ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸುವ ಮೂಲಕ ಕನಿಷ್ಠ 1 ಕೋಟಿ ಜನರ ಜೀವ ಉಳಿಸಿದ್ದೀರಿ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ನನಗೆ ಕೃತ್ಜ್ಞತೆಗಳನ್ನು ಸಲ್ಲಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಛರಿಸಿದ್ದಾರೆ.
2025ರಲ್ಲಿ ಒಂದೇ ವರ್ಷದಲ್ಲಿ ಪರಮಾಣು ಅಸ್ತ್ರಗಳನ್ನು ಹೊಂದಿರುವ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ಯುದ್ಧ ನಡೆಸುವುದನ್ನು ತಪ್ಪಿಸಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೇವೆ. ಎಂಟು ಶಾಂತಿ ಒಪ್ಪಂದಗಳನ್ನು ಮಾಡಿದ್ದೇವೆ. ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಿದ್ದೇವೆ ಎಂದು ಹೇಳಿರುವ ಟ್ರಂಪ್, 1 ಕೋಟಿ ಜನರ ಜೀವ ಉಳಿಸಿದ್ದೇನೆ ಎಂದು ಪಾಕಿಸ್ತಾನಿ ಪ್ರಧಾನಿ ಹೇಳಿದ್ದಾರೆ ಎಂದೂ ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಸಂಘರ್ಷದ ನಂರ ಟ್ರಂಪ್ ಇದುವರೆಗೂ ಸುಮಾರು 80ಕ್ಕೂ ಹೆಚ್ಚು ಬಾರಿ ಸಂಭವನೀಯ ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಹೇಳುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ನೊಬೆಲ್ ಶಾಂತಿ ಪುರಸ್ಕಾರ ನನಗೆ ನೀಡಬೇಕು ಎಂದೂ ಹೇಳುತ್ತಾ ಬಂದಿದ್ದರು. ಆದರೆ, ಭಾರತ ಮಾತ್ರ ಮೂರನೇ ವ್ಯಕ್ತಿಯ ಮಧ್ಯಪ್ರವೇಶವನ್ನು ಅಲ್ಲಗಳೆದಿದೆ.

