ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕವಾಗಿ ಶವಗಳನ್ನು ಹೂತು ಹಾಕಿರುವ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಅಥವಾ ನಾಳೆ ಪ್ರಕರಣದ ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಾಧ್ಯತೆ ಇದೆ. ಆದರೆ ಇದು ಆರೋಪಪಟ್ಟಿ (ಚಾರ್ಜ್‌ಶೀಟ್) ಆಗಿರುವುದಿಲ್ಲ ಎನ್ನುವುದು ಕುತೂಹಲಕಾರಿಯಾಗಿದೆ.
ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಎಸ್‌ಐಟಿ ಈ ವರದಿಯನ್ನು ಸಿದ್ಧಪಡಿಸಿದೆ. ಪ್ರಕರಣದ ತನಿಖಾಧಿಕಾರಿ ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ಕೋರ್ಟ್‌ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್ ಐಟಿ) ಬೆಳ್ತಂಗಡಿ ನ್ಯಾಯಾಲಯಕ್ಕೆ ಬಿಎನ್ ಎನ್ ಎಸ್ ಸೆ. 215ರ ಅಡಿಯಲ್ಲಿ ಸುಳ್ಳುಪ್ರಮಾಣಕ್ಕೆ ಸೀಮಿತವಾಗಿ ವರದಿ ಸಲ್ಲಿಸಲಿದೆ ಎಂದು ಬಿಎಲ್ ಆರ್ ಪೋಸ್ಟ್ ತಿಳಿಸಿದೆ. ಎಸ್ ಐಟಿ ವರದಿಯು ಸುಳ್ಳು ಆರೋಪ ಮಾಡಿರುವ ಸಾಕ್ಷಿದೂರುದಾರ ಚಿನ್ನಯ್ಯ ಮತ್ತು ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಅವರ ಪಾತ್ರ ಕುರಿತು ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಧ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯ ಹೊರತುಪಡಿಸಿ ಬೇರೆ ಯಾರನ್ನೂ ಬಂಧಿಸಿಲ್ಲ.
2025ರ ಜುಲೈ 3 ರಂದು ಧರ್ಮಸ್ಥಳದ ಮಾಜಿ ಸ್ವಚ್ಚತಾ ಕಾರ್ಮಿಕ ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾನೆ. ತಾನು ಕೆಲಸ ಮಾಡುತ್ತಿದ್ದ 1995 ರಿಂದ 2014ರವರೆಗೆ ಲೈಂಗಿಕ ಕೃತ್ಯಗಳನ್ನು ಎಸಗಿ ನಂತರ ತನ್ನಿಂದ ನೂರಾರು ಶವಗಳನ್ನು ಹೂತು ಹಾಕಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಕನಿಷ್ಠ 13 ಸ್ಥಳಗಳನ್ನು ಗುರುತಿಸುವುದಾಗಿ ಹೇಳಿರುತ್ತಾನೆ.
2025ರ ಜುಲೈ 11 ರಂದು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಎದುರು ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ಸ್ವಯಂ ಹೇಳಿಕೆಯನ್ನು ದಾಖಲಿಸಿರುತ್ತಾನೆ.ಈ ಸಂದರ್ಭದಲ್ಲಿ ಆತ ತಲೆಬುರುಡೆ ಮತ್ತು ಕೆಲವು ಮೂಳೆಗಳನ್ನು ಹಾಜರುಪಡಿಸಿರುತ್ತಾನೆ.
ಎಸ್ ಐಟಿ ತನಿಖೆಗೆ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗವು 14.07.2025ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿತ್ತು. ಕಳೆದ 20ಕ್ಕೂ, ಹೆಚ್ಚು ವರ್ಷಗಳಿಂದ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳು ಕೇಳಿ ಬರುತ್ತಿವೆ. ಆದ್ದರಿಂದ ಎಸ್ ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ಕೋರಿತ್ತು.
ಆಯೋಗದ ಮನವಿಗೆ ಸ್ಪಂದಿಸಿದ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲಿಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ 39/2025, ಕಲಂ 211 (ಎ), ಬಿಎನ್ಎಸ್ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ಜುಲೈ 19 ರಂದು ರಚಿಸಿ ಆದೇಶಿಸಿತ್ತು.
ಚಿನ್ನಯ್ಯನನ್ನು ಅಗಸ್ಟ್ 23 ರಂದು ಬಂಧಿಸಲಾಗುತ್ತದೆ. ಈತ ಹಾಜರುಪಡಿಸಿದ ತಲೆ ಬುರುಡೆ ಮನುಷ್ಯರದ್ದು ಅಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯಲ್ಲಿ ಸಾಬೀತಾಗುತ್ತದೆ. ನಂತರ ಚಿನ್ನಯ್ಯ ತನ್ನ ಮೊದಲ ಆರೋಪಗಳೆಲ್ಲವೂ ಸುಳ್ಳು ಮತ್ತು ಒತ್ತಡಕ್ಕೆ ಒಳಗಾಗಿ ಹೇಳಿಕೆ ನೀಡಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಾನೆ.
