“ಆತಿಥ್ಯ-ಔಚಿತ್ಯದ ಕತೆಗಳು”

Most read

ಫಿಡೆಲ್ ಕಾಸ್ಟ್ರೋ ನಿಧನರಾದ ಮರುದಿನವೇ ಅವರಿಗೆ ಭಾವಪೂರ್ಣ ವಿದಾಯವನ್ನು ಕೋರುವ ದೈತ್ಯ ಪೋಸ್ಟರ್ ಒಂದು ಅಂಗೋಲಾದ ರಾಜಧಾನಿ ಲುವಾಂಡಾದಲ್ಲಿ ಎದ್ದು ನಿಂತಿತ್ತು. ಕಾಸ್ಟ್ರೋರ ದೇಹಾಂತ್ಯವಾದರೂ ಅವರು ಅಂಗೋಲಾದಲ್ಲಿ ಮಾಡಿರುವ ವಿಶಿಷ್ಟ ಕೆಲಸಗಳು ಹಲವು ಪೀಳಿಗೆಯ ಮಂದಿಯ ನೆನಪಿನಲ್ಲುಳಿಯಲಿವೆ ಎಂಬುದನ್ನು ಸಾರುವಂತಿತ್ತು ಆ ದೊಡ್ಡ ಗಾತ್ರದ ಫಲಕ. ಇದು ಮಾಧ್ಯಮಗಳಲ್ಲಿ ಅದೆಷ್ಟು ಸುದ್ದಿಯಾಯಿತು ಅನ್ನುವುದಕ್ಕಿಂತಲೂ ಇಂಥದೊಂದು ಅಪರೂಪದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದು ಬಹಳ ಕಾಲ ನೆನಪಿನಲ್ಲುಳಿಯುವಂಥದ್ದು – ಪ್ರಸಾದ್‌ ನಾಯ್ಕ್‌, ದೆಹಲಿ.

ದಿಲ್ಲಿಯ ಬಾಗಿಲಿಗೀಗ ಮತ್ತೊಮ್ಮೆ ತಳಿರುತೋರಣದ ಸಂಭ್ರಮ.

ದಿಲ್ಲಿಗೆ ಅತಿಥಿಗಳು ಹೊಸತಲ್ಲ. ಅದರಲ್ಲೂ ದಿಲ್ಲಿಯು ದೇಶದ ಶಕ್ತಿಕೇಂದ್ರವಾಗಿರುವುದರಿಂದ ಇಲ್ಲಿ ರಾಜಾತಿಥ್ಯಗಳು ಸಾಮಾನ್ಯ. ಇಂದು ಆ ದೇಶದ ಅಧ್ಯಕ್ಷರು ಭಾರತದ ಪ್ರಧಾನಮಂತ್ರಿಗಳನ್ನು ಭೇಟಿಯಾಗಲಿದ್ದಾರೆ, ಈ ದೇಶದ ಪ್ರಧಾನಮಂತ್ರಿಗಳು ದಿಲ್ಲಿಯ ರಾಜ್ ಘಾಟಿಗೆ ತೆರಳಿ ಮಹಾತ್ಮಾಗಾಂಧಿಯವರ ಪ್ರತಿಮೆಗೆ ನಮಸ್ಕರಿಸಿದರು… ಇತ್ಯಾದಿ ಸುದ್ದಿಗಳನ್ನೆಲ್ಲ ನಾವು ಓದುತ್ತಿರುತ್ತೇವೆ. ಆಯಾ ದೇಶದ ಗಣ್ಯರು ಭೇಟಿ ನೀಡುವಾಗ ರಾಜತಾಂತ್ರಿಕ ಹಿನ್ನೆಲೆ-ಉದ್ದೇಶಗಳು ಹಲವಿದ್ದರೂ ಇವೆಲ್ಲವನ್ನು ಒಂದು ಬಗೆಯ ಸಂಪ್ರದಾಯದಂತೆ ಪಾಲಿಸಲಾಗುತ್ತದೆ ಮತ್ತು ನಮ್ಮ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತದೆ. ಅಷ್ಟರಮಟ್ಟಿಗೆ ದಿಲ್ಲಿಯ ಸುದ್ದಿಯೆಂದರೆ ಒಂದು ರೀತಿಯಲ್ಲಿ ರಾಷ್ಟ್ರೀಯ ಸುದ್ದಿಯೇ.

