“ಮಹಾನಗರಗಳ ಮೇಲಿನ ಮಹಾಪ್ರಹಾರ”

Most read

ಅಂದು ಆತ ಈರುಳ್ಳಿ-ಬೆಳ್ಳುಳ್ಳಿಗಳಂತೆ ಗಾಂಜಾ ಅನ್ನು ಆಸುಪಾಸಿನ ಏರಿಯಾಗಳ ಮಾರ್ಕೆಟ್ಟುಗಳಲ್ಲಿ ವಿಚಾರಿಸುತ್ತಾ ಹೋಗಿದ್ದು, ಒಬ್ಬರಿಂದ ಒಬ್ಬರಿಗೆ ಸಂಪರ್ಕದ ಕೊಂಡಿಗಳು ಬೆಸೆಯುತ್ತಾ ಹೋಗಿದ್ದು, ಕಲ್ಪನೆಗೆ ನಿಲುಕದಂತಹ ಜಾಗವೊಂದರಲ್ಲೇ ಸಪ್ಲೈ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದ್ದ ಬಗ್ಗೆ ನಮಗೆ ಗೊತ್ತಾಗಿದ್ದು… ಇತ್ಯಾದಿಗಳೆಲ್ಲ ದಿಲ್ಲಿಯನ್ನು ಹೊಸದಾಗಿ ನೋಡುತ್ತಿದ್ದ ನನ್ನಂಥವನಿಗೆ ಅಂದು ಹೊಸದೇ ಆಗಿದ್ದವು – ಪ್ರಸಾದ್‌ ನಾಯ್ಕ್‌ , ದೆಹಲಿ.

ಅಪರಾಧದ ಮೋಡಸ್ ಒಪೆರಾಂಡಿ ಅಥವಾ ಕಾರ್ಯವಿಧಾನಗಳು ಕಾಲಕ್ಕೆ ತಕ್ಕಂತೆ ಮಹಾನಗರಗಳಲ್ಲಿ ಬದಲಾಗುತ್ತಲೇ ಬಂದಿವೆ.

ಸುಮಾರು ಹದಿನೈದು ವರ್ಷಗಳ ಹಿಂದೆ ಅರುಣಾಚಲ ಮೂಲದ ಗೆಳೆಯನೊಬ್ಬ ದಿಲ್ಲಿಯಲ್ಲಿ ಚಾಲ್ತಿಯಲ್ಲಿರುವ ಮಾದಕ ದ್ರವ್ಯಗಳ ಬಗ್ಗೆ ಹೇಳಿದಾಗ ನಾನು ದಂಗು ಬಡಿದು ಹೋಗಿದ್ದೆ. ಹೊರಗಿನಿಂದ ಬರುವ ವ್ಯಕ್ತಿಗಳಿಗೆ ಗಾಂಜಾದಂತಹ ಮಾದಕ ದ್ರವ್ಯಗಳು ಇಷ್ಟು ಸುಲಭವಾಗಿ ಸಿಗುತ್ತದೆಂಬ ಸಂಗತಿಯೇ ನನಗಾಗ ಬಹಳ ಅಚ್ಚರಿಯದ್ದಾಗಿತ್ತು. ಅಂದು ಆತ ಈರುಳ್ಳಿ-ಬೆಳ್ಳುಳ್ಳಿಗಳಂತೆ ಗಾಂಜಾ ಅನ್ನು ಆಸುಪಾಸಿನ ಏರಿಯಾಗಳ ಮಾರ್ಕೆಟ್ಟುಗಳಲ್ಲಿ ವಿಚಾರಿಸುತ್ತಾ ಹೋಗಿದ್ದು, ಒಬ್ಬರಿಂದ ಒಬ್ಬರಿಗೆ ಸಂಪರ್ಕದ ಕೊಂಡಿಗಳು ಬೆಸೆಯುತ್ತಾ ಹೋಗಿದ್ದು, ಕಲ್ಪನೆಗೆ ನಿಲುಕದಂತಹ ಜಾಗವೊಂದರಲ್ಲೇ ಸಪ್ಲೈ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದ್ದ ಬಗ್ಗೆ ನಮಗೆ ಗೊತ್ತಾಗಿದ್ದು… ಇತ್ಯಾದಿಗಳೆಲ್ಲ ದಿಲ್ಲಿಯನ್ನು ಹೊಸದಾಗಿ ನೋಡುತ್ತಿದ್ದ ನನ್ನಂಥವನಿಗೆ ಅಂದು ಹೊಸದೇ ಆಗಿದ್ದವು. ಅಪರಾಧವೆಂಬುದು ನಮ್ಮ ಕಣ್ಣಿಗೆ ಕಾಣದ ರಹಸ್ಯ ಜಗತ್ತಿನಲ್ಲೇ ನಡೆಯುತ್ತವೆ ಎಂಬ ಕಲ್ಪನೆಯು ನನ್ನ ಮಟ್ಟಿಗೆ ಸಂಪೂರ್ಣವಾಗಿ ನುಚ್ಚುನೂರಾಗಿದ್ದು ಈ ದಿನಗಳಲ್ಲೇ.

ಮುಂದಿನ ಕೆಲ ವರ್ಷಗಳಲ್ಲಿ ಇಂಟರ್ನೆಟ್ ಎಂಬುದು ನಮ್ಮ ದೈನಂದಿನ ಜಗತ್ತಿನಲ್ಲಿ ಹೆಚ್ಚು ಪ್ರಸ್ತುತವಾಗುತ್ತಾ ಹೋದಾಗ ಅಪರಾಧದ ಹೊಸ ಮುಖಗಳೂ ಕಾಣತೊಡಗಿದ್ದವು. ವಿಶೇಷವಾಗಿ ಬ್ಲೂ-ವೇಲ್ ಎಂಬ ಆಟವೊಂದು ನಮ್ಮ ನಡುವಿನ ಮಕ್ಕಳ ಪ್ರಾಣಕ್ಕೇ ಎರವಾಗುತ್ತಿರುವುದು ನನಗಂತೂ ಎಲ್ಲಿಲ್ಲದ ಅಚ್ಚರಿಗೆ ಕಾರಣವಾಗಿತ್ತು. ಜಗತ್ತಿನ ಯಾವುದೋ ಮೂಲೆಯೊಂದರಲ್ಲಿ ಕೂತಿರುವ ವ್ಯಕ್ತಿಯೊಬ್ಬ ಮತ್ತೆಲ್ಲೋ ಕೂತಿರುವ ಮಗುವಿನ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು, ಮಗುವನ್ನು ಹಂತಹಂತವಾಗಿ ಸಾವಿನ ಬಾಗಿಲಿನತ್ತ ಕರೆದೊಯ್ಯುವ ಉದಾಹರಣೆಗಳು ಯಾವ ರೋಚಕ ಸಿನೆಮಾದ ಕತೆಗೂ ಕಮ್ಮಿಯಿದ್ದಂತಿರಲಿಲ್ಲ. ಇದರ ಬಗ್ಗೆ ಆಳವಾಗಿ ತಿಳಿದುಕೊಳ್ಳಲೆಂದೇ ನಾನು ಹಲವು ದಾರಿಗಳನ್ನು ಹಿಡಿದು ಹೋಗಿದ್ದಿದೆ. ರಹಸ್ಯಗಳನ್ನು ಅಗೆಯುತ್ತಾ ಕಂಗಾಲಾಗಿದ್ದಿದೆ. ಹೊತ್ತಲ್ಲದ ಹೊತ್ತಲ್ಲಿ ಮಕ್ಕಳಿಗೆ ನೀಡಲಾಗುವ ಟಾಸ್ಕ್ ಗಳು, ಒಟ್ಟಾರೆಯಾಗಿ ಸನ್ನಿವೇಶದ ಭಯಾನಕತೆಯನ್ನು ಮತ್ತಷ್ಟು ಹೆಚ್ಚಿಸುವ ವಿಚಿತ್ರ ಹಿನ್ನೆಲೆ ಸಂಗೀತಗಳು, ದಿನೇದಿನೇ ಹೊಸ-ವಿಕ್ಷಿಪ್ತ ಸಾಹಸಗಳಿಗೆ ಮಕ್ಕಳ ಮನಸ್ಸನ್ನು, ಸುಪ್ತಪ್ರಜ್ಞೆಯನ್ನು ವ್ಯವಸ್ಥಿತವಾಗಿ ಪ್ರೊಗ್ರಾಮಿಂಗ್ ಮಾಡುವಂತೆ ರೂಪಿಸಲಾಗಿರುವ ಹಂತಗಳು… ಇವೆಲ್ಲವನ್ನು ನೋಡುತ್ತಾ ಹೋದಾಗ ನಾನು ಈವರೆಗೆ ನೋಡಿರಬಹುದಾದ ಸಾವಿರಾರು ಹಾರರ್ ಸಿನೆಮಾಗಳು ಕೂಡ ಸಪ್ಪೆಯೆನಿಸತೊಡಗಿದ್ದವು. ಹೀಗೆ ಹಿಂದೆಂದಿಗಿಂತಲೂ ಹೆಚ್ಚು ಮತ್ತು ಬಹಳ ಸುಲಭವಾಗಿ ಎಲ್ಲರ ಕೈಗೆಟಕುವ ಆನ್ಲೈನ್ ಲೋಕದ ಕರಾಳತೆಯು ನಮ್ಮ ಕಲ್ಪನೆಗೂ ಮೀರಿದ್ದಾಗಿತ್ತು.

