ಮೆಕ್ಸಿಕೋ ಸಿಟಿ: ದಕ್ಷಿಣ ಮೆಕ್ಸಿಕೋದ ಓಕ್ಸಾಕದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ13 ಮಂದಿ ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ. ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ.
ರೈಲು ಸಲೀನಾ ಕ್ರೂಜ್ ಬಂದರುವಿನಿಂದ ಕೋಟ್ಜಾಕೋಲ್ಕೋಸ್ ಗೆ ತೆರಳುತ್ತಿತ್ತು. ಈ ವೇಳೆ ನಿಜಾಂಡಾ ಎಂಬ ನಗರದ ಬಳಿ ರೈಲು ಸಾಗುತ್ತಿದ್ದಾಗ ರೈಲು ಹಳಿ ತಪ್ಪಿದೆ. ಇದರ ಪರಿಣಾಮ 13 ಮಂದಿ ಅಸುನೀಗಿದ್ದು, 98 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ರೈಲಿನಲ್ಲಿ 250 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತಕ್ಕೆ ಕಾರಣಗಳು ತಿಳಿದು ಬಂದಿಲ್ಲ. ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2023ರಲ್ಲಿ ಇಂಟರ್ ಓಷಿಯಾನಿಕ್ ರೈಲು ಉದ್ಘಾಟನೆಯಾಗಿತ್ತು. ಈ ರೈಲು ಇಂಟರ್ ಓಷಿಯಾನಿಕ್ ಕಾರಿಡಾರ್ ಯೋಜನೆಯ ಭಾಗವಾಗಿದ್ದು, ಮೆಕ್ಸಿಕೋದ ಪೆಸಿಫಿಕ್ ಬಂದರಿನಿಂದ ಗಲ್ಫ್ ಕರಾವಳಿಯ ಕೋಟ್ಜಾಕೋಲ್ಕೋಸ್ ಅನ್ನು ಸಂಪರ್ಕಿಸುತ್ತದೆ.

