ಧರ್ಮಸ್ಥಳ ಪ್ರಕರಣ: ಅನುಮಾನಾಸ್ಪದ ಸಾವುಗಳು, ಬಂಗ್ಲೆಗುಡ್ಡ ರಹಸ್ಯ, ನಾಪತ್ತೆ ಪ್ರಕರಣಗಳ ತನಿಖೆ ಚುರುಕುಗೊಳಿಸಿದ ಎಸ್‌ ಐಟಿ; ವರದಿ ಸಲ್ಲಿಕೆಯ ನಂತರದ ಬೆಳವಣಿಗೆ

Most read

ಬೆಳ್ತಂಗಡಿಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿಬೆಳ್ತಂಗಡಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದು, ಅಸ್ವಾಭಾವಿಕ ಸಾವುಗಳು, ನಾಪತ್ತೆ ಪ್ರಕರಣಗಳು ಹಾಗೂ  ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿರುವ ಏಳು ಮಾನವ ಅವಶೇಷಗಳನ್ನು ಕುರಿತು ತನಿಖೆಯನ್ನು ಮುಂದುವರೆಸಲಿದೆ.

ಎಸ್‌ ಐಟಿಯು ನ್ಯಾಯಾಲಯಕ್ಕೆ ನವಂಬರ್‌ 20ರಂದು ಬಿಎನ್ಎಸ್ಎಸ್‌- 215 ಅಡಿಯಲ್ಲಿ ಸುಳ್ಳು ಸಾಕ್ಷ್ಯ ಕುರಿತ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸಿದೆ. ಈ ಮೂಲಕ ಸಾಕ್ಷಿ ದೂರುದಾರ ಚಿನ್ನಯ್ಯ ಬಿಎನ್‌ ಎಸ್‌ ಎಸ್‌ ಸೆ. 183 ಅಡಿಯಲ್ಲಿ ನೀಡಿರುವ ಎರಡು ರೀತಿಯ ಹೇಳಿಕೆಗಳು, ಸೌಜನ್ಯ ಪರ ಹೋರಾಟಗಾರರ ಪಾತ್ರ ಮತ್ತು ಸುಜಾತಾ ಭಟ್‌ ನೀಡಿದ್ದ ದೂರು ಕುರಿತ ತನಿಖೆಯನ್ನು ಪೂರ್ಣಗೊಳಿಸಿದಂತಾಗಿದೆ.

ಧರ್ಮಸ್ಥಳದಲ್ಲಿ ಸೆ.39/202 ಅಡಿಯಲ್ಲಿ ದಾಖಲಾದ ಪ್ರಕರಣ ಕುರಿತು ಎಸ್‌ ಐಟಿ ತನಿಖೆ ಆರಂಭಿಸಿತ್ತು. ತನಿಖೆ ಸಂದರ್ಭದಲ್ಲಿ ಕಂಡು ಬಂದ ಇತರ ಬೆಳವಣಿಗೆಗಳನ್ನು ಕುರಿತು ತನಿಖೆ ನಡೆಸಲು  ಎಸ್‌ ಐಟಿ ಉದ್ದೇಶಿಸಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.  ಅಸ್ವಾಭಾವಿಕ ಸಾವುಗಳನ್ನು (ಯುಡಿಆರ್)‌ ಕುರಿತು ಪ್ರಾಥಮಿಕ ತನಿಖೆ ನಡೆಸುವಾಗ ಅನುಮಾನಾಸ್ಪದವಾದ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಇದರಲ್ಲಿ ಧರ್ಮಸ್ಥಳ ದೇವಸ್ಥಾನ ಮಂಡಳಿ ನಡೆಸುತ್ತಿರುವ ಅತಿಥಿ ಗೃಹಗಳಲ್ಲಿ ನಡೆದಿರುವ ಸಾವುಗಳೂ ಸೇರಿವೆ. ಈ ಪ್ರಕರಣಗಳನ್ನು ಬೇಧಿಸಲು ಎಸ್‌ ಐಟಿಗೆ ಹೆಚ್ಚಿನ ಕಾಲಾವಕಾಶ ಬೇಕಿರುತ್ತದೆ.

ತನಿಖೆಯ ಭಾಗವಾಗಿ ಎಸ್‌ ಐಟಿಯು ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪಂಚಾಯತ್‌ ನಿಂದ ದಾಖಲೆಗಳನ್ನು ಪಡೆದುಕೊಂಡಿದೆ. ಆದರೆ 38 ಶವಗಳನ್ನು ಹೂತು ಹಾಕಿರುವದಕ್ಕೆ ಪಂಚಾಯತ್‌ ನಲ್ಲಿ ಯಾವುದೇ ದಾಖಲೆಗಳಿರುವುದಿಲ್ಲ. ಈ ಭಾಗವನ್ನು ಕುರಿತೂ ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವರ ವಿಚಾರಣೆಯನ್ನೂ ನಡೆಸಿದೆ.

ಧರ್ಮಸ್ಥಳ ಗ್ರಾಮಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ನಾಪತ್ತೆ ಪ್ರಕರಣಗಳನ್ನು ಕುರಿತೂ ಎಸ್‌ ಐಟಿ ತನಿಖೆ ನಡೆಸುತ್ತಿದ್ದು, ಶೀಘ್ರವೇ ರಾಜ್ಯ ಮಹಿಳಾ ಆಯೋಗಕ್ಕೂ ತನಿಖೆಯ ಪ್ರಗತಿ ಕುರಿತು  ವರದಿ ಸಲ್ಲಿಸಲಿದೆ.

ಜತೆಗೆ ಎಸ್ ಐಟಿಯು ಬಂಗ್ಲೆಗುಡ್ಡ ರಹಸ್ಯ ಕುರಿತೂ ತನಿಖೆಗೆ ಕೈ ಹಾಕಿದ್ದು, ಈ ರಹಸ್ಯವನ್ನೂ ಪತ್ತೆಹಚ್ಚುವ ವಿಶ್ವಾಸದಲ್ಲಿದೆ. ತನಿಖೆ ಸಂದರ್ಭದಲ್ಲಿ ಚಿನ್ನಯ್ಯ ಹಾಜರುಪಡಿಸಿದ್ದ ತಲೆಬುರುಡೆ ಕುರಿತು ಮಹಜರು ನಡೆಸುವಾಗ ಏಳು ತಲೆಬುರುಡೆಗಳು ಮತ್ತು ನೂರಾರು ಮೂಳೆಗಳನ್ನು ಪತ್ತೆಹಚ್ಚಿದೆ.

ಇದೇ ಬಂಗ್ಲೆಗುಡ್ಡ ಅರಣ್ಯಪ್ರದೇಶದಲ್ಲಿ ಮಡಿಕೇರಿಯ ಯುಬಿ ಅಯ್ಯಪ್ಪ (70) ಮತ್ತು ತುಮಕೂರಿನ ಆದಿಶೇಷ ನಾರಅಐಣ ಅವರ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಿದೆ. ಆದಿಶೇಷ ಅವರು 2013ರಲ್ಲಿ ಮತ್ತು ಅಯ್ಯಪ್ಪ ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾರೆ.

ಇವರ ರಹಸ್ಯಾತ್ಮಕ ನಾಪತ್ತೆ ಮತ್ತು ಗುರುತಿನ ಚೀಟಿಗಳು ಪತ್ತೆಯಾಗಿರುವ ಬಗ್ಗೆಯೂ ತನಿಖೆ ನಡೆಸಲು ಮುಂದಾಗಿದೆ. ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗದ ವರದಿಗೆ ಕಳುಹಿಸಿದೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

More articles

Latest article