ಧರ್ಮಸ್ಥಳ ಪ್ರಕರಣ: ಬೆಳಗಾವಿ ಅಧಿವೇಶನದಲ್ಲಿ ತನಿಖಾ ವರದಿಯ ಮಾಹಿತಿ ಪ್ರಕಟ: ಗೃಹ ಸಚಿವ ಡಾ.ಜಿ. ಪರಮೇಶ್ವರ

Most read

ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್​ಐಟಿ) ಸರ್ಕಾರಕ್ಕೂ ವರದಿ ನೀಡಲಿದ್ದು, ಬೆಳಗಾವಿ ಅಧಿವೇಶನದಲ್ಲಿ ವರದಿಯ ಅಂಶಗಳನ್ನು ವಿವರಿಸುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆ ನಡೆಸುತ್ತಿರುವ  ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದಾರೆ. ಆ ನಂತರವಷ್ಟೇ ಸತ್ಯಾಂಶ ತಿಳಿದು ಬರಲಿದೆ. ಸರ್ಕಾರವೇ ಎಸ್‌ಐಟಿ ರಚಿಸಿದ್ದು, ಸರ್ಕಾರಕ್ಕೂ ಎಸ್‌ ಐಟಿ ವರದಿ ನೀಡಲಿದೆ. ವರದಿ ಬಂದ ಬಳಿಕ ಈ ಪ್ರಕರಣದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದಿವೆ? ಏನೆಲ್ಲಾ ಷಡ್ಯಂತ್ರ ನಡೆದಿದೆ, ಯಾರು ಯಾರು ಕಾರಣ ಎಂಬ ಸತ್ಯ ಬೆಳಕಿಗೆ ಬರಲಿದೆ ಎಂದು ತಿಳಿಸಿದರು.

ದರೋಡೆಕೋರರ ಸುಳಿವು ಇದೆ: ಬೆಂಗಳೂರಿನಲ್ಲಿ ಎಟಿಎಂ ವಾಹನ ಅಡ್ಡಗಟ್ಟಿ ಏಳು ಕೋಟಿ ರೂ. ದರೋಡೆ ಮಾಡಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ದರೋಡೆಕೋರರನ್ನು ನಿಶ್ಚಿತವಾಗಿ ಹಿಡಿಯುತ್ತೇವೆ. ಈ ಪ್ರಕರಣ ನಡೆದಾಗ ಸಂಚರಿಸಿದ ವಾಹನಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.  ರಾಜ್ಯದ ಗಡಿ ದಾಟಿರುವ ವಾಹನಗಳ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ದರೋಡೆಕೋರರು ಕರ್ನಾಟಕದವರಾ ಅಥವಾ ಹೊರ ರಾಜ್ಯದವರೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ದರೋಡೆಕೋರರು ಕಾರಿಗೆ ನಕಲಿ ನಂಬರ್ ಫಲಕ ಅಳವಡಿಸಿಕೊಂಡಿದ್ದರು. ದರೋಡೆಕೋರರು ವಾಹನ ಬದಲಾಯಿಸಿದ್ದಾರೆ ಎನ್ನುವುದು ಖಚಿತವಾಗಿದೆ.  ಅವರು ರಾಜ್ಯದ ಗಡಿ ದಾಟಿದ್ದಾರೆಯೇ ಇಲ್ಲವೇ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.

More articles

Latest article