ಈಗ 10/11 ದಿಲ್ಲಿ ದಾಳಿಯ ನಂತರದ ಬೆಳವಣಿಗೆಗಳಲ್ಲಿ ಭಯೋತ್ಪಾದನೆ ಮತ್ತು ಉಗ್ರವಾದದ ಚಿಂತನೆಗಳನ್ನು ಸೋಷಿಯಲ್ ಮೀಡಿಯಾಗಳ ಮೂಲಕವಾಗಿ ಯುವಜನರಿಗೆ ತಲುಪಿಸುವ ಬಗೆಗಿನ ಹೊಸ ಸುಳಿವುಗಳು ಪತ್ತೆಯಾಗಿರುವುದು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಟ್ಟರ್ ವಿಚಾರಧಾರೆಗಳನ್ನು ತಮ್ಮ ಖಾತೆಗಳಲ್ಲಿ ವ್ಯಕ್ತಪಡಿಸುವ ಮತ್ತು ಸಂಬಂಧಿ ವಿಚಾರಗಳನ್ನು ನಿರಂತರ ಹಂಚಿಕೊಳ್ಳುವ ವ್ಯಕ್ತಿಗಳ ಖಾತೆಗಳನ್ನು ಹಿಂಬಾಲಿಸಿ, ಈ ಮಂದಿಗೆ ತಮ್ಮ ಚಿಂತನೆಗಳನ್ನು ದಾಟಿಸುವ ಪ್ರಯತ್ನಗಳನ್ನೂ ಹಲವೆಡೆ ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ 10/11 ದಾಳಿಯ ನಂತರದ ದಿನಗಳಲ್ಲಿ ನಡೆಸಲಾಗಿರುವ ತನಿಖೆಗಳು ಈ ದಾರಿಯಲ್ಲೂ ಸಾಗಿವೆ ಮತ್ತು ಈ ನಿಟ್ಟಿನಲ್ಲಿ ಮಹತ್ವದ ಸುಳಿವುಗಳು ಕೂಡ ದೊರಕಿವೆ. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿರುವ ಅನಾಮಿಕತೆ ಮತ್ತು ಡಾರ್ಕ್ ವೆಬ್ ಲೋಕದಲ್ಲಿರುವ ನಿಗೂಢತೆಯ ಹೊರತಾಗಿಯೂ ಡಿಜಿಟಲ್ ಹೆಜ್ಜೆಗುರುತುಗಳನ್ನು ಸಂಪೂರ್ಣವಾಗಿ ಅಳಿಸುವುದು ಬಹುತೇಕ ಅಸಾಧ್ಯವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಹೊಳಹುಗಳು ಸಿಗುವುದು ಬಹುತೇಕ ಖಚಿತ.

ಈಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಪ್ರೊಫೈಲುಗಳೇ ನಮ್ಮ ವರ್ಚುವಲ್ ಐಡೆಂಟಿಟಿಯಾಗಿ ಬದಲಾದ ನಂತರ ಸೈಬರ್ ಸಂಬಂಧಿ ಅಪರಾಧಗಳಿಗೆ ದಾರಿಯು ಮತ್ತಷ್ಟು ಸುಗಮವಾದಂತಿದೆ. ಜನಸಾಮಾನ್ಯರ ಸೋಷಿಯಲ್ ಮೀಡಿಯಾ ಅಕೌಂಟುಗಳನ್ನು ಸೂಕ್ಷ್ಮವಾಗಿ ಗಮನಿಸಿ ಆಯಾ ವ್ಯಕ್ತಿಯ ದಿನಚರಿ, ಜೀವನಶೈಲಿ, ಹಂಬಲ, ದೌರ್ಬಲ್ಯ, ವ್ಯಕ್ತಿತ್ವ, ವಿಚಾರಧಾರೆಗಳನ್ನು ಅಂದಾಜಿಸಿ ವಿವಿಧ ರೀತಿಯ ಸೈಬರ್ ಕ್ರೈಂಗಳು ಆಗುವುದುಂಟು. ಈ ಹಿನ್ನೆಲೆಯಲ್ಲಿ ಉಗ್ರರ ಕಾಲಾಳುಗಳಿಂದ ಹಿಡಿದು ಹ್ಯಾಂಡ್ಲರ್ ಗಳವರೆಗೂ ಸೋಷಿಯಲ್ ಮೀಡಿಯಾಗಳನ್ನು ಇಂದು ವ್ಯವಸ್ಥಿತವಾಗಿ ಬಳಸುತ್ತಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಕೆಲ ವರ್ಷಗಳ ಹಿಂದೆ ಬುರ್ಹಾನ್ ವಾಣಿಯೆಂಬ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿದ್ದು ಇದಕ್ಕೊಂದು ಒಳ್ಳೆಯ ನಿದರ್ಶನ. ಅಂದಿನಿಂದ ಇಂದಿನವರೆಗೆ ನಿಸ್ಸಂದೇಹವಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿಬಿಟ್ಟಿವೆ.

ಎಲ್ಲದಕ್ಕಿಂತ ಮಿಗಿಲಾಗಿ 10/11ರ ದಿಲ್ಲಿ ದಾಳಿಗೂ, ಕುಖ್ಯಾತ 26/11 ಮುಂಬೈ ದಾಳಿಗೂ ಸಾಕಷ್ಟು ಸಾಮ್ಯತೆಯಿರುವ ಅಂಶ. ಮುಂಬೈ ದಾಳಿಯ ಮಾಸ್ಟರ್-ಮೈಂಡ್ ಆಗಿದ್ದ ಡೇವಿಡ್ ಹೆಡ್ಲಿ ಹೊರಗಿನಿಂದ ಮುಂಬೈಗೆ ಬಂದವನಾಗಿದ್ದ. ಈ ದಾಳಿಯನ್ನು ವ್ಯವಸ್ಥಿತವಾಗಿ ರೂಪಿಸಲು ದೀರ್ಘಕಾಲ ಮುಂಬೈಯಲ್ಲಿ ಉಳಿದುಕೊಂಡಿದ್ದ ಮತ್ತು ಕ್ರಮೇಣ ಸ್ಥಳೀಯರ ಸ್ನೇಹವನ್ನು ಸಂಪಾದಿಸಿ ಒಂದು ರೀತಿಯಲ್ಲಿ ಇಲ್ಲಿಯವನೇ ಆಗಿಬಿಟ್ಟಿದ್ದ. ಮುಂಬೈಯನ್ನು ದಾಳಿಗೆ ಅಂತಿಮಗೊಳಿಸುವ ಮುಂಚೆ ಆತ ಪುಣೆ, ದಿಲ್ಲಿಯಂತಹ ಶಹರಗಳಿಗೂ ಹೋಗಿ Recce (ಸ್ಥಳಪರಿಶೀಲನೆಯನ್ನು) ಮಾಡಿಬಂದಿದ್ದ. ಆ ಅವಧಿಯಲ್ಲಿ ತನ್ನೆಲ್ಲ ಸಂಶೋಧನೆಯ ನಂತರ ಕೊನೆಗೂ ಆತ ಅಂತಿಮಗೊಳಿಸಿದ್ದು ಮುಂಬೈ ಮಹಾನಗರವನ್ನು.

