ಮಾದಕ ವಸ್ತುಗಳ ವಿರುದ್ಧ ನಮ್ಮ ಸರ್ಕಾರ ಸಮರೋಪಾದಿಯ ಕಾರ್ಯಾಚರಣೆ ನಡೆಸುತ್ತಿದ್ದು, ಇಡೀ ರಾಜ್ಯವನ್ನೇ ನಶೆಮುಕ್ತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು ಗ್ರಾ. ಜಿಲ್ಲೆಯ ದಾಬಸ್‍ಪೇಟೆಯ ಕರ್ನಾಟಕ ವೇಸ್ಟೇಜ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾದಕವಸ್ತುವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಯಾವುದೇ ಮುಲಾಜಿಲ್ಲದೇ ಧೈರ್ಯವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಕ್ರಮಗಳಾಗಿದ್ದು, ಮೈಸೂರು, ಮಂಡ್ಯ, ಗದಗ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ ಎಂದರು.
ಅದೇ ರೀತಿ ರಾಜ್ಯವನ್ನು ಮಾದಕದ್ರವ್ಯ ಮುಕ್ತಗೊಳಿಸಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಸ್ತಿ ಮುಟ್ಟುಗೋಲು ಸೇರಿದಂತೆ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.
ಮೂರನೇ ಬಾರಿ ಗೃಹಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಬಾರಿ ಜವಾಬ್ದಾರಿ ಹೊತ್ತಾಗ ವಿಧಾನಸಭೆ ಮತ್ತು ಪರಿಷತ್‍ನಲ್ಲಿ ನಮ್ಮ ಇಲಾಖೆಯ ಬಗ್ಗೆ ಹೆಚ್ವು ಪ್ರಶ್ನೆ ಬಂದಿದ್ದರೆ ಅದು ಡ್ರಗ್ಸ್ ಬಗ್ಗೆ. ಜನ ಸಮುದಾಯದಲ್ಲಿ ಆತಂಕ ಏಕೆ. ಮಾದಕ ವಸ್ತುಗಳು ಇಡೀ ಸಮಾಜವನ್ನು ನಾಶ ಮಾಡುವ ಕೆಲಸ ಮಾಡುತ್ತಿವೆ. ವಿಶೇಷವಾಗಿ ಯುವಕರ ಜೀವನ ಹಾಳು ಮಾಡುತ್ತಿವೆ. ಒಳ್ಳೆ ಸಮಾಜ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಹಳ ದೊಡ್ಡ ಸವಾಲಾಗಿ ನಿಂತಿದೆ. ವಿಶ್ವದಲ್ಲಿ ಸವಾಲಾಗಿದೆ ಎಂದರು.
ಮಾದಕವ್ಯಸನ ಮುಕ್ತ ಕರ್ನಾಟಕವನ್ನು ಸರ್ಕಾರ ಘೋಷಿಸಿದರೆ ಸಾಲುವುದಿಲ್ಲ. ಕೆಳಹಂತದಲ್ಲಿ ಅದನ್ನು ಅನುಷ್ಟಾನಗೊಳಿಸುವುದು ಮುಖ್ಯ. ಈ ಹಿಂದೆ ಉಡ್ತಾ ಬೆಂಗಳೂರು ಆಗಬಾರದು ಎಂದು ಮಾಧ್ಯಮಗಳು ಎಚ್ಚರಿಕೆ ನೀಡಿದ್ದವು. ಶಾಲಾ-ಕಾಲೇಜುಗಳಲ್ಲಿ ಚಾಕ್ಲೆಟ್‍ಗಳಲ್ಲಿ ಬೆರೆಸಿ ಮಾದಕವಸ್ತುಗಳ ಮಾರಾಟ ಕಂಡುಬರುತ್ತಿದೆ. ಇಂತಹ ಮಾಫಿಯಾಗಳ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದರು.