ಬೆಂಗಳೂರು: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಮತ್ತು ಪ್ರಭಾವಿ ಕುಟುಂಬದ ಹಸರು ಕೇಳಿ ಬಂದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರೋಪಿ ಸಂತೋಷ್ ರಾವ್ ಮತ್ತು ಸೌಜನ್ಯಳ ತಾಯಿ ಕುಸುಮಾವತಿ ಗೌಡ ಅವರು ಮರು ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿದ್ದಾರೆ ಎಂದು ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
2012 ರ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿತ್ತು. ದುರಂತ ಎಂದರೆ ಇದುವರೆಗೂ ಈ ಪ್ರಕರಣದ ರಹಸ್ಯವನ್ನು ಭೇದಿಸಲಾಗಿಲ್ಲ.
ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಂತೋಷ್ ರಾವ್ ಸೆಪ್ಟೆಂಬರ್ 2 ರಂದು ಅರ್ಜಿ ಸಲ್ಲಿಸಿದರೆ, ಕುಸುಮಾವತಿ ಅವರು ನವೆಂಬರ್ 19 ರಂದು ಎಸ್ ಎಲ್ ಪಿ ಸಲ್ಲಿಸಿದ್ದಾರೆ. ಆದರೆ ಈ ಎರಡೂ ಅರ್ಜಿಗಳು ದೋಷಪೂರಿತ ಪಟ್ಟಿಯಲ್ಲಿದ್ದು, ಅರ್ಜಿದಾರರ ಪರ ವಕೀಲರು 90 ದಿನಗಳಲ್ಲಿ ದೋಷಗಳನ್ನು ಸರಿಪಡಿಸಬೇಕು. ಹಾಗೆ ಮಾಡಲು ವಿಫಲವಾದರೆ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಸೌ
2012ರ ಅಕ್ಟೋಬರ್ 9 ರಂದು 17 ವರ್ಷದ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಮರುದಿನ ಆಕೆಯ ಶವ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸರು ಅಕ್ಟೋಬರ್ 11 ರಂದು ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಜನ್ಯಾ
ಸೌಜನ್ಯ ಪ್ರಕರಣ ಕುರಿತು ನ್ಯಾಯಸಮ್ಮತ ತನಿಖೆ ನಡೆಸುವಂತೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಒತ್ತಡಕ್ಕೆ ಮಣಿದ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ ಸಿಐಡಿ 2013 ರಲ್ಲಿ ರಾವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಈ ತನಿಖೆಯನ್ನು ಒಪ್ಪದ ರಾಜ್ಯದ ಜನತೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದಾಗ ಸರ್ಕಾರ ಸಿಬಿಐಗೆ ವಹಿಸಿತ್ತು. ಸಿಬಿಐ ಕೂಡಾ ಸಂತೋಷ್ ರಾವ್ ಆರೋಪಿ ಎಂದು ಆರೋಪಪಟ್ಟಿ ಸಲ್ಲಿಸಿತ್ತು. ಆದರೆ ಜುಲೈ 2023 ರಲ್ಲಿ ಸಿಬಿಐ ನ್ಯಾಯಾಲಯವು ಆರೋಪಿ ರಾವ್ ಅವರ್ನು ಖುಲಾಸೆಗೊಳಿಸಿತು.ಹೈಕೋರ್ಟ್ ನಲ್ಲಿ ಸೌಜನ್ಯ ಕುಟುಂಬ ಮತ್ತು ರಾವ್ ಅವರು ಮತ್ತೆ ಹೊಸದಾಗಿ ತನಿಖೆ ನಡೆಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ 2024 ರಲ್ಲಿ ಕರ್ನಾಟಕ ಹೈಕೋರ್ಟ್ ಮರು ತನಿಖೆಯಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಈ ಅರ್ಜಿಗಳನ್ನು ತಿರಸ್ಕರಿಸಿತ್ತು.
ಇದೀಗ ಮತ್ತೊಮ್ಮೆ ಸಂತೋಷ್ ರಾವ್ ಮತ್ತು ಕುಸುಮಾವತಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಸಂತೋಷ್ ರಾವ್ ಹೊಸ ತನಿಖೆಗೆ ಕೋರಿರುವುದರ ಜತೆಗೆ ಪರಿಹಾರಕ್ಕೂ ಆಗ್ರಹಪಡಿಸಿದ್ದಾರೆ. ರಾವ್ ಪರ ವಕೀಲ ಗುರುರಾಜ್ ಬಿಎ ಆರ್ ಪೋಸ್ಟ್ ಜತೆ ಮಾತನಾಡಿದ್ದು, ರಾವ್ ಅರ್ಜಿಯು ದೋಷಪೂರಿತ ಪಟ್ಟಿಯಲ್ಲಿದ್ದು, ದೋಷಗಳನ್ನು ಸರಿಪಡಿಸಲು ಆರು ವಾರಗಳ ಸಮಯಾವಕಾಶ ಇದೆ.ಕುಸುಮಾವತಿ ಅವರ ವಕೀಲರ ಜತೆ ಚರ್ಚಿಸಿ ಸರಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾವ್ ಅವರ ಅರ್ಜಿಯಲ್ಲಿರುವ ದೋಷಗಳೇನು?
