ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದಕ್ಕಿ ಅಸಮಾನತೆ ನಿವಾರಣೆಯಾದರೆ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Most read

ಮಂಗಳೂರು: ಗುಲಾಮಗಿರಿಯನ್ನು ಕಿತ್ತೆಸೆಯಬೇಕು, ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದಕ್ಕಬೇಕು ಮತ್ತು ಅಸಮಾನತೆ ನಿವಾರಣೆಯಾಗಬೇಕು. ಆಗ ಮಾತ್ರ ಸ್ವಾತಂತ್ರ್ಯ ಲಭಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಅಯಪಟ್ಟಿದ್ದಾರೆ.

ಅವರು, ಕೇರಳದ ವರ್ಕಲ ಶಿವಗಿರಿ ಮಠ, ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿಹಮ್ಮಿಕೊಳ್ಳಲಾಗಿದ್ದ  ‘ಶತಮಾನದ ಮಹಾ ಪ್ರಸ್ಥಾನ ಬ್ರಹ್ಮಶ್ರೀ ನಾರಾಯಣ ಗುರು- ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ, ಗುರುವಿನ ಮಹಾ ಸಮಾಧಿ ಶತಾಬ್ಬಿ, ಸರ್ವ ಮತ ಸಮ್ಮೇಳನದ ಶತಮಾನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 79 ವರ್ಷ, ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ಇನ್ನೂ ಗುಲಾಮಗಿರಿ ವ್ಯವಸ್ಥೆ ಉಳಿದುಕೊಂಡಿದೆ. ಮೇಲ್ಜಾತಿಯ ವ್ಯಕ್ತಿ ಎದುರು ಬಂದಾಗ  ಸ್ವಾಮಿ ಎನ್ನಬೇಕಾಗುತ್ತದೆ. ಆದರೆ. ದಲಿತ ಸಮುದಾಯದ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಅವರನ್ನು ಮಾತ್ರ ಏಕ ವಚನದಲ್ಲಿ ಮಾತನಾಡಿಸುವ ಪರಿಪಾಠ ಈಗಲೂ ಜಾರಿಯಲ್ಲಿದೆ. ಇದು ಗುಲಾಮಗಿರಿಯ ಸಂಕೇತ ಅಲ್ಲದೆ ಬೇರೇನೂ ಅಲ್ಲ ಈ ಗುಲಾಮಗಿರಿಯನ್ನು ನಿವಾರಿಸದಿದ್ದರೆ  ಸ್ವಾಭಿಮಾನ ಮೂಡಲು ಸಾಧ್ಯವಿಲ್ಲ. ಇದನ್ನೇ ನಾರಾಯಣಗುರುಗಳು ಪದೇ ಪದೇ  ಹೇಳಿದ್ದಾರೆ ಎಂದರು.

ಸಮಾಜದಲ್ಲಿ ವ್ಯಕ್ತಿತ್ವವನ್ನೂ ಜಾತಿ ನೋಡಿ ಅಳೆಯಲಾಗುತ್ತಿದೆ. ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ,ಕೀಳೂ ಆಗುವುದಿಲ್ಲ. ಜಾತಿ ಹೆಸರಿನಲ್ಲಿ ನಡೆಯುವ ತಾರತಮ್ಯಗಳು ದೂರವಾಗಬೇಕು. ಜಡತ್ವದ ಜಾತಿ ವ್ಯವಸ್ಥೆ ಬದಲಾಗಬೇಕು. ಇದು ಸಾಕಾರವಾಗಬೇಕಾದರೆ ಸಮ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು. ಆಪರೇಷನ್‌ ಗೆ ಇಂತಹುದ್ದೇ ಜಾತಿ ವ್ಯಕ್ತಿಯ ರಕ್ತ ಬೇಕು ಎಂದು ಯಾರೂ ಕೇಳುವುದಿಲ್ಲ. ದಲಿತ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಯಾರದ್ದೇ ರಕ್ತವಾದರೂ ನಡೆಯುತ್ತದೆ. ಆಪರೇಷನ್‌ ಯಶಸ್ವಿ ಆದ ನಂತರ  ನೀವು ಯಾವ ಜಾತಿ, ಯಾವ ಧರ್ಮಕ್ಕೆ ಸೇರಿದವರು ಎಂದು ಕೇಳುತ್ತೇವೆ. ಇಂತಹ ಮನೋಭಾವವನ್ನು ಬಿಡಬೇಕು. ಜಾತಿ ಹೆಸರಿನಲ್ಲಿ ಜನರನ್ನು ಒಡೆಯಬಾರದು. ಎಲ್ಲರೂ ಮನುಷ್ಯರಾಗಿ ಬಾಳಬೇಕು ಎಂದರು.