10/11ರ ದಾಳಿಯಲ್ಲೂ ಇಂತಹ ಹಲವು ಸಾಮ್ಯತೆಗಳನ್ನು ನಾವು ಗಮನಿಸಬಹುದು. ಈ ದಾಳಿಯ ಹಿಂದಿರುವವರೆಂದು ಕೇಳಿ ಬಂದಿರುವ ಅಷ್ಟೂ ಹೆಸರುಗಳು ಮೂಲತಃ ಹೊರಗಿನವರದಾಗಿದ್ದರೂ ದಿಲ್ಲಿಯಲ್ಲಿ ಬಹಳ ಕಾಲ ನೆಲೆಸಿದ್ದವರು. ಎಲ್ಲರೊಡನೆ ಸ್ಥಳೀಯರಾಗಿದ್ದುಕೊಂಡು ಈ ಮಹಾನಗರದ ಆಗುಹೋಗುಗಳ ಬಗ್ಗೆ ಸಂಪೂರ್ಣ ಜ್ಞಾನವಿದ್ದವರು. ಅಸಲಿಗೆ 10/11ರ ದಾಳಿಯ ನಂತರ ಈ ಷಡ್ಯಂತ್ರದ ಎಪಿಸೆಂಟರ್ ಎಂದು ಹೇಳಲಾಗಿದ್ದ ಅಲ್-ಫಲಾಹ್ ಯೂನಿವರ್ಸಿಟಿಯ ಅಧಿಕೃತತೆಯ ಬಗ್ಗೆಯೇ ಹಟಾತ್ತನೆ ಪ್ರಶ್ನೆಗಳು ಎದ್ದುಬಿಟ್ಟವು. ಅಲ್ಲಿಯ ಮುಖ್ಯಸ್ಥರ ಹಿನ್ನೆಲೆಯ ಬಗ್ಗೆ ಸುದೀರ್ಘ ವರದಿಗಳು ಬಂದವು. ಈ ಮಹತ್ವದ ಬೆಳವಣಿಗೆಗಳ ನಂತರ ಸದ್ಯ ಯೂನಿವರ್ಸಿಟಿಯ ವೆಬ್-ಸೈಟ್ ಅನ್ನು ಕೂಡ ಸ್ಥಗಿತಗೊಳಿಸಲಾಗಿದೆ.    

ಈ ನಡುವೆ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿಸಿರುವವರ ಶಿಕ್ಷಣ ಮತ್ತು ವಿದ್ಯಾರ್ಹತೆಯ ಚರ್ಚೆಗಳು ಕೂಡ ಸಾಕಷ್ಟು ಬಂದುಹೋದವು. ಈ ಬಗೆಯ ಚರ್ಚೆಗಳು ಹಿಂದೆ ಕೂಡ ನಡೆದಿವೆ. ಅಸಲಿಗೆ 9/11 ದಾಳಿಯ ಮಾಸ್ಟರ್-ಮೈಂಡ್ ಆಗಿದ್ದ ಒಸಾಮಾ-ಬಿನ್-ಲಾಡೆನ್ ಸಿವಿಲ್ ಇಂಜಿನಿಯರಿಂಗ್ ಓದಿಕೊಂಡಿದ್ದ. ಸಾಮಾನ್ಯವಾಗಿ ಇಂತಹ ಕಾರ್ಯಾಚರಣೆಗಳನ್ನು ವ್ಯವಸ್ಥಿತವಾಗಿ ರೂಪಿಸುವ ರೂವಾರಿಗಳು ಮತ್ತು ಹಿನ್ನೆಲೆಯಲ್ಲಿ ಕೆಲಸ ಮಾಡುವವರು ಬಹಳ ವಿದ್ಯಾವಂತರೂ, ಬುದ್ಧಿವಂತರೂ, ಆಯಾ ಕ್ಷೇತ್ರದಲ್ಲಿ ವಿಶೇಷ ಕೌಶಲಗಳನ್ನು ಹೊಂದಿರುವವರೇ ಆಗಿರುತ್ತಾರೆ. ಕಳೆದ ಎರಡು ದಶಕಗಳಲ್ಲಿ ನಮ್ಮ ಕಾಶ್ಮೀರದಿಂದ ಹಿಡಿದು ಯೂರೋಪಿನಲ್ಲಾದ ಕೆಲ ಬಾಂಬ್ ದಾಳಿಗಳಲ್ಲೂ ವೈದ್ಯರು ಮತ್ತು ತಾಂತ್ರಿಕ ನೈಪುಣ್ಯತೆಯನ್ನು ಹೊಂದಿರುವ ಹಲವರ ಹೆಸರುಗಳು ಬಂದುಹೋಗಿದ್ದಿದೆ. ಬಹುಷಃ ಈ ಎಂದೂ ಮುಗಿಯದ ಯುದ್ಧದಲ್ಲಿ ಸ್ವತಃ ಫೀಲ್ಡಿಗಿಳಿಯುವ ಮತ್ತು ಮಡಿಯುವ ಕಾಲಾಳುಗಳು ಮಾತ್ರ ಇದಕ್ಕೆ ಅಪವಾದ.

