ನವದೆಹಲಿ: ಸತತ ನಾಲ್ಕು ದಿನಗಳಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಅತೀವ ತೊಂದರೆ ಉಂಟಾಗಿದ್ದಕ್ಕೆ ಇಂಡಿಗೋ ಸಂಸ್ಥೆ ತನ್ನ ಎಲ್ಲ ಪ್ರಯಾಣಿಕರಿಗೆ ಕ್ಷಮೆಯಾಚಿಸಿದೆ. ಡಿಸೆಂಬರ್ 5 ರಿಂದ 15ರ ನಡುವಿನ ಬುಕಿಂಗ್ ಗಳ ರದ್ದತಿ ಮತ್ತು ಮರುಹೊಂದಿಸುವ ವಿನಂತಿಗಳಿಗೆ ಸಂಪೂರ್ಣ ವಿನಾಯಿತಿ ನೀಡುವುದಾಗಿಯೂ ಇಂಡಿಗೋ ಭರವಸೆ ನೀಡಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಇಂಡಿಗೋ ಈ ಸೂಚನೆ ನೀಡಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಪೈಲಟ್ಗಳ ರಜಾ ನಿಯಮಗಳನ್ನು ಸಡಿಲಿಸಿದ್ದು, ವಾರದ ವಿಶ್ರಾಂತಿ ಅವಧಿಯನ್ನು ಅನುಮತಿಸಿದೆ ಎಂದು ಮೂಲಗಳು ತಿಳಿಸಿದ್ದು, ವಿಮಾನಗಳ ಹಾರಾಟವು ಇಂದು ಮಧ್ಯ ರಾತ್ರಿಯಿಂದ ಸಹಜ ಸ್ಥಿತಿಗೆ ಮರಳಬಹುದು ಎಂದು ನಿರೀಕ್ಷಿಸಲಾಗಿದೆ. ಶನಿವಾರದಿಂದ ಸಹಜಸ್ಥಿತಿಗೆ ತರಲು ಮತ್ತು ವೇಳಾಪಟ್ಟಿಗಳನ್ನು ಮರುಪ್ರಾರಂಭಿಸಲು ಸರ್ವಪ್ರಯತ್ನ ಮಾಡುತ್ತಿದ್ದೇವೆ. ನಾಳೆಯಿಂದ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಸಿದ್ದತೆಗಳನ್ನು ಮಾಡಲಾಗುತ್ತಿದೆ ಎಂದು ಇಂಡಿಗೋ ತಿಳಿಸಿದೆ.
ನಮ್ಮ ಪ್ರತಿಯೊಬ್ಬ ಗ್ರಾಹಕರಲ್ಲಿ ನಾವು ನಿಜವಾಗಿಯೂ ಕ್ಷಮೆ ಕೇಳುತ್ತಿದ್ದೇವೆ ಮತ್ತು ಕಾಳಜಿ ವಹಿಸುತ್ತೇವೆ. ಹಲವು ದಿನಗಳಿಂದ ನಿಮ್ಮಲ್ಲಿ ಅನೇಕ ಪ್ರಯಾಣಿಕರಿಗೆ ಕಷ್ಟವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಇದು ರಾತ್ರೋರಾತ್ರಿ ಬಗೆಹರಿಯುವ ಸಮಸ್ಯೆ ಅಲ್ಲವಾದರೂ, ನಿಮಗೆ ಸಹಾಯ ಮಾಡಲು ಮತ್ತು ನಮ್ಮ ಕಾರ್ಯಾಚರಣೆಗಳನ್ನು ಆದಷ್ಟು ಬೇಗ ಸಹಜಸ್ಥಿತಿಗೆ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಇಂಡಿಗೋ ಹೇಳಿದೆ.
ಪ್ರಯಾಣವನ್ನು ರದ್ದುಪಡಿಸಿದ ಎಲ್ಲರಿಗೂ ಹಣವನ್ನು ಮರಳಿಸಲಾಗುತ್ತದೆ. ತನ್ನ ಗ್ರಾಹಕರಿಗೆ ದೇಶಾದ್ಯಂತ ಸಾವಿರಾರು ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಕಾಯುತ್ತಿರುವ ಗ್ರಾಹಕರಿಗೆ ಆಹಾರ ಮತ್ತು ತಿಂಡಿಗಳನ್ನು ಒದಗಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಲೌಂಜ್ ಪ್ರವೇಶವನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಂಡಿಗೋ ತಿಳಿಸಿದೆ.
ವೆಬ್‌ಸೈಟ್‌ನಲ್ಲಿ ತಿಳಿಸಿರುವ ಅಧಿಸೂಚನೆಗಳನ್ನು ಪರಿಶೀಲಿಸಿ. ನಿಮ್ಮ ವಿಮಾನ ರದ್ದಾಗಿದ್ದರೆ ದಯವಿಟ್ಟು ವಿಮಾನ ನಿಲ್ದಾಣಕ್ಕೆ ಬರಬೇಡಿ ಎಂದೂ ತಿಳಿಸಿದೆ.