ಆದರೆ ನಾನಿಂದು ಹೇಳಲು ಹೊರಟಿರುವುದು ದಿಲ್ಲಿಯ ರಾಜಾತಿಥ್ಯದ ಬಗ್ಗೆಯೂ ಅಲ್ಲ, ಇವುಗಳನ್ನು ತಪ್ಪದೆ ಪ್ರಸಾರ ಮಾಡುವ ಮಾಧ್ಯಮಗಳ ಬಗ್ಗೆಯೂ ಅಲ್ಲ. ಬದಲಾಗಿ ಇವೆಲ್ಲದರ ನಡುವೆಯೂ ಎಂದಿನಂತೆ ತಮ್ಮ ಪಾಡಿಗೆ ಸಾಗುವ ಮಹಾನಗರದ ಬದುಕಿನದ್ದು. ಹಾಗೆ ನೋಡಿದರೆ ಯಾವುದೋ ದೇಶದ ಅಧ್ಯಕ್ಷರು ಇಲ್ಲಿ ಬಂದುಹೋಗುವ ವರ್ತಮಾನವೊಂದು ಜನಸಾಮಾನ್ಯನಿಗೆ ಕೇವಲ ಸುದ್ದಿಯಷ್ಟೇ ಹೊರತು ಬೇರೇನಿಲ್ಲ. ಇನ್ನು ಜಿಯೋಪಾಲಿಟಿಕ್ಸ್ ಸೂಕ್ಷ್ಮಗಳನ್ನು ನಿಯಮಿತವಾಗಿ ಗಮನಿಸದ ಮಂದಿಗೆ ಇವೆಲ್ಲ ದಕ್ಕುವುದೂ ಇಲ್ಲ, ಹೇಳಿಕೊಳ್ಳುವಷ್ಟು ತಟ್ಟುವುದೂ ಇಲ್ಲ. ಹೀಗಿರುವಾಗ ಈ ಸುದ್ದಿಯು ಮಂಗಳೂರಿನ ಓರ್ವ ನಾಗರಿಕನಿಗೆ ಅದೆಷ್ಟರ ಮಟ್ಟಿನ ಸುದ್ದಿಯೋ, ದಿಲ್ಲಿಯ ನಿವಾಸಿಗೂ ಬಹುತೇಕ ಅಷ್ಟರ ಮಟ್ಟಿನ ಸುದ್ದಿಯೇ. ಇವುಗಳ ಆಯಸ್ಸು ನಮ್ಮ ಸ್ಮಾರ್ಟ್ಫೋನುಗಳಲ್ಲಿ ಮೂಡಿ ಮರೆಯಾಗುವ, ಕೆಲಸಕ್ಕೆ ಬಾರದ ನೋಟಿಫಿಕೇಷನ್ನುಗಳ ಪಾಪ್-ಅಪ್ ಗಳಷ್ಟೇ!

ಈ ಮಧ್ಯೆ ಸುದ್ದಿಗಳ ಬಗ್ಗೆ ಅಸಡ್ಡೆಯುಳ್ಳ ನನ್ನಂತಹ ರಾಲ್ಫ್ ಡೊಬೆಲ್ಲಿಯ ಅಭಿಮಾನಿಗಳೂ ಇರುತ್ತಾರಲ್ಲ. ವಿಶ್ವದ ಬೇರೆ ಕಡೆಗಳಲ್ಲಿ ಈ ಬಗ್ಗೆ ಗೊತ್ತಿಲ್ಲ. ಆದರೆ ದಿಲ್ಲಿಯಲ್ಲಂತೂ ಸುದ್ದಿಗಳ ಹಿಂದೆ ಹೋಗದ ಸದ್ದಿಲ್ಲದ ಮಂದಿಗೂ ದಿಲ್ಲಿಗೆ ಬಂದಿರುವ ಗಣ್ಯ ಅತಿಥಿಗಳ ವರ್ತಮಾನವು ಒಂದಲ್ಲ ಒಂದು ರೀತಿಯಲ್ಲಿ ಸಿಕ್ಕೇಬಿಡುವುದುಂಟು. ಇದರ ಹಿಂದಿರುವುದು ಸರ್ಕಾರಿ ಸಂಸ್ಥೆಗಳ ಭಯಂಕರ ಪ್ರಚಾರವೂ ಅಲ್ಲ. ಮಹಾನಗರದಲ್ಲಿ ರಾತ್ರೋರಾತ್ರಿ ಬದಲಾಗಿ ಅನಗತ್ಯ ಕಿರಿಕಿರಿ ಸೃಷ್ಟಿಸುವ ಟ್ರಾಫಿಕ್ ನಿಯಮಾವಳಿಗಳೂ ಅಲ್ಲ. ಬದಲಾಗಿ ಇದರ ನಿಜವಾದ ಶ್ರೇಯಸ್ಸು ಸಲ್ಲಬೇಕಾಗಿರುವುದು ದಿಲ್ಲಿಯ ಇಂಡಿಯಾ ಗೇಟ್, ರಾಷ್ಟ್ರಪತಿ ಭವನ… ಇತ್ಯಾದಿ ಸ್ಥಳಗಳು, ಆಯಕಟ್ಟಿನ ರಸ್ತೆಗಳು ಮತ್ತು ಆಸುಪಾಸಿನ ಪ್ರಮುಖ ಏರಿಯಾಗಳಲ್ಲಿ ಹಾಕಿಸಲಾಗುವ ಪುಟ್ಟ, ತಾತ್ಕಾಲಿಕ ನಾಮಫಲಕಗಳಿಗೆ.

ಸುದ್ದಿ ಮತ್ತು ಸುದ್ದಿಮನೆಗಳ ಬಗ್ಗೆ ತೀವ್ರ ಆಸಕ್ತಿಯಿರುವ, ಆದರೆ ಯಾವತ್ತೂ ಸುದ್ದಿಗಳನ್ನು ಬೆನ್ನತ್ತಿ ಹೋಗದ ನನ್ನಂಥವರಿಗೆ ದಿಲ್ಲಿಗೆ ಬಂದಿರುವ ಅತಿಥಿಗಳ ಬಗ್ಗೆ ತಿಳಿಸುವುದು ಇದೇ ನಾಮಫಲಕಗಳು. ವಿಶೇಷವೆಂದರೆ ತಾತ್ಕಾಲಿಕ ಬಳಕೆಗಾಗಿ ಹಾಕಲಾಗಿರುವ ಈ ಚಂದದ ನಾಮಫಲಕಗಳು ನಮ್ಮ ಗಮನವನ್ನು ಸೆಳೆಯಲಾರದಷ್ಟು ಚಿಕ್ಕದೂ ಅಲ್ಲ. ಶಹರದ ಸೌಂದರ್ಯವನ್ನು ಮರೆಮಾಚುವಷ್ಟಿನ, ವಿಪರೀತ ಅಬ್ಬರವುಳ್ಳ ಫ್ಲೆಕ್ಸುಗಳಷ್ಟು ದೊಡ್ಡದೂ ಅಲ್ಲ. ಹೀಗಾಗಿ ಒಂದಿಷ್ಟು ದಿನಗಳ ಕಾಲ ತಮ್ಮ ಪಾಡಿಗಿದ್ದು, ನಂತರ ಮಾಯವಾಗಿಬಿಡುವ ಈ ನಾಮಫಲಕಗಳ ಬಗ್ಗೆ ಯಾರಿಗೂ ವಿಶೇಷ ತಕರಾರುಗಳಿಲ್ಲ. ಕಳೆದ ಬಾರಿ ಡೆನ್ಮಾರ್ಕಿನ ಪ್ರಧಾನಿ ಮೆಟ್ ಫ್ರೆಡೆರಿಕ್ಸನ್ ದಿಲ್ಲಿಗೆ ಆಗಮಿಸಿದ್ದಾಗ ಅವರ ಸುಂದರವಾದ ಭಾವಚಿತ್ರವನ್ನೊಳಗೊಂಡಿದ್ದ ಪುಟ್ಟ ಸ್ವಾಗತ ಫಲಕಗಳು ದಿಲ್ಲಿಯ ಆಯ್ದ ಪ್ರದೇಶಗಳಲ್ಲಿ ಹೀಗೆ ಕಂಡಿದ್ದವು. ಒಟ್ಟಿನಲ್ಲಿ ಭಾರತ ಮತ್ತು ಡೆನ್ಮಾರ್ಕಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಅರಿವಿಲ್ಲದ ಜನಸಾಮಾನ್ಯರಿಗೂ ಆಕೆಯ ಆಗಮನದ ಬಗೆಗಿನ ವರ್ತಮಾನವು ಅಂದು ಸಿಕ್ಕಿದ್ದು ಹೀಗೆ. 

ಸಂವಹನದ ದೃಷ್ಟಿಕೋನದಲ್ಲಿ ಇದನ್ನು ನೋಡುವುದಾದರೆ ಇದೂ ಕೂಡ ಒಂದು ರೀತಿಯ ಭಾಷೆಯೇ. ಕೇವಲ ಸುದ್ದಿ ಅಥವಾ ಜಾಹೀರಾತಿನ ಕ್ಲೀಷೆಗಿಂತ ಹೆಚ್ಚಾಗಿ ತಕ್ಕಮಟ್ಟಿನ ಭಾವನಾತ್ಮಕ ಪ್ರಭಾವಳಿಯನ್ನೂ ಮೂಡಿಸಬಲ್ಲಂತಹ ಒಂದು ಪರಿಣಾಮಕಾರಿ ವಿಧಾನವಿದು. ಜಗತ್ತಿನ ಹಲವು ದೇಶಗಳ ಸರಕಾರಗಳು ಮತ್ತು ಅಲ್ಲಿನ ಮುಖ್ಯಸ್ಥರು ನಿರಂತರವಾಗಿ ತಮ್ಮನ್ನು ತಾವು ಇಮೇಜ್ ಬಿಲ್ಡಿಂಗ್ ಕಸರತ್ತಿನಲ್ಲಿ ತೊಡಗಿಸಿಕೊಂಡಿರುವುದು ಈಗ ಗುಟ್ಟಿನ ಸಂಗತಿಯಾಗಿಯೇನೂ ಉಳಿದಿಲ್ಲ. ಅದರಲ್ಲೂ ಸಾಂಪ್ರದಾಯಿಕ ಶೈಲಿಯ ಜಾಹೀರಾತುಗಳಿಗಿಂತ ಹಲವು ಹೆಜ್ಜೆ ಮುಂದಕ್ಕೆ ಸಾಗಿ ನಾಗರಿಕರ ಸುಪ್ತಪ್ರಜ್ಞೆಯನ್ನು ನಿಧಾನವಾಗಿ ಆವರಿಸಿಕೊಳ್ಳುವುದು ಈ ನಡೆಯ ಒಂದು ಭಾಗವೇ ಆಗಿಬಿಟ್ಟಿದೆ. ಇನ್ನು ಪ್ರಚಾರತಂತ್ರಗಳು ಸ್ಥಳೀಯ ಮಟ್ಟದಲ್ಲೇ ಈ ಮಟ್ಟಿಗೆ ನಡೆಯುತ್ತಿರುವಾಗ ಜಾಗತಿಕ ಮಟ್ಟದ ಗಣ್ಯರು ಆಗಮಿಸುವ ಸಂದರ್ಭಗಳಲ್ಲಿ ಅವರಿಗೆ ಆಪ್ತ ಸ್ವಾಗತವನ್ನು ನೀಡುವುದು ಸಹಜವೂ ಹೌದು; ಆತಿಥ್ಯದ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ದೇಶಗಳ ಜವಾಬ್ದಾರಿಯೂ ಹೌದು.   

