ನವದೆಹಲಿ: ಪ್ರಸಕ್ತ ನಡೆಯುತ್ತಿರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದ ಸಂಸತ್ ಸದಸ್ಯರು ಇಂದು ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಟಿಎಂಸಿ ಸೇರಿದಂತೆ ಹಲವು ಪಕ್ಷಗಳ ಸದಸ್ಯರು ಭಾಗಿಯಾಗಿದ್ದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ನೂತನ ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರಿಗೆ ಅನ್ಯಾಯವಾಗಲಿದ್ದು, ಅವರ ಹಕ್ಕುಗಳನ್ನು ಮೊಟುಕುಗೊಳಿಲಾಗುತ್ತಿದೆ ಎಂದು ಆಪಾದಿಸಿದೆ. ಸೋಮವಾರದಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಲೇ ಇದೆ.
ವಿಶೇಷವಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು. ಕಲಾಪ ನಡೆಯಲೂ ಅಡ್ಡಿಉಂಟಾಗಿತ್ತು. ಅಂತಿಮವಾಗಿ ಲೋಕಸಭೆಯಲ್ಲಿ ಇದೇ 9 ರಿಂದ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.
ಇದೇ ವಿಷಯ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾಗಿದೆ. ಹೊಸ ಕಾರ್ಮಿಕ ಸಂಹಿತೆಗಳಿಂದ ಉದ್ಯೋಗದ ಖಾತರಿ ಇರುವುದಿಲ್ಲ. ಕಾರ್ಮಿಕರನ್ನು ವಜಾಗೊಳಿಸುವ ಮಿತಿಯನ್ನು 100 ರಿಂದ 300 ಕ್ಕೆ ಹೆಚ್ಚಿಸಲಾಗಿದೆ. ದೀರ್ಘಾವಧಿಗೆ ಬದಲಾಗಿ ಅಲ್ಪಾವದಿಗೂ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.
ಕೆಲಸದ ಅವಧಿಯನ್ನು ದಿನವೊಂದಕ್ಕೆ 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗಿದೆ. ಕಾರ್ಮಿಕ ಸಂಘಟನೆಗಳನ್ನು ದರ್ಬಲಗೊಳಿಸಲಾಗುತ್ತಿದೆ. ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ದುರ್ಬಲಗೊಳಿಸಲಾಗುತ್ತಿದೆ. ವಲಸೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಅತೀವ ತೊಂದರೆ ಉಂಟಾಗಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ.

