ನವದೆಹಲಿ: ಮಧ್ಯಪ್ರದೇಶದ ಸ್ವಚ್ಛ ನಗರ ಎಂಬ ಖ್ಯಾತಿಗೆ ಒಳಗಾಗಿದ್ದ ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟಿರುವ ಪ್ರಕರಣ ಕುರಿತು ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಇಂದೋರ್‌ನಲ್ಲಿ ನೀರಿಗೆ ಬದಲಾಗಿ ವಿಷವನ್ನು ಸರಬರಾಜು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕುತ್ತಾ ಕೊಳಚೆ ನೀರು ಕುಡಿದು ಜನರು ಸಾಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕೆಮ್ಮಿನ ಸಿರಪ್‌ನಿಂದ ಕೆಲವು ಮಂದಿ ಅಸುನೀಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿ ಶಿಶುಗಳು ಮರಣ ಹೊಂದಿದ್ದವು. ಆದರೂ ಪ್ರಧಾನಿ ಮೋದಿ ಎಂದಿನಂತೆ ಮೌನವನ್ನು ಮುಂದುವರೆಸಿದ್ದಾರೆ ಎಂದು ಕುಟುಕಿದ್ದಾರೆ.
ಶುದ್ಧ ನೀರು ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗದೆ. ಅದು ಉಚಿತ ಭಾಗ್ಯವಲ್ಲ. ರಾಜ್ಯದ ಜನತೆಯ ಹಕ್ಕಾಗಿದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಸಾಧ್ಯವಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಶುದ್ಧ ಕುಡಿಯುವ ನೀರು ಒದಗಿಸುವಂತೆ ಇಲ್ಲಿನ ನಿವಾಸಿಗಳು ಹಲವು ಬಾರಿ ದೂರು ನೀಡಿದ್ದರೂ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಕೊಳಕು ಮತ್ತು, ದುರ್ವಾಸನೆಯುಕ್ತ ನೀರನ್ನು ಏಕೆ ಪೂರೈಕೆ ಮಾಡಲಾಯಿತು? ಕುಡಿಯುವ ನೀರಿನ ಜತೆ ಕೊಳಚೆ ನೀರು ಬೆರೆಯಲು ಹೇಗೆ ಸಾಧ್ಯ? ನಿರ್ಲಕ್ಷ್ಯ ವಹಿಸಿದ ಸಕಾಲದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕ್ರಮ ಕೈಗೊಳ್ಳಲು ಸಾಧ್ಯವೇ ಎಂದೂ ಅವರು ಕೇಳಿದ್ದಾರೆ.