ಈ ನಡುವೆ ಡಿಸೆಂಬರ್ 4ರ ಪುತಿನ್ ಭೇಟಿಗಂತೂ ಪ್ರಚಾರವು ಹಿಂದೆಂದಿಗಿಂತಲೂ ಭರ್ಜರಿಯಾಗಿತ್ತು. ಜಾಗತಿಕ ಮಟ್ಟದಲ್ಲಿ ರಷ್ಯಾಗಿರುವ ಮಹತ್ವ, ರಷ್ಯಾ ಮತ್ತು ಭಾರತದ ಸ್ನೇಹ, ಪುತಿನ್ ರವರ ಇಮೇಜು, ಮೋದಿಯವರ ಜನಪ್ರಿಯತೆ… ಹೀಗೆ ಎಲ್ಲವೂ ಈ ಭೇಟಿಯ ಕುತೂಹಲಕ್ಕೆ ಮತ್ತಷ್ಟು ಇಂಬು ನೀಡಿತ್ತು. ನಿಗದಿತ ದಿನಾಂಕವು ಹತ್ತಿರ ಬರುತ್ತಿದ್ದಂತೆ ಭದ್ರತೆಯ ಸಿದ್ಧತೆಗಳು ಮಹಾನಗರದಲ್ಲಿ ಹೆಚ್ಚಿದ್ದಲ್ಲದೆ, ಆಯಕಟ್ಟಿನ ಪ್ರದೇಶಗಳಲ್ಲಿ ಮತ್ತಷ್ಟು ಹೆಚ್ಚಿನ ನಿಗಾ ಕೂಡ ಇರಿಸಲಾಗಿತ್ತು. ಇನ್ನು ಪತ್ರಿಕೆಯ ಸಂಪಾದಕೀಯ ಪುಟಗಳಿಗಿಂತ ಇಂದು ರೀಲ್ಸ್-ಮೀಮ್ಸ್ ಗಳು ಹೆಚ್ಚು ಜನಪ್ರಿಯವಾಗಿರುವುದರಿಂದ ಈ ಫಾರ್ಮಾಟಿಗೆ ಹೊಂದಿಕೊಳ್ಳಬಲ್ಲ ಸಾಕಷ್ಟು ಕಂಟೆಂಟುಗಳು ಹೊರಬಂದು ರೀಲ್ಸ್-ಮೀಮ್ಸ್ ಅಭಿಮಾನಿಗಳನ್ನೂ ರಂಜಿಸಿತು.

ಅದರಲ್ಲೂ ಈ ಬಾರಿ ಹೆಚ್ಚು ಸುದ್ದಿ ಮಾಡಿದ್ದು ಪುತಿನ್ ರವರು ಬಳಸುವ ಕಾರು. ಆರಿಂಚು ದಪ್ಪದ ಗಾಜು, ಆರು ಮೀಟರ್ ಉದ್ದ, ನೀರಿನಲ್ಲೂ ತೇಲಬಲ್ಲ ವಿಶೇಷತೆ, ಬಾಂಬ್-ಗ್ರೆನೇಡ್ ದಾಳಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ಸಾಮರ್ಥ್ಯ… ಹೀಗೆ ಹತ್ತು ಹಲವು ಕಾರಣಗಳಿಂದ ಸದ್ಯ ಬಹಳ ಸುದ್ದಿಯಲ್ಲಿರುವ ಪುತಿನ್ ರವರ ಕಾರು “ಚಲಿಸುವ ಭದ್ರಕೋಟೆ” ಅಂತಲೇ ಕರೆಯಲ್ಪಡುವ ವಾಹನವಂತೆ. ಇನ್ನು ಪುತಿನ್ ದಿಲ್ಲಿಗೆ ಬಂದಿಳಿಯುವ ಮುನ್ನವೇ ರಷ್ಯಾದಿಂದ ಇಲ್ಲಿಗೆ ಬಂದಿಳಿದಿದ್ದ ಅವರ ಅಂಗರಕ್ಷಕ ಪಡೆ, ಅವರ ವಾಸ್ತವ್ಯದ ಬಗೆಗಿನ ಸಿದ್ಧತೆಗಳು, ಚರ್ಚೆಯಾಗಲಿರುವ ಪ್ರಮುಖ ಸಂಗತಿಗಳಿಂದ ಹಿಡಿದು, ಟ್ರಂಪಾಪತಿಗಳ ಸದ್ಯದ ಮೂಡಿನ ಬಗ್ಗೆಯೂ ಈ ನಡುವೆ ಹಲವು ಸ್ವಾರಸ್ಯಕರ ವರದಿಗಳು ಬಂದುಹೋದವು. ಒಟ್ಟಾರೆಯಾಗಿ ಈ ಭೇಟಿಯ ನೆಪದಿಂದಾಗಿ ಪುತಿನ್ ರವರ ಬಗ್ಗೆ ಮತ್ತಷ್ಟು “ಫನ್ ಫ್ಯಾಕ್ಟ್” ಗಳು ನಮಗೆ ಸಿಕ್ಕಿದ್ದಂತೂ ಸುಳ್ಳಲ್ಲ.