ಮರು ತನಿಖೆಯ ಅರ್ಜಿಯನ್ನು ಅರ್ಜಿಯನ್ನು 276 ದಿನಗಳ ವಿಳಂಬದ ನಂತರ ಸಲ್ಲಿಸಲಾಗಿದ್ದು, ಇದಕ್ಕಾಗಿ ಕ್ಷಮೆಯನ್ನೂ ಕೋರಲಾಗಿದೆ. ಆದರೂ ಕೆಲವು ಪ್ರಕ್ರಿಯೆಗಳು ಬಾಕಿ ಉಳಿದಿವೆ. ಅರ್ಜಿಯುದ್ದಕ್ಕೂ ವಿಷಯದ ಸ್ವರೂಪವನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಅನುಬಂಧದ ವಿವರಣೆ ಸಮರ್ಪಕವಾಗಿಲ್ಲ. ಪುಟಗಳನ್ನು ಜೋಡಿಸಿರುವ ಕ್ರಮವೂ ತಪ್ಪಾಗಿದೆ ಮತ್ತು ಹಲವಾರು ಅನುಬಂಧಗಳು ಕಾಣೆಯಾಗಿವೆ.
ಅರ್ಜಿದಾರರ ವಯಸ್ಸು ಮತ್ತು ಶೀರ್ಷಿಕೆಗೂ ಅದರಡಿಯ ವಿಷಯಕ್ಕೂ ಹೊಂದಿಕೆಯಾಗುತ್ತಿಲ್ಲ. ಪ್ರಕರಣವು ಸೆಕ್ಷನ್ 376 ಅನ್ನು ಒಳಗೊಂಡಿದ್ದು, ಪ್ರಾಸಿಕ್ಯೂಟ್ರಿಕ್ಸ್ ನ ವಿವರಗಳನ್ನು ಎಲ್ಲಾ ದಾಖಲೆಗಳಲ್ಲಿ ಸಂಪೂರ್ಣವಾಗಿ ತಿದ್ದುಪಡಿ ಮಾಡಬೇಕು. ಸೂಕ್ಷ್ಮ ಅನುಬಂಧಗಳು ಹಾಗೂ ಅಫಿಡವಿಟ್ ಅನ್ನು ವಕಾಲತ್ ನಾಮದೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕಾಗಿದೆ ಎಂದು ರಿಜಿಸ್ಟ್ರಾರ್ ಸೂಚಿಸಿದ್ದಾರೆ.
ಕುಸುಮಾವತಿ ಅವರ ಅರ್ಜಿಯಲ್ಲಿರುವ ದೋಷಗಳೇನು?
ದಾಖಲೆಗಳು ಸಾಮಾನ್ಯವಾಗಿ ಸ್ಪಷ್ಟವಾಗಿದ್ದರೂ ಅಗತ್ಯ ಅಂಶಗಳು ಕಾಣೆಯಾಗಿವೆ ಎಂದು ಹಲವಾರು ನಮೂದುಗಳು ಸೂಚಿಸುತ್ತವೆ. ಸಿ ಆರ್ ನಂಬರ್- 250/12 ರ ಪ್ರತಿಯನ್ನು ಸಲ್ಲಿಸಬೇಕಾಗಿದೆ, ಮತ್ತು ಸಂತ್ರಸ್ತೆಯ ವಿವರಗಳು ಅರ್ಜಿಯಲ್ಲಿ ನಮೂದಾಗದಂತೆ ಗಮನ ಹರಿಸಲು ನೋಡಿಕೊಳ್ಳಲು ವಕೀಲರಿಗೆ ಸೂಚಿಸಲಾಗಿದೆ. ಅನೇಕ ಅನುಬಂಧಗಳು ಸ್ಥಳೀಯ ಭಾಷೆಯಲ್ಲಿದ್ದು, ಅವುಗಳ ವಿವರಣೆಗಳನ್ನು ಒದಗಿಸಬೇಕಿದೆ. ಕೆಲವು ಅರ್ಜಿಗಳಿಗೆ ಸಹಿ ಮಾಡಬೇಕಿದೆ. ಅರ್ಜಿ ಸಲ್ಲಿಸುವುದು ವಿಳಂಬವಾಗಿದ್ದು, ನ್ಯಾಯಾಲಯದ ಶುಲ್ಕವನ್ನು ಪಾವತಿಸಬೇಕಿದೆ. ಎಸ್ ಎಲ್ ಪಿ ಸಲ್ಲಿಸಲು ಅನುಮತಿ ಪಡೆಯಬೇಕಿದೆ.
ಜತೆಗೆ ಇನ್ನೂ ಕೆಲವು ತಾಂತ್ರಿಕ ದೋಷಗಳಿದ್ದು, ಅವುಗಳನ್ನು ಸರಿಪಡಿಸಿ ನ್ಯಾಯಾಲಯಕ್ಕೆ ಎಸ್ ಎಲ್ ಪಿ ಸಲ್ಲಿಸಬೇಕಿದ್ದು ವಕೀಲರು ಈ ಅಗತ್ಯಗಳನ್ನು ಪೂರೈಸುವುದಾಗಿ ತಿಳಿಸಿದ್ದಾರೆ.