1925ರಲ್ಲಿ ನಡೆದ ಮಹಾತ್ಮಗಾಂಧಿ ಮತ್ತು ನಾರಾಯಣಗುರುಗಳ ನಡುವಿನ ಸಂವಾದ ಹಾಗೂ 1931ರಲ್ಲಿ ಗಾಂಧಿ ಮತ್ತು ಬಿ.ಆ‌ರ್.ಅಂಬೇಡ್ಕರ್ ನಡುವೆ ನಡೆದ ಸಂವಾದಗಳಿಗೆ ಐತಿಹಾಸಿಕ ಮಹತ್ವವಿದೆ. ಅವರು ಪ್ರತಿಪಾದಿಸಿದ ಮೌಲ್ಯಗಳ ಹಿಂದಿನ ಆಶಯಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ದಲ್ಲಿ ಅಳವಡಿಸಿಕೊಂಡ ಸಹಬಾಳ್ವೆ, ಧರ್ಮ ಸಹಿಷ್ಣುತೆ ಭಾವನೆ ಬೆಳೆಸಿಕೊಂಡರೆ, ಸಾಮಾಜಿಕ ಅಸಮಾನತೆ ತಾನಾಗಿಯೇ ನಿವಾರಣೆ ಆಗಲಿದೆ. ನಾರಾಯಣ ಗುರುಗಳ ಸಂದೇಶ ಎಲ್ಲರಿಗೂ ತಲುಪಲಿ ಎಂಬ ಉದ್ದೇಶದಿಂದ 2016ರಲ್ಲಿ ನಮ್ಮ ಸರ್ಕಾರ ಅವರ ಜಯಂತಿ ಆಚರಿಸಲು ಘೋಷಣೆ ಮಾಡಿತ್ತು ಎಂದು ತಿಳಿಸಿದರು.

ಕೇರಳದ ವರ್ಕಲ ಶಿವಗಿರಿ ಮಠದವರು ರಾಜ್ಯದಲ್ಲಿ ಶಾಖಾ ಮಠವನ್ನು ಆರಂಭಿಸಲು 5 ಎಕರೆ ಜಮೀನು ಕೇಳಿದ್ದಾರೆ. ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಜಾಗ ಗುರುತಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಮಾತನಾಡಿ ನಮ್ಮ ಸಮಾಜದಲ್ಲಿ ಈಗಲೂ ಅಸಮಾನತೆ ತಾಂಡವವಾಡುತ್ತಿದೆ. ಸಂವಿಧಾನದ ಮೌಲ್ಯಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ವಿಷಾದಿಸಿದರು.

ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ಶಿವಗಿರಿ ಮಠದ ಕಾರ್ಯದರ್ಶಿ ಶುಭಾಂಗಾನಂದ ಸ್ವಾಮೀಜಿ, ವಿಧಾನಸಭಾಧ್ಯಕ್ಷ ಯು ಟಿ ಖಾದರ್‌, ಸಚಿವರಾದ ಡಾ. ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳಕರ್, ಜಮೀರ್ ಅಹಮದ್ ಖಾನ್, ಮುಖಂಡ ಬಿ.ಜನಾರ್ಧನ ಪೂಜಾರಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್. ಸಂಸದ ರಾಜಮೋಹನ್ ಉನ್ನಿತಾನ್, ಕಾರ್ಯಕ್ರಮ ಆಯೋಜನೆ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

More articles

Latest article