ಇದು ಸ್ವಾಗತದಂತಹ ಸಂದೇಶವನ್ನು ಪರಿಣಾಮಕಾರಿಯಾಗಿ ನೀಡಬಲ್ಲ ಸುಂದರ ನಾಮಫಲಕಗಳದ್ದಾಯಿತು. ಹಾಗಂತ ಅವುಗಳು ಸ್ವಾಗತಕ್ಕೆ ಮಾತ್ರ ಸೀಮಿತವಾಗಬೇಕೇನೂ ಇಲ್ಲ. 2016ರ ನವೆಂಬರ್ 26ರಂದು ನಾನು ರಿಪಬ್ಲಿಕ್ ಆಫ್ ಅಂಗೋಲಾದಲ್ಲಿದ್ದೆ. ಅಂದು ಲುವಾಂಡಾದ ಹೆದ್ದಾರಿಯೊಂದರ ಬಳಿ ಕ್ಯೂಬಾದ ಅಧ್ಯಕ್ಷ ಫಿಡೆಲ್ ಕಾಸ್ಟ್ರೋರ ದೈತ್ಯ ಫ್ಲೆಕ್ಸ್ ಒಂದನ್ನು ನೋಡಿದಾಗ ನನಗೆ ಅಚ್ಚರಿಯಾಗಿತ್ತು. ಪೋರ್ಚುಗೀಸ್ ಭಾಷೆಯಲ್ಲಿದ್ದ ಆ ದೊಡ್ಡ ಫಲಕದ ಅಂದಾಜು ಎಂಭತ್ತು ಪ್ರತಿಶತ ಭಾಗವನ್ನು ಖುದ್ದು ಫಿಡೆಲ್ ಆವರಿಸಿಕೊಂಡಿದ್ದರು. ಈ ಬಗ್ಗೆ ನಮ್ಮ ದುಭಾಷಿಯ ಬಳಿ ವಿಚಾರಿಸಿದ ನಂತರವೇ ನಮಗೆ ಅಸಲಿ ವಿಷಯ ತಿಳಿದದ್ದು.

ಅಷ್ಟಕ್ಕೂ ಆಗಿದ್ದೇನೆಂದರೆ ಹಿಂದಿನ ದಿನವಷ್ಟೇ ಫಿಡೆಲ್ ಕಾಸ್ಟ್ರೋ ಕ್ಯೂಬಾದ ಹವಾನಾದಲ್ಲಿ ನಿಧನರಾಗಿದ್ದರು. ಹಾಗೆ ನೋಡಿದರೆ ಫಿಡೆಲ್ ಅದೆಷ್ಟೋ ಬಾರಿ ಸಾವನ್ನು ಜಯಿಸಿ ಬಂದಿದ್ದವರು. ಲೆಕ್ಕವಿಲ್ಲದಷ್ಟು ದಾಳಿಗಳ ಕಣ್ಣುತಪ್ಪಿಸಿ ಪವಾಡ ಸದೃಶವೆಂಬಂತೆ ಉಳಿದು, ಶತ್ರುರಾಷ್ಟ್ರಗಳಿಗೆ ತಲೆನೋವಾಗಿದ್ದವರು. ಹೀಗಿದ್ದಾಗ ಫಿಡೆಲ್ ಕಾಸ್ಟ್ರೋರ ಸಾವಿನ ಸುದ್ದಿ ಬಂತೆಂದರೆ ಅದರ ಸತ್ಯಾಸತ್ಯತೆಯನ್ನು ಕೂಲಂಕುಷವಾಗಿ ಪರಿಶೀಲಿಸದೆ ಸುದ್ದಿಯನ್ನು ನಂಬುವಂತೆಯೂ ಇರಲಿಲ್ಲ. ಆದರೆ ಆ ಹೊತ್ತಿಗೆ ಫಿಡೆಲ್ ಕಾಸ್ಟ್ರೋರ ದೇಹಾಂತ್ಯದ ಸುದ್ದಿಯು ಬಹುತೇಕ ಅಧಿಕೃತವಾಗಿಬಿಟ್ಟಿತ್ತು. ಕ್ಯೂಬಾದ ಖ್ಯಾತ, ಜನಪ್ರಿಯ ನಾಯಕ ಕೊನೆಗೂ ತನ್ನ ತೊಂಭತ್ತನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದ.

