ಸಿಸಿಬಿ ಪೊಲೀಸರ ಭರ್ಜರಿ ಬೇಟೆ: 14 ವಿದೇಶಿ ಪ್ರಜೆಗಳ ಬಂಧನ; ರೂ.7.7 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

Most read

ಬೆಂಗಳೂರು: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ 14 ವಿದೇಶಿ ಪ್ರಜೆಗಳು ಸೇರಿದಂತೆ 19 ಮಂದಿ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ರೂ.7.7 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ವಿದೇಶಿ ಪ್ರಜೆಗಳಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ.

 2.804 ಕೆಜಿ ಎಂಡಿಎಂಎ ಕ್ರಿಸ್ಟಲ್‌, 2.100 ಕೆ.ಜಿ. ಹೈಡ್ರೋಗಾಂಜಾ, ಒಂದು ಬೈಕ್‌ ಮತ್ತು ಏಳು ಮೊಬೈಲ್‌ ಫೋ ನ್‌ಗಳನ್ನು ಜಪ್ತಿ ಮಾಡಲಾಗಿದ್ದು ಇದರ ಮೌಲ್ಯ 7.7 ಕೋಟಿ ರೂ. ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ವರ್ತೂರು ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕೆನ್ಯಾದ ಮಹಿಳೆಯೊಬ್ಬಳನ್ನು ಬಂಧಿಸಿ ಆಕೆಯಿಂದ ರೂ.4.8 ಕೋಟಿ ಮೌಲ್ಯದ 2 ಕೆಜಿ ಎಂಡಿಎಂಎ ಕ್ರಿಸ್ಟಲ್‌ ವಶಪಡಿಸಿಕೊಳ್ಳಲಾಗಿದೆ. ಈಕೆ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಆಗಮಿಸಿ ಕಾಮನಹಳ್ಳಿಯಲ್ಲಿ ಬ್ಯೂಟಿ ಪಾರ್ಲರ್‌ ನಲ್ಲಿ ಕೆಲಸ ಮಾಡುತ್ತಾ, ಪರಿಚಿತ ಗ್ರಾಹಕರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಗುಂಟೆಪಾಳ್ಯ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್‌ ಮಾರಾಟದಲ್ಲಿ ತೊಡಗಿದ್ದ ನೈಜೀರಿಯಾ ದೇಶದ ಮಹಿಳಾ ಡ್ರಗ್‌ ಪೆಡ್ಲರ್‌ ನನ್ನು ಬಂಧಿಸಿ, ಆಕೆಯಿಂದ ಸುಮಾರು ರೂ. 1.52 ಕೋಟಿ ಮೌಲ್ಯದ 760 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, ಬೈಕ್‌ ಮತ್ತು ಹಲವು ಮೊಬೈಲ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹದೇವಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಐದು ಮಂದಿ ಡ್ರಗ್‌ ಪೆಡ್ಲರ್‌ ಗಳನ್ನು ಬಂಧಿಸಿ, ಸುಮಾರು 60 ಲಕ್ಷ ಮೌಲ್ಯದ 600 ಗ್ರಾಂ ಹೈಡ್ರೋ ಗಾಂಜಾ ಮತ್ತು ಐದು ಮೊಬೈಲ್‌  ಗಳನ್ನು ಜಪ್ತಿ ಮಾಡಲಾಗಿದೆ. ಇವರು ಬಿ. ನಾರಾಯಣಪುರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಪ್ರಮುಖ ಡ್ರಗ್‌ ಪೆಡ್ಲರ್‌ನ ನಿರ್ದೇಶನದಂತೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಇವರಲ್ಲಿ ಕೆಲವರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆದಿದೆ.
ಕೆಂಪೇಗೌಡ ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ವಿದೇಶಗಳಿಂದ ಪಾರ್ಸೆಲ್‌ ಗಳಲ್ಲಿ ಬಂದಿದ್ದ 1.5 ಕೋಟಿಯ ಮೌಲ್ಯದ 1.5 ಕೆ.ಜಿ. ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಥೈಲ್ಯಾಂಡ್‌, ಫ್ರಾನ್ಸ್ ಮೊದಲಾದ ದೇಶಗಳಿಂದ ಬಿಸ್ಕೆಟ್‌ ಮತ್ತು ಚಾಕೊಲೇಟ್‌ ಪ್ಯಾಕೆಟ್‌ ಗಳಲ್ಲಿ  ಡ್ರಗ್ಸ್‌ ಅಡಗಿಸಿ ಕಳುಹಿಸುತ್ತಿದ್ದರು. ಈ ಬಗ್ಗೆ ಎನ್‌ಡಿಪಿಎಸ್‌‍ ಕಾಯ್ದೆಯಡಿ ಕೆ.ಜಿ.ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article