ಬಂಧನದ ನಂತರ ಚಿನ್ನಯ್ಯ ಮತ್ತೊಂದು ಹೇಳಿಕೆ ದಾಖಲಿಸಲು ನಿರ್ಧರಿಸುತ್ತಾನೆ. ಸೆಪ್ಟಂಬರ್ 23, 25 ಮತ್ತುಸೆ. 27 ರಂದು ಬೇರೆಯವರ ಚಿತಾವಣೆಗೆ ಒಳಗಾಗಿ ಸುಳ್ಳು ಹೇಳಿಕೆ ನೀಡಿದ್ದಾಗಿ ಹೇಳಿಕೆ ನೀಡಿರುತ್ತಾನೆ.
ಬಿಎನ್ ಎಸ್ ಎಸ್ ಸೆ. 35 (3) ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೌಜನ್ಯ ಪರ ಹೋರಾಟಗಾರರಿಗೆ ಎಸ್ ಐಟಿ ನೋಟಿಸ್ ನೀಡುತ್ತದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ (39/2025) ರದ್ದುಪಡಿಸುವಂತೆ ಸೌಜನ್ಯ ಪರ ಹೋರಾಟಗಾರರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಹೈಕೋರ್ಟ್ ನವಂಬರ್ 12 ರವರೆಗೆ ತಡೆಯಾಜ್ಞೆ ನೀಡುತ್ತದೆ. ನಂತರ ಹೈಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೋರಾಟಗಾರರಿಗೆ ಯಾವುದೇ ರೀತಿಯ ದೌರ್ಜನ್ಯ ಎಸಗದಂತೆ ನಿರ್ದೇಶನ ನೀಡುತ್ತದೆ.
ಎಸ್ ಐಟಿಯು ಬುಧವಾರವೇ ವರದಿಯನ್ನು ಸಿದ್ದಪಡಿಸಿದ್ದು, ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಗೃಹ ಇಲಾಖೆಯ ವರದಿಗಳನ್ನು ಆಧರಿಸಿ ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಎದುರು ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ನೀಡಿರುವ ಮೊದಲ ಮತ್ತು ಎರಡನೇ ಹೇಳಿಕೆಗಳನ್ನು ಆಧರಿಸಿ ಎಸ್ ಐಟಿಯು ತುಂಬಾ ಕಷ್ಟಪಟ್ಟು ವರದಿಯನ್ನು ಸಿದ್ದಪಡಿಸಿದೆ. ಈ ಸಮಗ್ರ ವದಿಯಲ್ಲಿ ಚಿನ್ನಯ್ಯ ನೀಡಿದ ಮೊದಲ ಹೇಳಿಕೆ ನಂತರ ಸುಳ್ಳು ಎಂದು ಹೇಳೀದ್ದು, ಬೇರೆಯವರು ತಲೆ ಬುರುಡೆ ನೀಡಿದ್ದಾಗಿ ಹೇಳಿದ ವರದಿಗಳೆಲ್ಲವನ್ನೂ ಆಧರಸಿ ಈ ವರದಿ ನೀಡುತ್ತಿದೆ.
ತಲೆ ಬುರುಡೆ ಹಾಜರುಪಡಿಸಿದ ಚಿನ್ನಯ್ಯ ಈ ತಲೆಬುರುಡೆ ಅಪರಾಧ ಕೃತ್ಯಕ್ಕೆ ಒಳಗಾದ ಮಹಿಳೆಯದ್ದು ಎಂದು ಹೇಳಿದ್ದ. ತನಿಖೆಯಲ್ಲಿ ಈ ತಲೆಬುರುಡೆಯನ್ನು ಧರ್ಮಸ್ಥಳದ ಬಂಗ್ಲೆಗುಡ್ಡದಿಂದ ಆರಿಸಿ ತಂದದ್ದು ಮತ್ತು ಇದು ಪುರುಷನಿಗೆ ಸೇರಿದ ತಲೆ ಬುರುಡೆ ಎನ್ನುವುದು ಸಾಬೀತಾಗಿತ್ತು.
ಮುಂದುವರೆಯಲಿರುವ ಎಸ್ ಐಟಿ ತನಿಖೆ:
ಇಲ್ಲಿಗೆ ತನಿಖೆ ಮುಗಿಯುವುದಿಲ್ಲ. ತನಿಖೆ ಸಂದರ್ಭದಲ್ಲಿ ಬಂಗ್ಲೆಗುಡ್ಡ ಕಾಡಿನಲ್ಲಿ ದೊರೆತ ಏಳು ತಲೆಬುರುಡೆ ಮತ್ತು ಅಸಂಖ್ಯಾತ ಮೂಳೆಗಳನ್ನು ಕುರಿತು ತನಿಖೆ ಮುಂದುವರೆಸಲಿದೆ. ವಿಠಲ್ ಗೌಡ ಇದೇ ಅರಣ್ಯ ಪ್ರದೇಶದಿಂದ ಹುಡುಕಿ ತಲೆ ಬುರುಡೆಯನ್ನು ಚಿನ್ನಯ್ಯನಿಗೆ ನೀಡಿದ್ದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಜತೆಗೆ ಪತ್ತೆಯಾಗದ ಶವಗಳು (ಯುಡಿಆರ್) ಮತ್ತು ನಾಪತ್ತೆ ದೂರುಗಳನ್ನು ಕುರಿತು ತನಿಖೆ ಮುಂದುವರೆಸಲಿದೆ. ಎಸ್ ಐಟಿಯು ಇದುವರೆಗಿನ ತನಿಖಾ ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೂ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.

