು ರಾವ್‌ ಆರೋಪಿಸಿದ್ದರಾದರೂ ಈ ಪ್ರಯತ್ನ ಸಫಲವಾಗಲಿಲ್ಲ.

ರಾಮಚಂದ್ರರಾವ್‌ ತನ್ನ ಬೇಡಿಕೆಗಳಿಗೆ  ಮಣಿಯುವುದಿಲ್ಲ ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಈ ವಿಡಿಯೋ ಆಡಿಯೋ ಕ್ಲಿಪ್‌ ಗಳನ್ನು ಇಟ್ಟುಕೊಂಡಿದ್ದ ಕಾರ್ಯಕರ್ತ ಬಹಿರಂಗಗೊಳಿಸಿದ್ದಾನೆ.

ಈ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಮುಜುಗರಕ್ಕೀಡಾಗುವುದರಿಂದ ತಪ್ಪಿಸಿಕೊಳ್ಳಲು ಸೋಮವಾರ ರಾತ್ರಿ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿದೆ. ಇಂದು ಇಲಾಖಾ ತನಿಖೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಆದೇಶಿಸಿದ್ದಾರೆ.

ಅಖಿಲ ಭಾರತ ಸೇವೆಗಳ (ನಡತೆ) ನಿಯಮಗಳು, 1968 ರ ನಿಯಮ 3 ರ ಉಲ್ಲಂಘನೆಯಾಗಿದೆ. ಆದ್ದರಿಂದ ವಿಚಾರಣೆಯನ್ನು ಬಾಕಿ ಇರಿಸಿ. ಡಾ. ಕೆ. ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು. 1969 ರ ನಿಯಮ 3(1)(a) ಅಡಿಯಲ್ಲಿ ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಈ ಅವಧಿಯಲ್ಲಿ ಇವರು ಕೇಂದ್ರ ಸ್ಥಾನವನ್ನು ಬಿಟ್ಟು ಹೊರಹೋಗುವಂತಿಲ್ಲ.

ರಾಮಚಂದ್ರರಾವ್‌ 1993 ನೇ ಬ್ಯಾಚ್‌ ನ ಐಪಿಎಸ್‌ ಅಧಿಕಾರಿ. 2025 ರಲ್ಲಿ ಇವರ ಮಲಮಗಳು ಚಿತ್ರನಟಿ ರನ್ಯಾ ರಾವ್‌ ಚಿನ್ನ ಕಳ್ಳ ಸಗಾಣೆ ಪ್ರಕರಣದಲ್ಲಿ ಸಿಕ್ಕಿಕೊಂಡು ಜೈಲು ಪಾಲಾದಾಗ ಇವರ ಹೆಸರು ಮುನ್ನೆಲೆಗೆ ಬಂದಿತ್ತು. ತನಿಖೆಯ ಭಾಗವಾಗಿ ಅಗ ರಾವ್‌ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. ನಂತರ ಇವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಯಾಗಿ ನೇಮಕ ಮಾಡಲಾಗಿತ್ತು.

ಇವರು ಮೇ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದು ಇದೀಗ ಮತ್ತೊಂದು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಮಚಂದ್ರ ರಾವ್‌ ಅವರ ವಿಚಾರಣೆ ನಡೆಸಿ ಅವರು ತಪ್ಪು ಎಸಗಿರುವುದು ಸಾಬೀತಾದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಪ್ರತಿಕ್ರಿಯಿಸಿ ಇವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ತನಿಖೆಯ ನಂತರ ಇವರ ವಜಾ ಆದರೂ ಆಗಬಹುದು ಎಂದು ಉತ್ತರಿಸಿದ್ದಾರೆ.

More articles

Latest article