ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚುತ್ತಿದೆ. ಇಲ್ಲಿನ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಭಾರತದ ಗಡಿ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್ ಗಳನ್ನು ಭಾರತೀಯ ಭದ್ರತಾಪಡೆಗಳು ಹೊಡೆದುರುಳಿಸಿವೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳಿಂದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಹಾರಾಟ ನಡೆಸುತ್ತಲೇ ಇವೆ. ಈ ವಿಷಯವನ್ನು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಗಮನಕ್ಕೆ ತಂದಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ರಾಜೌರಿಯ ಬಳಿ ಭಾರತೀಯ ಭೂಪ್ರದೇಶದ ಮೇಲೆ ಪಾಕ್ ಡ್ರೋನ್‌ಗಳ ಹಾರಾಟ ಕಂಡು ಬರುತ್ತಿದ್ದಂತೆ ಅವುಗಳತ್ತ ಗುಂಡು ಹಾರಿಸಲಾಗಿತ್ತು. ನಂತರ 7.35 ರ ವೇಳೆಯಲ್ಲೂ ಧೇರಿ ಧಾರಾ ಎಂಬ ಗ್ರಾಮದಲ್ಲಿ ಎರಡು ಡ್ರೋನ್‌ಗಳ ಹಾರಾಟ ನಡೆಸಿರುವುದು ಪತ್ತೆಯಾಗಿದ್ದು, ಅವುಗಳತ್ತಲೂ ಗುಂಡು ಹಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಡ್ರೋಣ್ ಗಳು ಹಾರಾಟ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಭಾನುವಾರವೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸಾಂಬಾ, ರಾಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಹಾರಾಟ ನಡೆಸಿದ್ದವು.
ಜ.9ರಂದು ಭದ್ರತಾ ಪಡೆಗಳು ಸಾಂಬಾದ ಅಂತರರಾಷ್ಟ್ರೀಯ ಗಡಿಯ ಬಳಿಯ ಘಗ್ವಾಲ್‌ನ ಪಲೂರಾ ಗ್ರಾಮದಲ್ಲಿ ಪಾಕಿಸ್ತಾನದಿಂದ ಡ್ರೋಣ್ ಮೂಲಕ ಎರಡು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು, 16 ಗುಂಡುಗಳು ಮತ್ತು ಒಂದು ಗ್ರೆನೇಡ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಉದುರಿಸಲಾಗಿತ್ತು. ಇವುಗಳನ್ನು ಭಾರತ ಸೇನೆ ವಶಪಡಿಸಿಕೊಂಡಿತ್ತು. .

