ಬೆಂಗಳೂರು: ಬಳ್ಳಾರಿ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಪ್ರಕರಣವನ್ನು ತನಿಖೆ ಮಾಡುವ ಸಾಮರ್ಥ್ಯ ನಮ್ಮ ಪೊಲೀಸರಿಗೆ ಇದೆ. ಒಂದು ವೇಳೆ ಈ ಪ್ರಕರಣ ರಾಜ್ಯ ಪೊಲೀಸರ ವ್ಯಾಪ್ತಿಯನ್ನು ಮೀರಿದೆ ಎಂದು ಕಂಡು ಬಂದಲ್ಲಿ ಸಿಬಿಐಗೆ ವಹಿಸುವ ಬಗ್ಗೆ ಚರ್ಚಿಸಬಹುದು. ಸಧ್ಯಕ್ಕೆ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಯಾವುದೇ ಪ್ರಕರಣಗಳನ್ನು ಸಿಬಿಐಗೆ ವಹಿಸಬಾರದು ಎಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡಿಕೊಳ್ಳೇಕು ಎಂಬ ಅರಿವು ನನಗಿದೆ. ನಾನೂ ಸಹ 38 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಅನೇಕ ಜವಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಕೇಂದ್ರ ಸಚಿವ ಕುಮಾರಸ್ವಾಮಿಯವರ ಜತೆಯೂ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಸಾಮರ್ಥ್ಯ ಮತ್ತು ವ್ಯಕ್ತಿತ್ವ ಏನೆಂದು ಅವರಿಗೂ ಅರಿವಿದೆ ಎಂದು ಭಾವಿಸುತ್ತೇನೆ. ಹಾಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಪ್ರಕರಣ ಕುರಿತು ಈಗಾಗಲೇ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿಲ್ಲ. ಆಕೆಯನ್ನು ಬಂಧಿಸುವಾಗ ಆ ಮಹಿಳೆಯೇ ಆ ರೀತಿ ವರ್ತಿಸಿದ್ದಾರೆ. ಈ ಪ್ರಕರಣದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲಾಗುತ್ತಿದೆ. ಈಗಾಗಲೇ ಹಲವಾರು ಮಂದಿಯನ್ನು ಬಾಂಗ್ಲಾಗೆ ಕಳುಹಿಸಿದ್ದೇವೆ. ಇಡೀ ರಾಜ್ಯದಲ್ಲಿ ಅನಧಿಕೃತವಾಗಿ ಎಲ್ಲಿಯೇ ಇದ್ದರೂ ಬಾಂಗ್ಲಾ ದೇಶದವರನ್ನು ಗುರುತಿಸಿ ಗಡಿಪಾರು ಮಾಡುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ತಿಳಿಸಿದರು.

