ಮೈಸೂರು: ನಾವು ಕಲಿಯುವ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿರಬೇಕು. ಇಲ್ಲದಿದ್ದರೆ ಸಾಕ್ಷರರಾಗಿ ಪ್ರಯೋಜನವಿಲ್ಲ. ಶಿಕ್ಷಣ ವೈಚಾರಿಕತೆ ಹಾಗೂ ವೈಜ್ಞಾನಿಕತೆಯಿಂದ ಕೂಡಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಯೋಜಿಸಿದ್ದ ಸಂಘದ ಪ್ರಥಮ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ದೇವರಾಜು ಅರಸು ಮತ್ತು ಹಾವನೂರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಿಸಿಎಂ ಹಾಸ್ಟೆಲ್ ಗಳಲ್ಲಿ ಓದಿರುವವರಿಗೆ ಉಚಿತ ಶಿಕ್ಷಣ, ಆಹಾರ, ವಸತಿಗಳು ದೊರೆತಿದ್ದು, ಸರ್ಕಾರ ಹಿಂದುಳಿದ ವರ್ಗದ ಮಕ್ಕಳು, ಬಡವರ ಮಕ್ಕಳು ವಿದ್ಯಾವಂತರಾಬೇಕೆಂಬ ಉದ್ದೇಶದಿಂದ ಹಾಸ್ಟೆಲ್ಗಳನ್ನು ತೆರೆದು, ಪ್ರವೇಶ ನೀಡಿ ಓದಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿ ಓದಿದವರು ಉನ್ನತ ಹುದ್ದೆಗೆ ಏರಿದ್ದಾರೆ, ಕೆಲವರು ಇತರೆ ಉದ್ಯೋಗ ಮಾಡುತ್ತಿದ್ದಾರೆ. ಶಿಕ್ಷಣ ಬಹಳ ಮುಖ್ಯ. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಶಿಕ್ಷಣದ ಪ್ರಮಾಣ ಶೇ. 10-12% ಮಾತ್ರವಿತ್ತು ಇಂದು ಶೇ. 78% ರಷ್ಟು ಏರಿದೆ ಎಂದರು. ಶಿಕ್ಷಣದ ಪ್ರಮಾಣ ಶೇ 100 ರಷ್ಟು ಆಗಬೇಕಿದೆ ಎಂದರು.
ಎಲ್ಲರನ್ನೂ ಸಮಾನವಾಗಿ ಕಾಣಬೇಕು:
ಜಾತಿ, ವರ್ಗ ರಹಿತ ವ್ಯವಸ್ಥೆ ನಿರ್ಮಾಣ, ಮೂಢನಂಬಿಕೆ ತೊಲಗಬೇಕು ಎಂದು 850 ವರ್ಷಗಳ ಹಿಂದೆಯೇ ಬಸವಣ್ಣ ಹೇಳಿದ್ದರು. ನಾವು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ ಅನೇಕ ಧರ್ಮ ಮತ್ತು ಜಾತಿಗಳಿವೆ. ಎಲ್ಲ ಧರ್ಮಗಳೂ ಪರಸ್ಪರರನ್ನು ಪ್ರೀತಿಸಬೇಕು ಎಂದು ಹೇಳುತ್ತದೆಯೇ ಹೊರತು ಪರಸ್ಪರರನ್ನು ದ್ವೇಷಿಸಿ ಎಂದು ಹೇಳುವುದಿಲ್ಲ. ಎಲ್ಲರನ್ನೂ ಸಮಾನರಾಗಿ ಕಾಣಬೇಕು. ಕನಿಷ್ಠ ಪಕ್ಷ ವಿದ್ಯಾವಂತರಾದರೂ ಇದನ್ನು ಪಾಲಿಸಬೇಕು ಎಂದರು.
ಸಹಬಾಳ್ವೆ, ಪರಧರ್ಮ ಸಹಿಷ್ಣುತೆ ರಬೇಕು ಎಂದು ಸಂವಿಧಾನ ಹೇಳುತ್ತದೆ. ಇದು ಇದ್ದರೆ ದ್ವೇಷಿಸುವ ಪ್ರಮೇಯ ಇರುವುದಿಲ್ಲ. ಸತ್ಯ ತಿಳಿದೂ ಅಸತ್ಯವನ್ನೇ ಅಭ್ಯಾಸ ಮಾಡಿಕೊಳ್ಳಬಾರದು. ಹಿಂದೆ ಒಮ್ಮೆ ನನ್ನ ಕಾರಿನ ಮೇಲೆ ಕಾಗೆ ಕೂತಿದ್ದಕ್ಕೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ. ಈ ಬಾರಿ ಬಜೆಟ್ ಮಂಡಿಸುವುದಿಲ್ಲ ಎಂದೆಲ್ಲಾ ಟಿವಿ ವಾಹಿನಿಗಳಲ್ಲಿ ಹೇಳಿದ್ದರು. ಕಾಗೆ ಕೂತಿದ್ದು ಅನಿಷ್ಟ ಎಂದರು. ಇದಾದ ನಂತರ ಬಜೆಟ್ ಮಂಡಿಸಿ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದೇನೆ. ಈ ಬಾರಿ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷಗಳಾಯಿತು ಎಂದರು.
