ನವದೆಹಲಿ: ದೇಶಕ್ಕೆ ಭೇಟಿ ನೀಡುವ ಗಣ್ಯರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡದಂತೆ ಸೂಚನೆ ನೀಡುತ್ತಿರುವುದು ಏಕೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿದ್ದು, ವಿಪಕ್ಷಗಳ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಹಾಗಾಗಿ ರಾಹುಲ್ ಗಾಂಧಿ ಈ ಪ್ರಶ್ನೆ ಎತ್ತಿದ್ದಾರೆ.
ದೇಶಕ್ಕೆ ಭೇಟಿ ನೀಡುವ ಗಣ್ಯರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುವುದು ಸಂಪ್ರದಾಯವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವಾಲಯವು ಈ ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿರಬಹುದು ಎಂದು ಅವರು ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಅವರ ಅಧಿಕಾರದ ಅವಧಿಯಲ್ಲಿ ಈ ಸಂಪ್ರದಾಯವು ಬಹಳ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಗಣ್ಯರು ದೇಶಕ್ಕೆ ಬಂದಾಗ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗದಂತೆ ಸರ್ಕಾರವೇ ಸೂಚನೆ ನೀಡುತ್ತಿದೆ ಎಂದು ಅವರು ಆಪಾದಿಸಿದ್ದಾರೆ. ವಿರೋಧ ಪಕ್ಷದ ನಾಯಕರೂ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

