ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ (ಇಡಿ) ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ್ದು, ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಪಡಿಸಿದೆ.
ಪ್ರಧಾನಿ ಮೋದಿ ಸರ್ಕಾರ ತಮ್ಮ ಪಕ್ಷದ ಮುಖಂಡರ ವಿರುದ್ಧ ಸೇಡಿನ ರಾಜಕೀಯ ಆರಂಭಿಸಿದೆ. ಈ ಸಂಚನ್ನು ಶೀಘರವೇ ಬಹಿರಂಗಪಡಿಸುವುದಾಗಿ ಕಾಂಗ್ರೆಸ್ ಗುಡುಗಿದೆ. ಮೋದಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ತನ್ನ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ ಎಂದು ಹೇಳಿದೆ.
ಇಂದು ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸಂಸತ್ತಿನ ಒಳಗೂ ಹೊರಗೂ ಬಿಜೆಪಿ ವಿರುದ್ಧ ಹೋರಾಡುತ್ತಲೇ ಇರುತ್ತದೆ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಏಳು ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪ ಪಟ್ಟಿ ಸಲ್ಲಿಸಲು ಮುಂದಾಗಿತ್ತು. ಸಂಸ್ಥೆಯ ತನಿಖೆ ಖಾಸಗಿ ದೂರಿನಿಂದ ಆಗಿದೆಯೇ ಹೊರತು ಎಫ್ಐಆರ್ನಿಂದಲ್ಲ ಎಂದು ಹೇಳಿ ಈ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿತ್ತು.
ದೆಹಲಿ ನ್ಯಾಯಾಲಯದ ಈ ಮಹತ್ವದ ತೀರ್ಪಿನ ನಂತರ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಪಡಿಸಿದ ಖರ್ಗೆ ಅವರು, ನ್ಯಾಯಾಲಯದ ತೀರ್ಪಿನಿಂದ ಮೋದಿ ಶಾ ಜೋಡಿಯ ಮುಖಭಂಗ ಆಗಿದೆ. ಇನ್ನು ಮುಂದಾದರೂ ಪ್ರತಿಪಕ್ಷಗಳ ನಾಯಕರಿಗೆ ಇಂತಹ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದೂ ತಾಕೀತು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮತ್ತೊಬ್ಬ ಮುಖಂಡ, ಕೆಸಿ ವೇಣುಗೋಪಾಲ್ ಮಾತನಾಡಿ ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಕೇಂದ್ರ ಎನ್ ಡಿಎ ಸರ್ಕಾರದ ಸೇಡಿನ ರಾಜಕೀಯವನ್ನು ಕಾಂಗ್ರೆಸ್ ಮತ್ತಷ್ಟು ತೀವ್ರವಾಗಿ ಬಹಿರಂಗಪಡಿಸುತ್ತದೆ ಎಂದು ಕಿಡಿ ಕಾರಿದ್ದಾರೆ.
ಅಭಿಷೇಕ್ ಮನು ಸಿಂಘ್ವಿ ಮಾತನಾಡಿ ಕೇಂದ್ರದ ನಡೆಯಿಂದ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ತನಿಖಾ ಸಂಸ್ಥೆಗಳ ದುರುಪಯೋಗ ಕುರಿತು ಕಾಂಗ್ರೆಸ್ ಹೋರಾಟವನ್ನು ಮುಂದುವರೆಸಲಿದೆ ಎಂದಿದ್ದಾರೆ.