ಪ್ರೊ. ರವಿವರ್ಮಕುಮಾರ್ ಮದುವೆಯಾಗಿದ್ದು ರಾಹು ಕಾಲದಲ್ಲಿ. ಅವರು ಉತ್ತಮ ವಕೀಲರಾಗಿ ಎತ್ತರಕ್ಕೆ ಬೆಳೆದಿದ್ದಾರೆ. ದೇವರಾಜ ಅರಸು ಹಾಗೂ ಹಾವನೂರು ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದೇವೆ ಎಂದರು.
ಸರ್ಕಾರ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದು, ಕೆಲಸಕ್ಕೆ ಸೇರಿದ ಮೇಲೆ ಸಮಾಜಕ್ಕೆ ಹಿಂತಿರುಗಿ ಏನಾದರೂ ಕೊಡಬೇಕು. ಸಮಾಜದ ಋಣವನ್ನು ತೀರಿಸಬೇಕು . ನಾನು ಕಾನೂನು ಪದವಿ ಓದಿದ್ದರಲ್ಲಿ ಸಮಾಜದ ಋಣವೂ ಇದೆ. ಅದನ್ನು ತೀರಿಸಿದಾಗ ಮಾತ್ರ ಸಮಾಜ ಸರ್ವತೋಮುಖವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಗುಲಾಮಗಿರಿಯಿಂದ ಹೊರಬನ್ನಿ:
ರಾಜ್ಯದಲ್ಲಿ 3,88,000 ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ವಿದ್ಯೆ ಪಡೆಯುತ್ತಿದ್ದಾರೆ. ಈಗ ಮೈಸೂರು ನಗರದಲ್ಲಿ 6500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರುಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಶಕ್ತಿ ತುಂಬಿದರು. ಆದ್ದರಿಂದ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಖ್ಯಾತರಾಗಿದ್ದರು. 2013 ರ ನಮ್ಮ ಅವಧಿಯಲ್ಲಿಯೂ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಈ ಬಾರಿಯೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಸಮಾಜದಲ್ಲಿನ ಅಸಮಾನತೆಯನ್ನು ತೊಡೆದುಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದ ಹಿಂದುಳಿದವರು ಗುಲಾಮಗಿರಿ ಮನಸ್ಥಿತಿಯಿಂದ ಹೊರಬಂದು ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಬಲ:
ಗ್ಯಾರಂಟಿ ಯೋಜನೆಗಳಿಂದ ದುರ್ಬಲವರ್ಗದವರಿಗೆ ಆರ್ಥಿಕ ಬಲ ಹೆಚ್ಚುವ ಜೊತೆಗೆ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ. ಹಿಂದುಳಿದ ವರ್ಗಗಳ ಇಲಾಖೆಗೆ ಪ್ರಸ್ತುತ 3,500 ಕೋಟಿ ನೀಡಲಾಗುತ್ತಿದೆ. ಈ ಹಿಂದೆ ಅಕ್ಷರ ಸಂಸ್ಕೃತಿಯಿಂದ ಜನರನ್ನು ವಂಚಿಸಲಾಗುತ್ತಿದ್ದು, ಸಮಾನ ಅವಕಾಶಗಳನ್ನು ನೀಡಲಾಗುತ್ತಿರಲಿಲ್ಲ. ಆದ್ದರಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಸಾರ್ಥಕವಾಗಿ ಬದುಕಿ,ಸಮಾಜದ ಋಣವನ್ನು ತೀರಿಸಬೇಕು ಎಂದರು.
ರಾಜ್ಯದಲ್ಲಿ ಕನ್ನಡ ವಾತಾವರಣ ಸೃಷ್ಟಿಯಾಗಲಿ:
ಇಂದು ಕನ್ನಡ ರಾಜ್ಯೋತ್ಸವವನ್ನೂ ಆಚರಿಸಲಾಗಿದೆ. ನಾವೆಲ್ಲರೂ ಕನ್ನಡದಲ್ಲಿಯೇ ವ್ಯವಹರಿಸುತ್ತೇವೆ ಎಂಬ ಶಪಥ ಕೈಗೊಳ್ಳಬೇಕು. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವುದು ವಿರಳವಾಗುತ್ತಿದೆ. ಆದ್ದರಿಂದ ಕನ್ನಡದ ವಾತಾವರಣ ಸೃಷ್ಟಿಸಿ, ಕನ್ನಡ ಕಲಿಕೆ ಎಂಬುದು ಅನಿವಾರ್ಯವಾಗುತ್ತದೆ. ಬ್ಯಾಂಕುಗಳೂ ಸೇರಿದಂತ ಸಾರ್ವಜನಿಕ ಸಂಸ್ಥೆಗಳು, ಜನರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಕರ್ನಾಟಕದ ಏಕೀಕರಣಕ್ಕಾಗಿ ಅನೇಕ ಮಹನೀಯರು ಕೊಡುಗೆ ನೀಡಿದ್ದು, ಕನ್ನಡ ರಾಜ್ಯೋತ್ಸವದಂದು ಅವರನ್ನು ಸ್ಮರಿಸಿಕೊಳ್ಳಬೇಕು. ಕನ್ನಡವನ್ನು ಮಾತನಾಡುವ ಜೊತೆಗೆ ಬೇರೆ ಭಾಷೆಯನ್ನು ಕಲಿಯಬಹುದಾದರೂ, ನಾವೆಲ್ಲರೂ ಕನ್ನಡಿಗರಾಗಿರಬೇಕು ಎಂದರು