ಅಂದಹಾಗೆ 26/11 ಮುಂಬೈ ದಾಳಿಯಲ್ಲಿ ಹೆಡ್ಲಿಯ ಒಡನಾಡಿಯೆಂಬಂತೆ ಕೇಳಿಬಂದಿದ್ದ ಮುಖ್ಯ ಹೆಸರು ರಾಹುಲ್ ಭಟ್. ಖ್ಯಾತ ಚಿತ್ರನಿರ್ದೇಶಕ ಆಗಿರುವ ಮಹೇಶ್ ಭಟ್ ಪುತ್ರ. ಮುಂಬೈ ದಾಳಿಯ ಬಗೆಗಿನ ತಮ್ಮ ಕೃತಿಯೊಂದರಲ್ಲಿ ಖ್ಯಾತ ಲೇಖಕ ಮತ್ತು ಪತ್ರಕರ್ತರಾಗಿರುವ ಹುಸೇನ್ ಝಾಯ್ದಿ ಒಂದೆಡೆ ಹೀಗೆ ಬರೆಯುತ್ತಾರೆ: “ತನಿಖೆಯು ಪ್ರಗತಿಯಲ್ಲಿದ್ದಾಗ ಉಗ್ರರ ನಡುವೆ ವಿನಿಮಯವಾಗುತ್ತಿದ್ದ ಹಲವು ರಹಸ್ಯ ಸಂದೇಶಗಳಲ್ಲಿ ಪದೇಪದೇ ಕೇಳಿಬರುತ್ತಿದ್ದ ಹೆಸರೆಂದರೆ “ರಾಹುಲ್”. ಆದರೆ ಈ ರಾಹುಲ್ ಹೆಸರಿನ ನಿಜವಾದ ಗುಟ್ಟೇನೆಂಬುದು ಬಹಳ ಕಾಲ ನಮ್ಮ ತನಿಖಾ ಸಂಸ್ಥೆಗಳಿಗೆ ಅರ್ಥವೇ ಆಗಿರಲಿಲ್ಲ. ಈ ಹೆಸರಿನ ರಾಜಕೀಯ ನಾಯಕರೊಬ್ಬರ ಮೇಲೆ ದಾಳಿ ನಡೆಸುವ ಸಂಚಾಗಿತ್ತೇ? ಅಥವಾ ತೆರೆಯಲ್ಲಿ ಈ ಹೆಸರಿನಿಂದಲೇ ಮಿಂಚುವ ಖ್ಯಾತ-ಜನಪ್ರಿಯ ನಟನೊಬ್ಬನ ಹತ್ಯೆಯ ಸಂಚಾಗಿತ್ತೇ? ಹೀಗೆ ಹಲವು ಸಾಧ್ಯತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿತ್ತು. ಕೊನೆಗೆ ಅಧಿಕಾರಿಗಳ ಎದುರು ತೆರೆದುಕೊಂಡಿದ್ದು ಮಾತ್ರ ಬೇರೆಯೇ ರಾಹುಲ್”.

ಇದನ್ನೂ ಓದಿ- http://“ಮೆಟ್ರೋಸಿಟಿಗಳೂ ಸೆಲೆಬ್ರಿಟಿಗಳೂ” https://kannadaplanet.com/metrocities-and-celebrities/