ಅಸಲಿಗೆ ಅಂಗೋಲಾ ದೇಶಕ್ಕೆ ಕಾಸ್ಟ್ರೋರ ಮೇಲಿರುವ ಋಣ ದೊಡ್ಡದು. ಅಂಗೋಲಾದಲ್ಲಿ ಆಂತರಿಕ ಯುದ್ಧ ಉತ್ತುಂಗದಲ್ಲಿದ್ದಾಗ ಕಾಸ್ಟ್ರೋ ತನ್ನ ಸಾವಿರಾರು ಸೈನಿಕರನ್ನು ಅಂಗೋಲಾಗೆ ಕಳಿಸಿದ್ದರು. ಮುಂದೆಯೂ ಕ್ಯೂಬಾ ತನ್ನ ದೇಶದಿಂದ ದೊಡ್ಡ ಸಂಖ್ಯೆಯ ಶಿಕ್ಷಕರನ್ನು ಮತ್ತು ವೈದ್ಯರನ್ನು ಅಂಗೋಲಾಗೆ ಕಳಿಸಿತ್ತು. ಇಂದಿಗೂ ಅಂಗೋಲಾದಲ್ಲಿ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಮಂದಿ ತಜ್ಞ ವೈದ್ಯರು ಮತ್ತು ಅನುಭವಿ ಶಿಕ್ಷಕರು ಕ್ಯೂಬಾ ಮೂಲದಿಂದ ಬಂದವರು ಎಂಬುದನ್ನು ನೀವು ನಂಬಲೇಬೇಕು.

ಈ ಕಾರಣದಿಂದಾಗಿಯೇ ಫಿಡೆಲ್ ಕಾಸ್ಟ್ರೋ ನಿಧನರಾದ ಮರುದಿನವೇ ಅವರಿಗೆ ಭಾವಪೂರ್ಣ ವಿದಾಯವನ್ನು ಕೋರುವ ದೈತ್ಯ ಪೋಸ್ಟರ್ ಒಂದು ಅಂಗೋಲಾದ ರಾಜಧಾನಿ ಲುವಾಂಡಾದಲ್ಲಿ ಎದ್ದು ನಿಂತಿತ್ತು. ಕಾಸ್ಟ್ರೋರ ದೇಹಾಂತ್ಯವಾದರೂ ಅವರು ಅಂಗೋಲಾದಲ್ಲಿ ಮಾಡಿರುವ ವಿಶಿಷ್ಟ ಕೆಲಸಗಳು ಹಲವು ಪೀಳಿಗೆಯ ಮಂದಿಯ ನೆನಪಿನಲ್ಲುಳಿಯಲಿವೆ ಎಂಬುದನ್ನು ಸಾರುವಂತಿತ್ತು ಆ ದೊಡ್ಡ ಗಾತ್ರದ ಫಲಕ. ಇದು ಮಾಧ್ಯಮಗಳಲ್ಲಿ ಅದೆಷ್ಟು ಸುದ್ದಿಯಾಯಿತು ಅನ್ನುವುದಕ್ಕಿಂತಲೂ ಇಂಥದೊಂದು ಅಪರೂಪದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದು ಬಹಳ ಕಾಲ ನೆನಪಿನಲ್ಲುಳಿಯುವಂಥದ್ದು. ದೂರದ ಕ್ಯೂಬಾದಲ್ಲಿ ನಾಯಕನೊಬ್ಬನ ಅಂತ್ಯವಾದಾಗ ಮತ್ತೆಲ್ಲೋ ಇರುವ ದೇಶವೊಂದು ಹೀಗೆ ಸ್ಪಂದಿಸುವುದು ಕೂಡ ಒಂದು ಬಗೆಯ ಅಭಿವ್ಯಕ್ತಿಯೇ. ಫಲಕಗಳನ್ನು ಕಾವ್ಯಾತ್ಮಕವಾಗಿ ಮಹಾನಗರಗಳ ಭಾಷೆಯೆಂದು ಕರೆಯುವುದು ನಾನು ಇದೇ ಕಾರಣಕ್ಕೆ.  

“ಇಂತಿಂಥಾ ದೇಶದ ಅಧ್ಯಕ್ಷರಿಗೆ ಭಾರತಕ್ಕೆ ಹಾರ್ದಿಕ ಸ್ವಾಗತ” – ದಿಲ್ಲಿಯ ಹಸಿರಿನಲ್ಲಿ ನೆಟ್ಟಿರುವ ಪುಟ್ಟ ನಾಮಫಲಕಗಳು ಹೇಳುವ ಅತ್ಯಂತ ಚಿಕ್ಕ ಕತೆಯಿದು.

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು”, “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಸೇರಿಸಲು ಕಾಂಗ್ರೆಸ್ ‘ಸಂಚು’ ರೂಪಿಸಿತ್ತೇ?

More articles

Latest article