ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ ಎಂದು ಈ ತಿಂಗಳ 10 ರಂದು ಇಂಡಿಯಾ ಟುಡೇ ವೆಬ್ ಸೈಟ್ ವರದಿ ಮಾಡಿದೆ. ಆದರೆ ಈ ಪ್ರಕರಣದಲ್ಲಿ ಎಸ್ ಐಟಿಯು ಯಾವುದೇ ಪ್ರಾಥಮಿಕ ವರದಿಯನ್ನು ಸಲ್ಲಿಸಿಲ್ಲ ಎಂದು ಬಿಎಲ್ ಆರ್ ಪೋಸ್ಟ್ ಎಸ್ ಐಟಿ ಮೂಲಗಳ ಮಾಹಿತಿಯನ್ನು ಆಧರಸಿ ವರದಿ ಮಾಡಿದೆ. ಇಂಡಿಯಾ ಟುಡೇ ಹೇಳಿರುವಂತೆ ಈ ಪ್ರಕರಣದಲ್ಲಿ ಆರು ಮಂದಿಯನ್ನು ಹೆಸರಿಸಲಾಗಿಲ್ಲ. ಕೇವಲ ಚಿನ್ನಯ್ಯನನ್ನು ಮಾತ್ರ ಆರೋಪಿಯನ್ನಾಗಿ ಹೆಸರಿಸಿದೆ ಎಂದೂ ಸ್ಪಷ್ಟಪಡಿಸಿದೆ.
ಮುಂದುವರೆದು ಇಂಡಿಯಾ ಟುಡೇ ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣದಲ್ಲಿ ಧರ್ಮಸ್ಥಳ ವಿರೋಧಿಗಳು ಈ ಪಿತೂರಿಯನ್ನು ಹೆಣೆದಿದ್ದಾರೆ ಎಂದೂ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ಉಲ್ಲೇಖಿಸಿದೆ ಎಂದೂ ವರದಿ ಮಾಡಿದೆ.
ಇಂಡಿಯಾ ಟುಡೇ ವರದಿಯು ಧರ್ಮಸ್ಥಳ ಮುಖ್ಯಸ್ಥರಿಗೆ ಕ್ಲೀನ್ ಚಿಟ್ ನೀಡಿದೆ ಮತ್ತು ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್, ವಿಠಲ್ ಗೌಡ ಮತ್ತು ಸುಜಾತಾ ಭಟ್ ಇವರು ಧರ್ಮಸ್ಥಳ ವಿರುದ್ಧ ನಡೆದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದೂ ಹೇಳಿದೆ.
ಇಂಡಿಯಾ ಟುಡೇ ವೆಬ್ ಸೈಟ್ ನ ಇನ್ ಪುಟ್ ವಿಭಾಗದ ಉಪ ಸಂಪಾದಕ ಸಗಾಯ್ ರಾಜ್ ವರದಿ ಮಾಡಿದ್ದು, ಅಸಿಸ್ಟೆಂಟ್ ಪ್ರೊಡ್ಯೂಸರ್ ದೀಪ್ತಿ ರಾವ್ ವರದಿ ಸಿದ್ಧಪಡಿಸಿದ್ದಾರೆ. ಈ ವರದಿ ಪ್ರಕಟವಾಗುತ್ತಿದ್ದಂತೆ ಅನೇಕ ಕನ್ನಡ ಚಾನೆಲ್ ಗಳು ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಇಂಡಿಯಾ ಟುಟೇ ವರದಿ ಮಾಡಿರುವ ಸುಳ್ಳು ಸುದ್ದಿಯನ್ನು ಯಥಾವತ್ತಾಗಿ ಪ್ರಸಾರ ಮಾಡಿವೆ.
ಬಿಎನ್ ಎಸ್ ಎಸ್ ಸೆ.215ರ ಅಡಿಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ ಐಟಿಯು ಕೇವಲ ತನಿಖಾ ವರದಿಯನ್ನು ಮಾತ್ರ ಸಲ್ಲಿಸಿದೆ. ನವಂಬರ್ 20 ರಂದು ಸಲ್ಲಿಸಿರುವ ಈ ವರದಿಯಲ್ಲಿ ಆರು ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆಯಾದರೂ ಚಿನ್ನಯ್ಯನನ್ನು ಮಾತ್ರ ಆರೋಪಿ ಎಂದು ಹೇಳಿದೆ.