ಇವೆಲ್ಲದಕ್ಕಿಂತ ಮಿಗಿಲಾದ ಸ್ವಾರಸ್ಯಕರ ಅಂಶವೆಂದರೆ ಹೆಡ್ಲಿ ಮೂಲತಃ ವಿದೇಶಿಗನಾಗಿದ್ದ. ಬಿಳಿಯನಾಗಿದ್ದ. ಹತ್ತಿಪ್ಪತ್ತು ಜನರ ನಡುವೆ ನಿಂತರೆ ಆತನ ಪರ್ಸನಾಲಿಟಿ ಯಾರಿಗಾದರೂ ಸುಲಭವಾಗಿ ನೆನಪಿನಲ್ಲುಳಿಯುವಷ್ಟು ಭಿನ್ನನಾಗಿದ್ದ. ಇಷ್ಟಿದ್ದೂ ಮುಂಬೈ ಜನಜಂಗುಳಿಯಲ್ಲಿ ಒಂದಾಗಲು, ಕ್ರಮೇಣ ಸ್ಥಳೀಯನಂತೆ ಸೋಗು ಹಾಕಲು ಮತ್ತು ರಾಹುಲ್ ಭಟ್ ನಂತಹ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಸಂಪಾದಿಸುವಲ್ಲಿ ಆತನಿಗೆ ಯಶಸ್ಸು ಸಿಕ್ಕಿತ್ತು. ಹೀಗಿರುವಾಗ ಯಾವುದೇ ಕ್ಷಣದಲ್ಲಿ ಸೃಷ್ಟಿಸಿ, ಒಂದು ಕ್ಲಿಕ್ ಮಾತ್ರದಲ್ಲಿ ಡಿಲೀಟ್ ಮಾಡಬಲ್ಲ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸಮಾನಮನಸ್ಕರು ಸ್ನೇಹವನ್ನು ಸಂಪಾದಿಸುವುದು, ತಮ್ಮದೇ ಆದ ಗುಂಪು ಕಟ್ಟಿಕೊಳ್ಳುವುದು ಮತ್ತು ಕ್ರಾಂತಿ-ಸಂಘಟನೆಗಳ ಹೆಸರಿನಲ್ಲಿ ವಿವಿಧ ಬಗೆಯ ಸಂಚಿನಲ್ಲಿ ಭಾಗಿಯಾಗುವುದು ಈಗ ಹಿಂದೆಂದಿಗಿಂತಲೂ ಸುಲಭ. ದುರಾದೃಷ್ಟವಶಾತ್ 10/11ರ ದಾಳಿಯ ನಂತರ ಕಾಣಬರುತ್ತಿರುವ ಹೊಸ ಸುಳಿವು ಕೂಡ ಇದೇ ಮಾದರಿಯದ್ದು.   

ಜಗತ್ತಿನ ಕುಖ್ಯಾತ ಕಾನ್-ಮ್ಯಾನ್ ಗಳಲ್ಲೊಬ್ಬರಾದ (ಸದ್ಯ ಪ್ರತಿಷ್ಠಿತ ಅಮೆರಿಕನ್ ಕನ್ಸಲ್ಟಿಂಗ್ ಕಂಪೆನಿಯೊಂದರ ಮುಖ್ಯಸ್ಥರಾಗಿರುವ) ಫ್ರಾಂಕ್ ಅಬೆಗ್ನೇಲ್ ಅವರಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು: “ಜನರನ್ನು ಯಾಮಾರಿಸುವುದು ನಿಮ್ಮ ಕಾಲದಲ್ಲಿ ಸುಲಭವಿತ್ತೇ ಅಥವಾ ಇಂಟರ್ನೆಟ್ ಈ ಮಟ್ಟಿಗೆ ಬೆಳೆದುಕೊಂಡಿರುವ ನಮ್ಮ ಕಾಲದಲ್ಲೇ?” ಅಂತ. “ನಾನು ವಿಪರೀತ ಚಟುವಟಿಕೆಯಿಂದಿದ್ದ 60-70ರ ದಶಕಕ್ಕೆ ಹೋಲಿಸಿದರೆ ವಂಚನೆಯ ಅಪರಾಧವೊಂದನ್ನು ಇಂದಿನ ದಿನಗಳಲ್ಲಿ ನಡೆಸುವುದು ಹಿಂದಿಗಿಂತ ಅದೆಷ್ಟೋ ಪಟ್ಟು ಸುಲಭ”, ಎಂದಿದ್ದರು ಫ್ರಾಂಕ್.

ಫ್ರಾಂಕ್ ಅಬೆಗ್ನೇಲರ ಹರಟೆಯ ಧಾಟಿಯ ಮಾತು ಇಂದು ನಮ್ಮ ನಡುವಿನ ಸತ್ಯವಾಗಿರುವುದು ಒಂದು ದೊಡ್ಡ ದುರಂತ!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತುಮತ್ತುಮುಸ್ಸಂಜೆ ಮಾತುಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article