ಬೆಂಗಳೂರು: ನಗರದ ಹೊರವಲಯದ ಕೋಗಿಲು ಬಳಿ ಶೆಡ್ ಗಳಲ್ಲಿ ವಾಸಿಸುತ್ತಿರುವವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಆರೋಪದಡಿಯಲ್ಲಿ ಹಿಂದೂ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ತಡರಾತ್ರಿ ಬನ್ನೇರುಘಟ್ಟ ಪೊಲೀಸರು, ಪುನೀತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ಅಕ್ರಮ ವಲಸಿಗರ ಶೆಡ್ ಗಳಿಗೆ ಹೋಗಿ ಅಲ್ಲಿ ವಾಸಿಸುತ್ತಿರುವವರ ದಾಖಲೆಗಳನು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಶೆಡ್ ವಾಸಿಗಳ ರಾಷ್ಟ್ರೀಯತೆಯನ್ನು ಪ್ರಶ್ನಿಸಿದ್ದರು. ಈ ವಿಡಿಯೋಗಳನ್ನು ಹಂಚಿಕೊಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸರ್ಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು.
ಈತನ ನಡೆಯನ್ನು ಖಂಡಿಸಿ ಹಲವಾರು ಸಾಮಾಜಿಕ ಕಾರ್ಯಕರ್ತರು ದೂರು ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು.
‘ದ್ವೇಷದ ಮಾತಿನ ವಿರುದ್ದ ಜನಾಂದೋಲನ ಸಂಘಟನೆ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಇಮೇಲ್ ಮೂಲಕ ಮನವಿ ಸಲ್ಲಿಸಿತ್ತು.
ಕೊಲೆ ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳುತ್ತಿದ್ದು, ಬೆದರಿಕೆ ಹಾಗೂ ಭೀತಿಯನ್ನುಂಟು ಮಾಡುತ್ತಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿತ್ತು.