ಇಂಡಿಯಾ ಟುಡೇ ವರದಿ ಶುದ್ಧ ಸುಳ್ಳು. ವರದಿಯನ್ನು ಪ್ರಕಟಿಸುವುದಕ್ಕೂ ಮುನ್ನ ವರದಿಗಾರ ಅಥವಾ ಸಂಪಾದಕಿ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಉಸಾಬರಿಗೆ ಹೋಗಿಲ್ಲ. ಸಾಕ್ಷಿ ದೂರುದಾರ ಮತ್ತು ನಂತರ ಆರೋಪಿಯಾಗಿರುವ ಚಿನ್ನಯ್ಯನ ಜತೆ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಉಳಿದ ಐವರ ಹೆಸರನ್ನು ನಮೂದಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ ಎಂದೂ ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ದೂರಿನಲ್ಲಿ ದಾಖಲಾಗಿರುವ ಹೋರಾಟಗಾರರನ್ನು ಬಂಧಿಸಲು ಎಸ್ ಐಟಿ ಅನುಮತಿ ಕೇಳಿಲ್ಲ. ಬದಲಾಗಿ ತನಿಖಾ ವರದಿ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವ ವಿವೇಚನೆಯನ್ನು ನ್ಯಾಯಾಲಯಕ್ಕೆ ಬಿಡಲಾಗಿದೆ. ಜುಲೈ 3 ರಂದು ಚಿನ್ನಯ್ಯ ದಾಖಲಿಸಿದ ದೂರನ್ನು ಕುರಿತು ಮಾತ್ರ ತನಿಖೆ ಪೂರ್ಣಗೊಂಡಿದೆ. ಅಂದರೆ ಈ ವರದಿಯಲ್ಲಿ ಚಿನ್ನಯ್ಯನ ದೂರನ್ನು ಕುರಿತು ತನಿಖಾ ವರದಿಯನ್ನು ಸಲ್ಲಿಸಲಾಗಿದೆಯೇ ಹೊರತು ಧರ್ಮಸ್ಥಳ ಮುಖ್ಯಸ್ಥರಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದೂ ಮೂಲಗಳು ತಿಳಿಸಿವೆ.
ತನಿಖಾ ವದಿಯನ್ನು ಸಲ್ಲಿಸಿದ ನಂತರ ಎಸ್ ಐಟಿಯು ಅಸ್ವಾಭಾವಿಕ ಸಾವುಗಳ ವರದಿಗಳು, ನಾಪತ್ತೆಯಾದವರನ್ನು ಕುರಿತಾದ ದೂರುಗಳು, 38 ಕಾನೂನು ಬಾಹಿರ ಶವಗಳನ್ನು ಹೂತಿರುವುದು ಮತ್ತು ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಕಂಡು ಬಂದ ಎಂಟು ತಲೆಬುರುಡೆಗಳನ್ನು ಕುರಿತು ತಎಸ್ ಐಟಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಜತೆಗೆ ಡಿಎನ್ ಎ ವರದಿಗಳನ್ನು ಕಾಯುತ್ತಿದೆ.
2025ರ ಜುಲೈ 3 ರಂದು ಧರ್ಮಸ್ಥಳದ ಮಾಜಿ ಸ್ವಚ್ಚತಾ ಕಾರ್ಮಿಕ ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾನೆ. ತಾನು ಕೆಲಸ ಮಾಡುತ್ತಿದ್ದ 1995 ರಿಂದ 2014ರವರೆಗೆ ಲೈಂಗಿಕ ಕೃತ್ಯಗಳನ್ನು ಎಸಗಿ ನಂತರ ತನ್ನಿಂದ ನೂರಾರು ಶವಗಳನ್ನು ಹೂತು ಹಾಕಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಕನಿಷ್ಠ 13 ಸ್ಥಳಗಳನ್ನು ಗುರುತಿಸುವುದಾಗಿ ಹೇಳಿರುತ್ತಾನೆ.
2025ರ ಜುಲೈ 11 ರಂದು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಎದುರು ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ಸ್ವಯಂ ಹೇಳಿಕೆಯನ್ನು ದಾಖಲಿಸಿರುತ್ತಾನೆ. ಈ ಸಂದರ್ಭದಲ್ಲಿ ಆತ ತಲೆಬುರುಡೆ ಮತ್ತು ಕೆಲವು ಮೂಳೆಗಳನ್ನು ಹಾಜರುಪಡಿಸಿರುತ್ತಾನೆ. ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ಜುಲೈ 19 ರಂದು ರಚಿಸಿ ಆದೇಶಿಸಿತ್ತು. ಧರ್ಮಸ್ಥಳ ಪೊಲೀಸರು (39/2025) ಅಡಿಯಲ್ಲಿ ಎಫ್ ಐಆರ್ ದಾಖಲಿಸುತ್ತಾರೆ.
ಈತ ಹಾಜರುಪಡಿಸಿದ ತಲೆ ಬುರುಡೆ ಮನುಷ್ಯರದ್ದು ಅಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯಲ್ಲಿ ಸಾಬೀತಾಗುತ್ತದೆ. ಚಿನ್ನಯ್ಯನನ್ನು ಅಗಸ್ಟ್ 23 ರಂದು ಬಂಧಿಸಲಾಗುತ್ತದೆ. ಬಂಧನದ ನಂತರ ಚಿನ್ನಯ್ಯ ಮತ್ತೊಂದು ಹೇಳಿಕೆ ದಾಖಲಿಸಲು ನಿರ್ಧರಿಸುತ್ತಾನೆ. ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ ಮತ್ತು ವಿಠಲ್ ಗೌಡ ಅವರ ಚಿತಾವಣೆಗೆ ಒಳಗಾಗಿ ತಲೆಬುರುಡೆಯನ್ನು ಹಾಜರುಪಡಿಸಿದ್ದಾಗಿ ಹೇಳಿಕೆ ನೀಡುತ್ತಾನೆ.

