ನವದೆಹಲಿ: ದೇಶಾದ ವಿವಿಧ ರಾಜ್ಯಗಳಲ್ಲಿ ನಡೆದಿದೆ ಎನ್ನಲಾದ ಮತ ಕಳ್ಳತನ ವಿರುದ್ಧ ಡಿಸೆಂಬರ್ 14ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್‍ಯಾಲಿ ನಡೆಸಲು ಕಾಂಗ್ರೆಸ್ ಉದ್ದೇಶಿಸಿದೆ.
ಭಾರತೀಯ ಚುನಾವಣಾ ಆಯೋಗವು ಆಡಳಿತಾರೂಢ ಎನ್ ಡಿಎ ಕೈಗೊಂಬೆಯಾಗಿದೆ. ಪಕ್ಷಪಾತಿಯಾಗಿ ವರ್ತಿಸುತ್ತಿದ್ದು, ಅನ್ಯಾಯ ಎಸಗುತ್ತಿದೆ. ದೇಶದ ಸಂವಿಧಾನವನ್ನು ನಾಶಮಾಡುವ ಇಂತಹ ಷಡ್ಯಂತ್ರಗಳ ವಿರುದ್ಧ ಡಿಸೆಂಬರ್ 14ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ವೋಟ್ ಚೋರ್ ಗಡ್ಡಿ ಛೋಡ್’ ಮಹಾ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದು, ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ. ತಮಗೆ ಅನುಕೂಲಕರವಾಗುವ ರೀತಿಯಲ್ಲಿ ನಕಲಿ ಮತದಾರರನ್ನು ಸೇರಿಸುವುದು, ಪ್ರತಿಪಕ್ಷಗಳ ಮತದಾರರ ಹೆಸರನ್ನು ಅಳಿಸುವುದು ಮತದಾರರ ಪಟ್ಟಿಯನ್ನು ತಿರುಚುವುದು ಬಿಜೆಪಿಯ ಹವ್ಯಾಸವಾಗಿದೆ. ಈ ನಡೆ ಪ್ರಜಾಪ್ರಭುತ್ವದ ಮೇಲೆ ಎರಗಿರುವ ದೊಡ್ಡ ಅಪಾಯವಾಗಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗದ ಈ ಸಂಚನ್ನು ವಿರೋಧಿಸಿ ದೇಶದ ಮೂಲೆ ಮೂಲೆಗಳಿಂದ ಕೋಟ್ಯಂತರ ಸಹಿಗಳು ಬಂದಿವೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಚುನಾವಣಾ ವ್ಯವಸ್ಥೆಯ ಮೇಲಿನ ಈ ವ್ಯವಸ್ಥಿತ ದಾಳಿಯನ್ನು ನೋಡಿಕೊಂಡು ಕೂರಲು ಸಾಧ್ಯವಿಲ್ಲ. ಈ ಮಹಾ ರ್‍ಯಾಲಿಯು ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಬ್ದಾರಿಯನ್ನು ನಿಭಾಯಿಸಲಾಗುವುದು, ಇದು ಆರಂಭ ಮಾತ್ರ ಎಂದು ವೇಣುಗೋಪಾಲ್ ಎಚ್ಚರಿಸಿದ್ದಾರೆ.
ಈ ಹಿಂದೆ ಚುನಾವಣಾ ಆಯೋಗವು ತಟಸ್ಥವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ಪಕ್ಷಪಾತಿಯಾಗಿರುವುದು ಎದ್ದು ಕಾಣಿಸುತ್ತಿದೆ. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಸಮಾನ ಹೋರಾಟದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ನಾಶಪಡಿಸಲಾಗುತ್ತಿದೆ ಏಂದೂ ಆಪಾದಿಸಿದ್ದಾರೆ.

