ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ಯುದ್ದವನ್ನು ಕೊನೆಗೊಳಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಸುಂಕ ಎನ್ನುವುದು ನನ್ನ ಇಷ್ಟದ ಪದ. ಅದು ರೈತರನ್ನು ಶ್ರೀಮಂತರನ್ನಾಸುತ್ತದೆ. ಸುಂಕದಿಂದ ದೇಶದ ಆದಾಯ ಹೆಚ್ಚುತ್ತಿದೆ ಎಂದೂ ಟ್ರಂಪ್ ಹೇಳಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ನಡೆದ ಆರ್ಥಿಕತೆಯ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ 10 ತಿಂಗಳಲ್ಲಿ ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ, ಇಸ್ರೇಲ್ ಮತ್ತು ಇರಾನ್, ಕೊಸೊವೊ ಮತ್ತು ಸರ್ಬಿಯಾ, ಈಜಿಪ್ಟ್ ಮತ್ತು ಇಥಿಯೋಪಿಯಾ, ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ಯುದ್ದಗಳಿಗೆ ಅಂತ್ಯ ಹಾಡಿದ್ದೇನೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಪರಮಾಣು ಸಾಮರ್ಥ್ಯ ಹೊಂದಿವೆ. ಆದರೂ ಉಭಯ ದೇಶಗಳ ನಡುವಿನ ಯುದ್ದವನ್ನು ಕೊನೆಗೊಳಿಸಿದ್ದು ನಾನೇ ಎಂದು ಟ್ರಂಪ್ 70 ಬಾರಿ ಹೇಳಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಈ ಹೇಳಿಕೆಯನ್ನು ಒಪ್ಪುತ್ತಲೂ ಇಲ್ಲ, ನಿರಾಕರಿಸುತ್ತಲೂ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ವರ್ಷದ ಏಪ್ರಿಲ್ 22ರಂದು ಸಾವಿಗೆ ಕಾರಣವಾದ ಪಹಲ್ಗಾಮ್ ಪ್ರವಾಸಿ ತಾಣದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ 26 ಮಂದಿ ಅಸು ನೀಗಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿರಿಸಿಕೊಂಡು ‘ಅಪರೇಷನ್ ಸಿಂಧೂರ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು. ಇದರಿಂದ ಪಾಕಿಸ್ತಾನ ಬೆಚ್ಚಿತ್ತು. ಆಪರೇಷನ್ ಸಿಂಧೂರ ದಾಳಿಯಿಂದ ಭಾರತ ಪಾಕ್ ನಡುವೆ ಸಂಘರ್ಷ ಉಲ್ಬಣಗೊಂಡಿತ್ತು. ಅಂತಿಮವಾಗಿ ಮೇ 10 ಸಂಘರ್ಷವನ್ನು ಕೊನೆಗಾಣಿಸಲು ಎರಡೂ ದೇಶಗಳು ಒಮ್ಮತಕ್ಕೆ ಬಂದಿದ್ದವು.

